ತಣ್ಣೀರುಬಾವಿ ಬೀಚ್: ಬ್ಲೂಫ್ಲ್ಯಾಗ್ ಬಗ್ಗೆ ಅಹವಾಲು ಸ್ವೀಕರಿಸಿದ ಜಿಲ್ಲಾಡಳಿತ
ಮಂಗಳೂರು, ಜ.4: ತಣ್ಣೀರುಬಾವಿ ಬೀಚ್ ಪ್ರದೇಶವನ್ನು ಬ್ಲೂ ಫ್ಲ್ಯಾಗ್ ಗುಣಮಣಕ್ಕೆ ಅಭಿವೃದ್ಧಿಪಡಿಸಲು ಸ್ಥಳೀಯರೊಂದಿಗೆ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯು ಮಂಗಳವಾರ ದ.ಕ. ಜಿಲ್ಲಾಕಾರಿ ಕಚೇರಿಯಲ್ಲಿ ನಡೆಯಿತು.
ಡಿಸಿಎಫ್ ಮತ್ತು ಸಿಆರ್‌ಜೆಡ್‌ನ ಪ್ರಾದೇಶಿಕ ನಿರ್ದೇಶಕ (ಪ್ರಭಾರ) ಡಾ.ದಿನೇಶ್ ಕುಮಾರ್ ವೈ.ಕೆ. ಯೋಜನೆ ಪ್ರಸ್ತಾಪಿಸಿ, ಸುಮಾರು 7 ಕೋ.ರೂ. ವೆಚ್ಚದ ಬ್ಲೂ ಫ್ಲ್ಯಾಗ್ ಯೋಜನೆಯನ್ನು ಸೊಸೈಟಿ ಫಾರ್ ಇನ್‌ಟಗ್ರೇಟೆಡ್ ಕೋಸ್ಟಲ್ ಮ್ಯಾನೇಜ್‌ಮೆಂಟ್ ಅನುಷ್ಠಾನಕ್ಕೆ ತರುತ್ತಿದೆ. ಈಗಾಗಲೇ ಟೆಂಡರ್ ನೀಡಿದ್ದು, ಸಾರ್ವಜನಿಕರ ಅಹವಾಲು ಸ್ವೀಕರಿಸಿ ವಿನ್ಯಾಸ ಮಾಡಲಾಗುತ್ತಿದೆ. ಪಡುಬಿದ್ರಿ ಬ್ಲೂ ಫ್ಲ್ಯಾಗ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಿದ್ದು, ಪರಿಸರಕ್ಕೆ ಹಾನಿಯಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದರು.
ಪಣಂಬೂರು ಬೀಚ್ ಅಭಿವೃದ್ಧಿ ಯೋಜನೆಯ ಮಾಜಿ ಸಿಇಒ ಯತೀಶ್ ಬೈಕಂಪಾಡಿ ಮಾತನಾಡಿ ಈಗಾಗಲೇ ಟೆಂಡರ್ ಕರೆಯಲಾಗಿದೆ. ಈಗ ಸಾರ್ವಜನಿಕ ಅಹವಾಲು ಸ್ವೀಕಾರ ಮಾಡುವುದಕ್ಕೆ ಅರ್ಥವಿಲ್ಲ. ಪಡುಬಿದ್ರೆಯಲ್ಲಿ ಸ್ಥಳೀಯರು ಮೀನುಗಾರಿಕೆ ಮಾಡದಂತೆ, ಅತ್ತ ತೆರಳದಂತೆ ತಡೆಯುತ್ತಿದೆ. ಅಂತಹ ಪ್ರಯತ್ನ ಇಲ್ಲಿ ಮಾಡಬಾರದು. ಸ್ಥಳೀಯ ಸಂಸ್ಕೃತಿ ಉಳಿಸಿಕೊಳ್ಳಬೇಕು. ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು ಎಂದರು.
ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಿ ಶ್ರೀಧರ್, ಬೋಳೂರು ಮೊಗವೀರ ಸಂಘದ ದೇವದಾಸ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ, ಪ್ರವಾಸೋದ್ಯಮ, ಮೀನುಗಾರಿಕೆ ಮತ್ತಿತರ ಇಲಾಖೆಯ ಅಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.







