ಪಂಜಾಬ್ ಭೇಟಿ ಮೊಟಕುಗೊಳಿಸಿದ ಪ್ರಧಾನಿ: ಗಂಭೀರ ಭದ್ರತಾ ಲೋಪ
►ಪ್ರತಿಭಟನಕಾರರಿಂದ ರಸ್ತೆ ತಡೆ ಫ್ಲೈಓವರ್ನಲ್ಲಿ 20 ನಿಮಿಷ ಸಿಲುಕಿದ ಪ್ರಧಾನಿ ► ಫಿರೋಝ್ಪುರ ರ್ಯಾಲಿ ರದ್ದು

Photo: Twitter/@ANI
ಫಿರೋಝ್ಪುರ,ಜ.5: ಗಂಭೀರ ಭದ್ರತಾ ಲೋಪದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತನ್ನ ಬುಧವಾರದ ಪಂಜಾಬ್ ಭೇಟಿಯನ್ನು ಮೊಟಕುಗೊಳಿಸಿ ಹೊಸದಿಲ್ಲಿಗೆ ವಾಪಸಾಗಿದ್ದಾರೆ.
ಹುಸೈನಿವಾಲಾದಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ಪ್ರಧಾನಿಯವರು ಪ್ರಯಾಣಿಸುತ್ತಿದ್ದಾಗ ಕೆಲವು ಪ್ರತಿಭಟನಕಾರರು ರಸ್ತೆ ನಡೆಸಿದ್ದರಿಂದ ಅವರು ಸುಮಾರು 20 ನಿಮಿಷಗಳ ಕಾಲ ಫ್ಲೈಓವರ್ನಲ್ಲಿ ಸಿಲುಕಿಕೊಂಡಿದ್ದರು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಈ ಘಟನೆಯ ಬಳಿಕ ಫಿರೋಝ್ಪುರ ದ ಬಿಜೆಪಿ ರ್ಯಾಲಿ ಸೇರಿದಂತೆ ಪಂಜಾಬ್ನಲ್ಲಿ ಬುಧವಾರರ ನಡೆಯಲಿದ್ದ ಪ್ರಧಾನಿಯವರ ನಿಗದಿತ ಕಾರ್ಯಕ್ರಮಗಳು ರದ್ದಾಗಿರುವುದಾಗಿ ಮೂಲಗಳು ತಿಳಿಸಿವೆ.
ಪಂಜಾಬ್ನ ಭಟಿಂಡಾದಲ್ಲಿರುವ ಭೈಸಿಯಾನಾ ವಾಯುನೆಲೆಯಲ್ಲಿ ಬುಧವಾರ ಬಂದಿಳಿದ ಪ್ರಧಾನಿಯವರು ಹುಸೈನಿವಾಲಾದಲ್ಲಿರುವ ಹುತಾತ್ಮರ ಸ್ವಾರಕಕ್ಕೆ ಭೇಟಿ ನೀಡಲು ಹೆಲಿಕಾಪ್ಟರ್ನಲ್ಲಿ ತೆರಳುವವರಿದ್ದರು. ಆದರೆ ಮಳೆ ಹಾಗೂ ಗೋಚರತೆ ತೀರಾ ಕಡಿಮೆ ಇದ್ದುದರಿಂದ ಪ್ರಧಾನಿಯವರು ವಾತಾವರಣ ಶುಭ್ರವಾಗಲು 20 ನಿಮಿಷಗಳವರೆಗೆ ಕಾದರು.
