ದೇಶದಲ್ಲಿ 2 ಸಾವಿರದ ಗಡಿ ದಾಟಿದ ಒಮೈಕ್ರಾನ್ ಸೋಂಕು

ಹೊಸದಿಲ್ಲಿ: ದೇಶದಲ್ಲಿ ಮಂಗಳವಾರ 153 ಹೊಸ ಒಮೈಕ್ರಾನ್ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 2043 ಆಗಿದೆ. ಮೇಘಾಲಯದಲ್ಲಿ ಕೂಡಾ ಒಮೈಕ್ರಾನ್ ಪ್ರಕರಣ ಪತ್ತೆಯಾಗುವುದರೊಂದಿಗೆ ದೇಶದ 24 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ ಈ ಸೋಂಕು ಹರಡಿದಂತಾಗಿದೆ.
ಮಹಾರಾಷ್ಟ್ರದಿಂದ ಗರಿಷ್ಠ ಸಂಖ್ಯೆಯ ಪ್ರಕರಣಗಳು ವರದಿಯಾಗಿದ್ದು, ತಜ್ಞರ ಪ್ರಕಾರ ಮುಂಬೈನಲ್ಲಿ ಪತ್ತೆಯಾಗಿರುವ ಹೊಸ ಕೋವಿಡ್-19 ಪ್ರಕರಣಗಳ ಪೈಕಿ ಶೇಕಡ 80ರಷ್ಟು ಪ್ರಕರಣಗಳು ಒಮೈಕ್ರಾನ್ ಪ್ರಬೇಧದ ವೈರಸ್ ಸೋಂಕು ಪ್ರಕರಣಗಳಾಗಿದ್ದು, ಶೇಕಡ 20ರಷ್ಟು ಡೆಲ್ಟಾ ಪ್ರಬೇಧದ ಸೋಂಕು ಎಂದು ಬಿಎಂಸಿ ಆಯುಕ್ತರು ಬಹಿರಂಗಪಡಿಸಿದ್ದಾರೆ. ಕಳೆದ ವಾರ ಮುಂಬೈನಲ್ಲಿ ಪತ್ತೆಯಾದ ಪ್ರಕರಣಗಳ ಪೈಕಿ ಶೇಕಡ 55ರಷ್ಟು ಪ್ರಕರಣಗಳು ಒಮೈಕ್ರಾನ್ ಪ್ರಕರಣಗಳಾಗಿದ್ದವು.
ಮಹಾರಾಷ್ಟ್ರದಲ್ಲಿ ಹೊಸದಾಗಿ 75 ಪ್ರಕರಣಗಳು ದೃಢಪಟ್ಟಿದ್ದು, ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 653 ಆಗಿದೆ. ಇದು ದೇಶದಲ್ಲೇ ಅತ್ಯಧಿಕ. ಮುಂಬೈ ನಗರದಲ್ಲೇ ಹೊಸದಾಗಿ 40 ಪ್ರಕರಣ ಪತ್ತೆಯಾಗಿದ್ದು, ಒಟ್ಟು ಸಂಖ್ಯೆ 408ಕ್ಕೇರಿದೆ. ಮಹಾರಾಷ್ಟ್ರ ಬಳಿಕ ಅತ್ಯಧಿಕ ಪ್ರಕರಣಗಳಿರುವ ದೆಹಲಿಯಲ್ಲಿ ಹೊಸದಾಗಿ 31 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸಂಖ್ಯೆ 382ಕ್ಕೇರಿದೆ. ಉತ್ತರ ಪ್ರದೇಶದಲ್ಲಿ ಒಟ್ಟು 31, ತೆಲಂಗಾಣದಲ್ಲಿ 94, ಆಂಧ್ರದಲ್ಲಿ 24 ಪ್ರಕರಣಗಳು ದೃಢಪಟ್ಟಿವೆ. ಮೇಘಾಲಯದಲ್ಲಿ 5 ಹಾಗೂ ಪಂಜಾಬ್‌ನಲ್ಲಿ 2 ಪ್ರಕರಣಗಳು ಹೊಸದಾಗಿ ಪತ್ತೆಯಾಗಿವೆ.







