ಜಾರ್ಖಂಡ್ ಮಾಜಿ ಶಾಸಕನ ಮೇಲೆ ಮಾವೋವಾದಿ ದಾಳಿ : ಇಬ್ಬರು ಅಂಗರಕ್ಷಕರ ಹತ್ಯೆ

ರಾಂಚಿ: ಮಾಜಿ ಶಾಸಕ ಗುರುಚರಣ್ ನಾಯಕ್ ಮೇಲೆ ಪಶ್ಚಿಮ ಸಿಂಘ್ ಭೂಮ್‌ನ ಮನೋಹರಪುರ ಎಂಬಲ್ಲಿ ಮಾವೋವಾದಿ ಉಗ್ರರು ದಾಳಿ ನಡೆಸಿದ್ದು, ಕಾದಾಟದಲ್ಲಿ ಮಾಜಿ ಶಾಸಕರ ಇಬ್ಬರು ಅಂಗರಕ್ಷಕರು ಹತರಾಗಿದ್ದಾರೆ. ಮತ್ತೊಬ್ಬ ಅಂಗರಕ್ಷಕ ತೀವ್ರವಾಗಿ ಗಾಯಗೊಂಡಿದ್ದಾರೆ. ಮಾವೋವಾದಿಗಳು ಮೂವರು ಅಂಗರಕ್ಷಕರಿಂದ ಶಸ್ತ್ರಾಸ್ತ್ರಗಳನ್ನೂ ಕಸಿದುಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
"ಲಭ್ಯ ಮಾಹಿತಿಗಳ ಪ್ರಕಾರ, ಝಿಲಾರುವಾ ಪ್ರೌಢಶಾಲೆಯಲ್ಲಿ ಆಯೋಜಿಸಿದ ಕ್ರೀಡಾ ಸ್ಪರ್ಧೆಗೆ ಮುಖ್ಯ ಅತಿಥಿಯಾಗಿ ಮಾಜಿ ಶಾಸಕ ಗುರುಚರಣ್ ನಾಯಕ್ ತೆರಳಿದ್ದರು. ಇದು ಸಂಜೆ 5.30ರ ವೇಳೆಗೆ ಮುಕ್ತಾಯವಾಗಿದ್ದು, ಅವರ ವಾಹನವನ್ನು ನಾಗರಿಕ ಸಮವಸ್ತ್ರದಲ್ಲಿದ್ದ ಮಾವೋವಾದಿಗಳು ಸುತ್ತುವರಿದರು. ಅಂಗರಕ್ಷಕರ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡರು. ಈ ವೇಳೆ ಶಂಕರ ನಾಯಕ್ ಹತ್ಯೆಯಾಗಿದ್ದು, ಮತ್ತೊಬ್ಬ ಸೈನಿಕ ನಾಪತ್ತೆಯಾಗಿದ್ದಾನೆ" ಎಂದು ಜಿಲ್ಲಾ ಪೊಲೀಸರು ಹೇಳಿದ್ದಾರೆ.
ಮಾಜಿ ಶಾಸಕರು ಒಬ್ಬ ಅಂಗರಕ್ಷಕರ ಜತೆ ತಪ್ಪಿಸಿಕೊಂಡು ಸೋನುವಾ ಪೊಲೀಸ್ ಠಾಣೆಗೆ ಸುರಕ್ಷಿತವಾಗಿ ತಲುಪಿದರು" ಎಂದು ಮಾಹಿತಿ ನೀಡಿದ್ದಾರೆ.
ಘಟನೆ ಬೆನ್ನಲ್ಲೇ ಈ ಪ್ರದೇಶದಲ್ಲಿ ಸಿಆರ್‌ಪಿಎಫ್ ಮತ್ತು ರಾಜ್ಯ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ. "ನಾನು ವಾಹನವನ್ನು ಏರುವ ಸಂದರ್ಭದಲ್ಲಿ ಈ ದಾಳಿ ನಡೆದಿದ್ದು, ದೊಡ್ಡ ಸಂಖ್ಯೆಯ ಜನಸಮೂಹ ಇದ್ದ ಹಿನ್ನೆಲೆಯಲ್ಲಿ ಇದರ ಲಾಭ ಪಡೆದು ಆ ಸ್ಥಳದಿಂದ ತಪ್ಪಿಸಿಕೊಳ್ಳುವುದು ಸಾಧ್ಯವಾಯಿತು" ಎಂದು ಮಾಜಿ ಶಾಸಕ ಹೇಳಿದ್ದಾರೆ. ಇಬ್ಬರು ಅಂಗರಕ್ಷಕರ ಮೃತದೇಹ ಪತ್ತೆಯಾಗಿವೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಗ್ರಾಮಸ್ಥರು ಹೇಳುವ ಪ್ರಕಾರ 25ಕ್ಕೂ ಹೆಚ್ಚು ಮಂದಿ ಮಾವೋವಾದಿ ಉಗ್ರರು ಈ ದಾಳಿಯಲ್ಲಿ ಪಾಲ್ಗೊಂಡಿದ್ದರು. ಈ ಹಿಂದೆಯೂ ನಾಯಕ್ ಅವರು ಆನಂದಪುರ ಎಂಬಲ್ಲಿ ಮಾವೋವಾದಿ ದಾಳಿಯಿಂದ ಪವಾಡಸದೃಶವಾಗಿ ಪಾರಾಗಿದ್ದರು. ಇವರಿಗೆ ಜೀವ ಬೆದರಿಕೆ ಹಾಕುವ ಬಿತ್ತಿಪತ್ರವನ್ನೂ ಇವರ ಮನೆಯ ಮುಂದೆ ಹಚ್ಚಲಾಗಿತ್ತು.