ಹವಾಮಾನದಲ್ಲಿ ಸುಧಾರಣೆಯಾಗದೆ ಇದ್ದಾಗ, ಅವರು ರಸ್ತೆ ಮಾರ್ಗವಾಗಿ ತೆರಳಿ, ಹುಸೈನಿವಾಲಾದಲ್ಲಿರುವದ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಲು ನಿರ್ಧರಿಸಿದರು. ಇದರಿಂದಾಗಿ ಪ್ರಧಾನಿ ಪ್ರಯಾಣಕ್ಕೆ 2 ತಾಸು ಅಧಿಕ ಸಮಯಬೇಕಾಯಿತು ಅವರ ಪ್ರಯಾಣಕ್ಕೆ ಬೇಕಾದ ಭದ್ರತಾ ಏರ್ಪಾಡು ಗಳನ್ನು ಪಂಜಾಬ್ ಪೊಲೀಸ್ ಮಹಾನಿರ್ದೇಶಕರು ದೃಢಪಡಿಸಿದ ಬಳಿಕ ಪ್ರಧಾನಿ ರಸ್ತೆಮಾರ್ಗವಾಗಿ ಹುಸೈನಿವಾಲಾಕ್ಕೆ ತೆರಳಿದರು.
ಹುಸೈನಿವಾಲಾದ ರಾಷ್ಟ್ರೀಯ ಹುತಾತ್ಮ ಸ್ಮಾರಕವು 30 ಕಿ.ಮೀ. ದೂರದಲ್ಲಿದ್ದಾಗ ರಸ್ತೆ ಮಧ್ಯೆ ಪ್ರಧಾನಿಯವರ ವಾಹನದ ಸಾಲು ಫ್ಲೈಓವರ್ ಒಂದನ್ನು ತಲುಪಿದಾಗ ಪ್ರತಿಭಟನಕಾರರ ಗುಂಪೊಂದು ರಸ್ತೆ ತಡೆ ನಡೆಸಿದ್ದರು. ಹೀಗಾಗಿ ಪ್ರಧಾನಿಯವರು ಸುಮಾರು 15-20 ನಿಮಿಷಗಳ ಕಾಲ ಫ್ಲೈಓವರ್ನಲ್ಲಿ ಸಿಲುಕಿಕೊಂಡಿದ್ದರು. ಭದ್ರತಾಲೋಪದ ಹಿನ್ನೆಲೆಯಲ್ಲಿ ಪ್ರಧಾನಿ ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ನ ಫಿರೋಝ್ಪುರ ಪಟ್ಟಣಕ್ಕೆ ಬುಧವಾರ ನೀಡಲಿದ್ದ ಭೇಟಿಯನ್ನು ಕೊನೆಕ್ಷಣದಲ್ಲಿ ರದ್ದುಪಡಿಸಿದ್ದಾರೆ. ಪ್ರಧಾನಿಯವರು ಫಿರೋಝ್ಪುರದಲ್ಲಿ 42,750 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಶಿಲಾನ್ಯಾಸ ಮಾಡಲಿದ್ದರು ಹಾಗೂ ಬಿಜೆಪಿಯ ಬೃಹತ್ ರ್ಯಾಲಿಯಲ್ಲಿ ಪಾಲ್ಗೊಳ್ಳುವವರಿದ್ದರು.
ಪ್ರಧಾನಿಯವರ ಪಂಜಾಬ್ ಭೇಟಿಯ ನಿಗದಿತ ವೇಳಾಪಟ್ಟಿ ಹಾಗೂ ಅವರ ಪ್ರವಾಸದ ಯೋಜನೆಯನ್ನು ಮುಂಚಿತವಾಗಿಯೇ ಪಂಜಾಬ್ ಸರಕಾರಕ್ಕೆ ತಿಳಿಸಲಾಗಿತ್ತು ಎಂದು ಕೇಂದ್ರ ಗೃಹ ಸಚಿವಾಲಯದ ಹೇಳಿಕೆ ತಿಳಿಸಿದೆ. ನಿಯಮಾವಳಿಗಳ ಪ್ರಕಾರ ಭದ್ರತೆ ಸೇರಿದಂತೆ ಪ್ರಧಾನಿಯವರ ಭೇಟಿಗೆ ಬೇಕಾದ ಪೂರ್ವ ಸಿದ್ಧತೆಗಳನ್ನು ಪಂಜಾಬ್ ಸರಕಾರ ಏರ್ಪಾಡು ಮಾಡಬೇಕಿತ್ತು. ರಸ್ತೆಯಲ್ಲಿ ಪ್ರಧಾನಿಯವರ ಸುರಕ್ಷಿತ ಪ್ರಯಾಣಕ್ಕಾಗಿ ಪಂಜಾಬ್ ಸರಕಾರವು ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಬೇಕಿತ್ತು. ಆದರೆ ಅದು ಯಾವುದೇ ಭದ್ರತಾಪಡೆಗಳನ್ನು ನಿಯೋಜಿಸಿರಲಿಲ್ಲ. ಭದ್ರತಾ ಲೋಪದ ಹಿನ್ನೆಲೆಯಲ್ಲಿ ಪ್ರಧಾನಿಯವರು ಭಟಿಂಡಾ ವಾಯುನೆಲೆಗೆ ವಾಪಸಾಗಲು ನಿರ್ಧರಿಸಿದರು ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.
ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಈ ಭದ್ರತಾ ಲೋಪವನ್ನು ಗಂಭಿಈರವಾಗಿ ಪರಿಗಣಿಸಿದ್ದು, ಈ ಬಗ್ಗೆ ಅದು ಪಂಜಾಬ್ ಸರಕಾರದಿಂದ ಸ್ಪಷ್ಟೀಕರಣವನ್ನು ಕೇಳಿದೆ. ಪ್ರಧಾನಿಯವರ ನಿಕಟವಾದ ಭದ್ರತಾ ವ್ಯವಸ್ಥೆ ಹೊಣೆಗಾರಿಕೆ ವಿಶೇಷ ರಕ್ಷಣಾ ತಂಡದ್ದಾಗಿದೆಯಾದರೂ, ಸಮಗ್ರ ಭದ್ರತೆಯನ್ನು ರಾಜ್ಯಪೊಲೀಸರೇ ಖಾತರಿಪಡಿಸಬೇಕಾಗುತ್ತದೆ. ಮೋದಿಯವರ ಪಂಜಾಬ್ ಭೇಟಿ ಸಂದರ್ಭದಲ್ಲಿ ಪ್ರತಿಭಟನೆ ನಡೆಸುವ ಉದ್ದೇಶವನ್ನು ರೈತರು ಹೊಂದಿರುವುದು ಕೆಲವು ದಿನಗಳ ಹಿಂದೆಯೇ ಸ್ಪಷ್ಟವಾಗಿತ್ತು. ಆದಾಗ್ಯೂ ಪ್ರಧಾನಿಯವರ ಪ್ರಯಾಣದ ದಾರಿಯಲ್ಲಿ ಭದ್ರತಾ ತಪಾಸಣೆ ನಡೆಸಲು ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯದ ಹೇಳಿಕೆ ತಿಳಿಸಿದೆ.
ಕೇಂದ್ರದ ವಿವಾದಾತ್ಮಕ ಕೃಷಿ ಕಾಯ್ದೆಗಳ ರದ್ದತಿಯ ಬಳಿಕ ಮೋದಿಯವರು ಪಂಜಾಬ್ಗೆ ಭೇಟಿ ನೀಡುತ್ತಿರುವುದು ಇದು ಮೊದಲ ಸಲವಾಗಿದೆ.
ಇಂದು ಬೆಳಗ್ಗೆ ಭಟಿಂಡಾದ ಭೈಸಿಯಾನಾ ವಾಯುಪಡೆಯ ವಿಮಾನನಿಲ್ದಾಣದಲ್ಲಿ ಬಂದಿಳಿದ ಮೋದಿಯವರನ್ನು ರಾಜ್ಯದ ವಿತ್ತ ಸಚಿವ ಮನ್ಪ್ರೀತ್ ಬಾದಲ್ ಸ್ವಾಗತಿಸಿದ್ದರು. ತನ್ನ ಪಂಜಾಬ್ ಭೇಟಿಗೆ ಕೆಲವೇ ತಾಸುಗಳ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ‘‘ ಪಂಜಾಬ್ನ ಸೋದರಿಯರು ಹಾಗೂ ಸೋದರರನ್ನು ಭೇಟಿಯಾಗುವುದನ್ನು ಎದುರುನೋಡುತ್ತಿದ್ದೇನೆ. ಫಿರೋಝ್ಪುರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 42,750 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸಗೈಯಲಾಗುವುದು. ಈ ಯೋಜನೆಗಳಿಂದ ಪಂಜಾಬ್ ಜನತೆಯ ಜೀವನಮಟ್ಟ ಸುಧಾರಣೆಯಾಗಲಿದೆ’’ ಎಂದು ಹೇಳಿದ್ದರು. ಪ್ರಮುಖ ಧಾರ್ಮಿಕ ಕೇಂದ್ರಗಳನ್ನು ಸಂಪರ್ಕಿಸಲು ಎರಡು ಬೃಹತ್ ರಸ್ತೆ ಕಾರಿಡಾರ್ ಯೋಜನೆಗಳಿಗೂ ಅವರು ಶಿಲಾನ್ಯಾಸಗೈಯಲಿದ್ದರು.
