ಸಾನಿಧ್ಯ ಆಟಿಸಂ ಕೇಂದ್ರ ಉದ್ಘಾಟನೆ

ಮಂಗಳೂರು, ಜ.5: ಶಕ್ತಿನಗರದ ಭಿನ್ನ ಸಾಮಾರ್ಥ್ಯದ ಮಕ್ಕಳ ವಸತಿಯುತ ಶಾಲೆ ಮತ್ತು ತರಬೇತಿ ಸಂಸ್ಥೆಯಾಗಿರುವ ಸಾನಿಧ್ಯ ಸಂಸ್ಥೆಯ ಸಾನಿಧ್ಯ ಆಟಿಸಂ ಕೇಂದ್ರವನ್ನು ದ.ಕ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ವಸತಿ ಸೌಲಭ್ಯದೊಂದಿಗೆ ತರಬೇತಿಯನ್ನು ನೀಡುವ ಸಾನ್ನಿಧ್ಯ ಸಂಸ್ಥೆಯಲ್ಲಿ 25 ವರ್ಷ ವಯಸ್ಸಿನವರಿಗೆ ಮಾತ್ರವೇ ಸರಕಾರದಿಂದ ಅನುದಾನ ದೊರಕುತ್ತಿದ್ದು, ಜಿಲ್ಲೆಗೆ ಭೇಟಿ ನೀಡಲಿರುವ ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿಯವರನ್ನು ಸಂಸ್ಥೆಗೆ ಕರೆತಂದು ಎಲ್ಲಾ ವಿಶೇಷ ಚೇತನರಿಗೂ ಸೌಲಭ್ಯ ದೊರಕಿಸುವ ನಿಟ್ಟಿನಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು ಎಂದರು.
ವಿಶೇಷ ಮಕ್ಕಳಿಗೆ ಒಂದೆಡೆ ಕೂರಿಸಿ, ಅವರಿಗೆ ಕಲಿಸುವುದು ಬಹಳ ಕಷ್ಟಕರ. ಆದರೆ ಸಾನ್ನಿಧ್ಯದಲ್ಲಿ ವಿಶೇಷ ಮಕ್ಕಳ ಸುಪ್ತ ಪ್ರತಿಭೆಗೆ ಪೋಷಣೆ ನೀಡಿ ಮುಖ್ಯವಾಹಿನಿಗೆ ತರುವ ಕೆಲಸವೂ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವ ಶಿಕ್ಷಕರ ಶ್ರಮ ಈ ನಿಟ್ಟಿನಲ್ಲಿ ಅಪರೂಪದ್ದು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಕದ್ರಿ ಕ್ಷೇತ್ರದ ದೇರೆಬೈಲ್ ವಿಠಲದಾಸ್ ತಂತ್ರಿ ಮಾತನಾಡಿ, ಸಾನ್ನಿಧ್ಯಕ್ಕೆ ಪ್ರವೇಶ ಪವಿತ್ರ ಕ್ಷೇತ್ರಕ್ಕೆ ಪ್ರವೇಶಿಸಿದ ಅನುಭವ ನೀಡಿದೆ. ದೇವಾಲಯ, ಮಸೀದಿ, ಚರ್ಚ್‌ಗಳಲ್ಲಿ ದೇವರ ಅನುಗ್ರಹಕ್ಕಾಗಿ ಭಕ್ತರು ಭೇಟಿ ನೀಡುತ್ತಾರೆ. ಆದರೆ ಸಾನ್ನಿಧ್ಯವೆಂಬ ದೇವಾಲಯದಲ್ಲಿ ವಿಶೇಷ ಮಕ್ಕಳೆಂಬ ದೇವರನ್ನು ಕಣ್ಣೆದುರು ಕಂಡಂತಾಗಿದೆ ಎಂದು ಅವರು ಹೇಳಿದರು.
ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಸಾನ್ನಿಧ್ಯ ಸಂಸ್ಥೆಯ ಆಡಳಿತಾಧಿಕಾರಿ ಡಾ. ವಸಂತ ಕುಮಾರ್ ಶೆಟ್ಟಿ, 2003ರಲ್ಲಿ ಇಬ್ಬರು ಮಕ್ಕಳು ಒಬ್ಬ ವಿಶೇಷ ಶಿಕ್ಷಕಿಯೊಂದಿಗೆ ಆರಂಭಗೊಂಡ ಸಾನ್ನಿಧ್ಯ ವಸತಿ ಶಾಲೆಯಲ್ಲಿ ಇಂದು 5ರಿಂದ 52 ವಯಸ್ಸಿನ 166 ವಿಶೇಷ ವ್ಯಕ್ತಿಗಳಿದ್ದಾರೆ. ಇವರಿಗೆ ವಿಶೇಷ ಶಿಕ್ಷಕರು ಸೇರಿದಂತೆ 48 ಮಂದಿ ಸಿಬ್ಬಂದಿಯಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಲಹೆಗಾರರಾದ ಶಾಲಿನಿ ಪಂಡಿತ್, ಗಣೇಶ ಸೇವಾ ಟ್ರಸ್ಟ್‌ನ ಅಧ್ಯಕ್ಷ ಮಹಾಬಲ ಮಾರ್ಲ, ದಿನೇಶ್ ಆಳ್ವ ಮೊದಲಾದವರು ಉಪಸ್ಥಿತರಿದ್ದರು. ಸಹಾಯಕ ಆಡಳಿತಾಧಿಕಾರಿ ಸುಮ ಡಿಸಿಲ್ವ ಕಾರ್ಯಕ್ರಮ ನಿರೂಪಿಸಿದರು. ಗಣೇಶ ಸೇವಾ ಟ್ರಸ್ಟ್‌ನ ನಿರ್ದೇಶಕ ಮುಹಮ್ಮದ್ ಬಶೀರ್ ವಂದಿಸಿದರು.
ಗಮನ ಸೆಳೆದ ವಿಶೇಷ ಮಕ್ಕಳ ‘ಭಕ್ತ ಪ್ರಹ್ಲಾದ’ ಯಕ್ಷಗಾನ ಪ್ರದರ್ಶನಕಾರ್ಯಕ್ರಮದ ಆರಂಭದಲ್ಲಿ ಸಾನಿಧ್ಯ ವಿದ್ಯಾರ್ಥಿಗಳ ತಂಡ ಸ್ವಾಗತ ನೃತ್ಯದ ಮೂಲಕ ಸಭಿಕರನ್ನು ಸ್ವಾಗತಿಸಿದರು. ಬಳಿಕ ವಿಶೇಷ ಮಕ್ಕಳು ಭಕ್ತಪ್ರಹ್ಲಾದ ಯಕ್ಷಗಾನದ ತುಣುಕೊಂದನ್ನು ವೇದಿಕೆಯಲ್ಲಿ ಪ್ರದರ್ಶಿಸುವ ಮೂಲಕ ಕಲಾ ನೈಪುಣ್ಯವನ್ನು ಮೆರೆದರು.







