1050ಕ್ಕೂ ಹೆಚ್ಚು ಮಕ್ಕಳನ್ನು ಬೆಳೆಸಿದ ʼಅನಾಥರ ತಾಯಿʼ, ಪದ್ಮಶ್ರೀ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್ ನಿಧನ

Photo: Twitter/Mahilacongress
ಪುಣೆ, ಜ. 5: ‘ಅನಾಥ ಮಕ್ಕಳ ತಾಯಿ’ ಎಂದೇ ಜನಪ್ರಿಯರಾಗಿದ್ದ ಸಾಮಾಜಿಕ ಕಾರ್ಯಕರ್ತೆ ಸಿಂಧುತಾಯಿ ಸಪ್ಕಾಲ್ ಅವರು ಹೃದಯಾಘಾತದಿಂದ ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಇಂದು ರಾತ್ರಿ 8 ಗಂಟೆಗೆ ನಿಧನರಾಗಿದ್ದಾರೆ. ಕಳೆದ ವರ್ಷ ಪದ್ಮಶ್ರೀ ಪ್ರಶಸ್ತಿ ಪಡೆದುಕೊಂಡಿದ್ದ ಅವರಿಗೆ 73 ವರ್ಷ ವಯಸ್ಸಾಗಿತ್ತು. ಅಪಾರ ಕಷ್ಟಗಳನ್ನು ಸಹಿಸುತ್ತಾ ಬಡತನದಲ್ಲೇ ಅವರು ಬೆಳೆದರು. ಅನಾಥ ಮಕ್ಕಳಿಗೆ ಹಲವು ಸಂಸ್ಥೆಗಳನ್ನು ಹುಟ್ಟು ಹಾಕಿರುವುದು ಅವರ ಹೆಸರನ್ನು ಅಜರಾಮರವಾಗಿಸಿದೆ.
ಮಹಾರಾಷ್ಟ್ರದ ಪುಣೆಯಲ್ಲಿರುವ ಗ್ಯಾಲಕ್ಸಿ ಕ್ಯಾರ್ ಆಸ್ಪತ್ರೆಯಲ್ಲಿ ಅವರನ್ನು ದಾಖಲಿಸಲಾಗಿತ್ತು. ಎರಡೂವರೆ ತಿಂಗಳ ಹಿಂದೆ ಅವರು ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ ನಿಧಾನವಾಗಿ ಗುಣಮುಖರಾಗುತ್ತಿದ್ದರು. ಆದರೆ, ಇದು ರಾತ್ರಿ ಸುಮಾರು 8 ಗಂಟೆಗೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಶೈಲೇಶ್ ಪುಂಟಂಬೇಕರ್ ಅವರು ಹೇಳಿದ್ದಾರೆ.
ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯಲ್ಲಿ 1948 ನವೆಂಬರ್ 14ರಂದು ಅವರು ಜನಿಸಿದರು. 4ನೇ ತರಗತಿ ಉತ್ತೀರ್ಣರಾದ ಬಳಿಕ ಶಾಲೆ ತ್ಯಜಿಸಬೇಕಾಗಿ ಬಂತು. ತನ್ನ 12ನೇ ವಯಸ್ಸಿಗಿಂತ ಮೊದಲೇ ಅವರು ತನಗಿಂತ ಅತೀಹಿರಿಯ ವ್ಯಕ್ತಿಯೋರ್ವನನ್ನು ವಿವಾಹವಾಗಿದ್ದರು. ಅನಂತರ ಮೂರು ಮಕ್ಕಳಿಗೆ ಜನ್ಮ ನೀಡಿದರು. ಬಳಿಕ ಗರ್ಭವತಿಯಾಗಿದ್ದಾಗ ಗಂಡ ತ್ಯಜಿಸಿ ಹೋಗಿದ್ದ. ಈ ಸಂದರ್ಭ ಅವರ ಸ್ವಂತ ತಾಯಿ ಹಾಗೂ ಅವರು ಬೆಳದ ಗ್ರಾಮ ಕೂಡ ನೆರವು ನೀಡಲು ನಿರಾಕರಿಸಿತ್ತು.
ತನ್ನ ಪುತ್ರಿಯರನ್ನು ಸಾಕಲು ಅವರು ಬಿಕ್ಷೆ ಬೇಡಬೇಕಾಯಿತು. ಆದರೂ ಈ ಎಲ್ಲ ಸಂಕಷ್ಟಗಳನ್ನು ಮೀರಿ ಅವರು ಅನಾಥ ಮಕ್ಕಳ ಕಲ್ಯಾಣಕ್ಕೆ ಕೆಲಸ ಮಾಡಲು ಆರಂಭಿಸಿದರು. 1,050ಕ್ಕೂ ಅಧಿಕ ಅನಾಥ ಮಕ್ಕಳನ್ನು ಬೆಳೆಸಿದರು. ಅವರಿಗೆ 207 ಅಳಿಯಂದಿರು ಹಾಗೂ 36 ಸೊಸೆಯಂದಿರು ಇದ್ದಾರೆ. ಸಕ್ಪಾಲ್ ಅವರು ಪದ್ಮಶ್ರೀ ಪ್ರಶಸ್ತಿ ಅಲ್ಲದೆ, 750ಕ್ಕೂ ಅಧಿಕ ಪ್ರಶಸ್ತಿಗಳು ಹಾಗೂ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದಿದ್ದಾರೆ. ತನಗೆ ಸಿಕ್ಕಿದ ಪ್ರಶಸ್ತಿಯ ಹಣವನ್ನು ಅವರು ಅನಾಥ ಮಕ್ಕಳಿಗೆ ಆಶ್ರಯ ತಾಣ ನಿರ್ಮಿಸಲು ಬಳಸುತ್ತಿದ್ದರು