ಮೋದಿಯವರು 2015ರಲ್ಲಿ ಕೊನೆಯ ಬಾರಿಗೆ ಹುಸೈನಿವಾಲಾಗೆ ಭೇಟಿ ನೀಡಿದ್ದರು. ಸ್ವಾತಂತ್ರ ಹೋರಾಟಗಾರರಾದ ಭಗತ್ ಸಿಂಗ್, ರಾಜ್ ಗುರು ಹಾಗೂ ಸುಖ್ದೇವ್ ಅವರನ್ನು ಲಾಹೋರ್ನಲ್ಲಿ 1931ರ ಮಾರ್ಚ್ನಲ್ಲಿ ಬ್ರಿಟಿಶ್ ಸರಕಾರ ಗಲ್ಲಿಗೇರಿಸಿದ ಬಳಿಕ ಈ ಮೂವರ ಅಂತ್ಯಕ್ರಿಯೆಗಳನ್ನು ಹುಸೈನಿಪುರದಲ್ಲಿ ನಡೆಸಲಾಗಿತ್ತು.
ಬಿಜೆಪಿ ಆಕ್ರೋಶ
ಪಂಜಾಬ್ ನ ಹುಸೈನಿವಾಲಾ ಸಮೀಪ ಪ್ರತಿಭಟನಕಾರರು ರಸ್ತೆ ತಡೆ ಒಡ್ಡಿದ್ದರಿಂದ ಪ್ರಧಾನಿಯವರು 15-20 ನಿಮಿಷಗಳ ಕಾಲ ಫ್ಲೈಓವರ್ನಲ್ಲಿ ಸಿಕ್ಕಿಹಾಕಿಕೊಂಡ ಘಟನೆಗೆ ಭಾರತೀಯ ಜನತಾಪಕ್ಷ ತೀವ್ರ ಕಳವಳ ವ್ಯಕ್ತಪಡಿಸಿದೆ.
ಇತ್ತೀಚಿನ ವರ್ಷಗಳಲ್ಲಿಯೇ ಭಾರತದ ಪ್ರಧಾನಿಗೆ ಆಗಿರುವಂತಹ ಅತಿ ದೊಡ್ಡ ಭದ್ರತಾ ಲೋಪ ಇದಾಗಿದೆ ಎಂದು ಅದು ಆಕ್ರೋಶ ವ್ಯಕ್ತಪಡಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷವು ಪ್ರಧಾನಿಯವರ ಪ್ರಯಾಣದ ದಾರಿಯನ್ನು ಕೊನೆಕ್ಷಣದಲ್ಲಿ ಬದಲಾಯಿಸಲು ಅವರ ಭದ್ರತಾ ತಂಡವು ಯಾಕೆ ಅನುಮತಿ ನೀಡಿತೆಂಬುದನ್ನು ಪ್ರಶ್ನಿಸಿದೆ.
ಈ ಮಧ್ಯೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರು ಮಾಡಿದ ಸರಣಿ ಟ್ವೀಟ್ಗಳಲ್ಲಿ ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ಸಿಂಗ್ ಚನ್ನಿ ವಿರುದ್ಧ ತೀವ್ರ ಟೀಕಾ ಪ್ರಹಾರ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿ ತಾನು ಚನ್ನಿಯವರಿಗೆ ಹಲವಾರು ಬಾರಿ ದೂರವಾಣಿ ಕರೆಗಳನ್ನು ಮಾಡಿದ್ದರೂ ಅದನ್ನು ಅವರು ಸ್ವೀಕರಿಸಲು ನಿರಾಕರಿಸಿದ್ದರು ಎಂದು ನಡ್ಡಾ ಆರೋಪಿಸಿದ್ದಾರೆ.
ಪ್ರಧಾನಿಯವರ ಪಂಜಾಬ್ ಭೇಟಿಯ ಸಂದರ್ಭದ ಭದ್ರತಾ ಏರ್ಪಾಡುಗಳಲ್ಲಿ ಯಾವುದೇ ನ್ಯೂನತೆಗಳಿರಲಿಲ್ಲ. ಭದ್ರತಾ ಉಲ್ಲಂಘನೆಯ ಆರೋಪಗಳು ಆಧಾರರಹಿತವಾದವು. ಬಿಜೆಪಿಯ ಫಿರೋಝ್ಪುರ ರ್ಯಾಲಿಯು ಫ್ಲಾಪ್ ಶೋ ಆಗಲಿದೆಯೆಂಬುದು ಪ್ರಧಾನಿಗೆ ತಿಳಿದಿತ್ತು. ಹೀಗಾಗಿ ಅವರು ವಾಪಸಾಗಲು ನಿರ್ಧರಿಸಿದರು.
-ರಾಜ್ ಕುಮಾರ್ ವೆರ್ಕಾ
ಪಂಜಾಬ್ ಸಚಿವ
ಪ್ರಧಾನಿಯವರ ಪಂಜಾಬ್ ಭೇಟಿಯ ಸಂದರ್ಭ ಯಾವುದೇ ಭದ್ರತಾ ಲೋಪವಾಗಿಲ್ಲ. ಮೋದಿಯವರು ವಾಯುಮಾರ್ಗವಾಗಿ ಪ್ರಯಾಣಿಸುವ ಯೋಜನೆಯನ್ನು ಹೊಂದಿದ್ದರು. ಆದರೆ ನಮಗೆ (ರಾಜ್ಯ ಸರಕಾರಕ್ಕೆ) ತಿಳಿಸದೆಯೇ ಅವರು ರಸ್ತೆ ಮಾರ್ಗವಾಗಿ ಪ್ರಯಾಣಿಸಿದ್ದರು.
-ಚರಣ್ಜಿತ್ ಸಿಂಗ್ ಚನ್ನಿ
ಪಂಜಾಬ್ ಮುಖ್ಯಮಂತ್ರಿ
ಪ್ರಧಾನಿಯ ಫಿರೋಝ್ಪುರ ರ್ಯಾಲಿ ಮುಂದೂಡಿಕೆ
ಪಂಜಾಬ್ನ ಫಿರೋಝ್ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳಲಿದ್ದ ಬಿಜೆಪಿ ರ್ಯಾಲಿಯನ್ನು ಮುಂದೂಡಲಾಗಿದೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ತಿಳಿಸಿದ್ದಾರೆ. ಫಿರೋಝ್ಪುರ ದಲ್ಲಿ ರ್ಯಾಲಿ ನಡೆಯಲಿದ್ದ ಸ್ಥಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು, ಕೆಲವೊಂದು ಕಾರಣಗಳಿಗಾಗಿ ನರೇಂದ್ರ ಮೋದಿಯರಿಗೆ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲವೆಂದು ತಿಳಿಸಿದರು. ಪ್ರಧಾನಿಯವರ ಅವರು 100 ಹಾಸಿಗೆಗಳ ಪಿಜಿಐ ಸ್ಯಾಟಲೈಟ್ ಸೆಂಟರ್ ಆಸ್ಪತ್ರೆ ಸೇರಿದಂತೆ 490 ಕೋಟಿ ರೂ. ಗೂ ಅಧಿಕ ವೆಚ್ಚದ ಮೂರು ವೈದ್ಯಕೀಯ ಸಂಸ್ಥಾಪನೆಗಳಿಗೆ ಶಿಲಾನ್ಯಾಸ ಮಾಡುವವರಿದ್ದರು.







