ಮಂಗಳೂರು ಸಹಾಯಕ ಆಯುಕ್ತರ ಆದೇಶಕ್ಕೆ ನ್ಯಾಯಾಲಯ ತಡೆಯಾಜ್ಞೆ
ದ.ಕ.ಜಿಲ್ಲಾ ಸರಕಾರಿ ನೌಕರರ ಸಂಘದ ಜಮೀನು ವಿವಾದ
ಮಂಗಳೂರು, ಜ.5: ನಗರದ ಹೃದಯಭಾಗದಲ್ಲಿರುವ ಮಂಗಳೂರು ಮಿನಿ ವಿಧಾನಸೌಧ ಕಟ್ಟಡದ ಬಳಿಯ ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘದ ಸ್ವಾಧೀನ ಮತ್ತು ಒಡೆತನಕ್ಕೊಳಪಟ್ಟ ಅತ್ತಾವರ ಗ್ರಾಮದ ಸರ್ವೆ ನಂ.278/2ಬಿ-ಗೆ ಒಳಪಟ್ಟ 33 ಸೆಂಟ್ಸ್ ಜಮೀನಿನ ವಿವಾದಕ್ಕೆ ಸಂಬಂಧಿಸಿ ಮಂಗಳೂರು ಸಹಾಯಕ ಆಯುಕ್ತರ ನ್ಯಾಯಾಲಯದ ಆದೇಶಕ್ಕೆ ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಈ ಜಮೀನಿನ ಪಹಣಿಯನ್ನು ರದ್ದುಪಡಿಸಿ ಸರಕಾರದ ಹೆಸರಿಗೆ ಮಾಡಿಸುವಂತೆ ಮತ್ತು ಸ್ಥಿರಾಸ್ಥಿಯಲ್ಲಿರುವ ಕಟ್ಟಡವನ್ನು ಜಿಲ್ಲಾ ಸಂಘದ ಸ್ವಾಧೀನದಿಂದ ಬಿಡಿಸಿ ಸರಕಾರದ ವಶಕ್ಕೆ ಪಡೆದು ಅಕ್ರಮ ಎಸಗಿದ ಸಂಬಂಧಪಟ್ಟ ಜಿಲ್ಲಾ ಪದಾಧಿಕಾರಿಗಳ ವಿರುದ್ಧ ಭೂ ಕಂದಾಯ ಕಾಯ್ದೆ 192-ಎ ಪ್ರಕಾರ ಕ್ರಮ ಕೈಗೊಳ್ಳಲು ಮಂಗಳೂರಿನ ತಹಶೀಲ್ದಾರ್‌ಗೆ ಮಂಗಳೂರಿನ ಸಹಾಯಕ ಆಯುಕ್ತರು ಮತ್ತು ಉಪವಿಭಾಗ ದಂಡಾಧಿಕಾರಿಗಳ ನ್ಯಾಯಾಲಯವು 2021ರ ನವೆಂಬರ್ 30ರಂದು ಆದೇಶ ನೀಡಿತ್ತು.
1958ರಲ್ಲಿ ಮೈಸೂರಿನ ಉಪವಿಭಾಗಾಧಿಕಾರಿಯ ಆದೇಶದಂತೆ ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘಕ್ಕೆ ಮಂಜೂರಾದ 33 ಸೆಂಟ್ಸ್ ಜಮೀನಿನ ದಾಖಲಾತಿಯು ಅತ್ತಾವರ ಗ್ರಾಮದ ಸಪ್ಲಿಮೆಂಟ್ ಅಡಂಗಲ್ನಲ್ಲಿ ನಮೂದಿಸಲ್ಪಟ್ಟಿದೆ. ಜಮೀನಿನ ಪಹಣಿಯನ್ನು ಜಿಲ್ಲಾ ಸಂಘದ ಹೆಸರಿಗೆ (ಎಂ.ಆರ್. ನಂ.10/91-92) ಸೆಪ್ಟಂಬರ್ 9ರಂದು 1991ರಲ್ಲಿ ದಾಖಲಿಸಲಾಗಿತ್ತು.
ಜಮೀನಿನ ಒಡೆತನದ ವಿವಾದದ ಕುರಿತು ಕಂದಾಯ ನಿರೀಕ್ಷಕರ ವರದಿಯನ್ನು ಪಡೆದ ಮಂಗಳೂರು ತಹಶೀಲ್ದಾರರು ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ಪ್ರಕರಣ ಸಂಖ್ಯೆ ಎಲ್‌ಎನ್‌ಡಿ/ಪಿಡಿಆರ್/117/2018-19ರಂತೆ ಮೇಲ್ಮನವಿ ದಾಖಲಿಸಿದ್ದರು. ವಿಚಾರಣೆಯ ವೇಳೆಯಲ್ಲಿ ಮಂಜೂರಾತಿ ಆದೇಶವನ್ನು ಹಾಜರುಪಡಿಸಿಲ್ಲ ಎಂಬ ಕಾರಣಕ್ಕೆ ಜಮೀನು ಸರಕಾರಕ್ಕೆ ಸೇರಿದೆ ಎಂಬ ತೀರ್ಮಾನಕ್ಕೆ ಸಹಾಯಕ ಆಯುಕ್ತರ ನ್ಯಾಯಾಲಯವು ಬಂದಿತ್ತು.
ಕಳೆದ ಆರು ದಶಕಗಳಿಂದ ತನ್ನ ಸ್ವಾಧೀನದಲ್ಲಿದ್ದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಕಟ್ಟಡ ಸಹಿತ ಸ್ಥಿರಾಸ್ತಿಯನ್ನು ರಕ್ಷಿಸಿಕೊಳ್ಳಲು ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಎ.ಸಿ. ಕೋರ್ಟಿನ ಆದೇಶ ರದ್ದುಪಡಿಸುವಂತೆ ಜಿಲ್ಲಾ ಸಂಘವು ದಾವೆ ಹೂಡಿತ್ತು. ಈ ದಾವೆಯಲ್ಲಿ ಸಲ್ಲಿಸಲಾದ ಮಧ್ಯಂತರ ಅರ್ಜಿಯ ಮೇಲೆ ಆದೇಶ ಹೊರಡಿಸಿದ ನ್ಯಾಯಾಲಯವು ದಾವೆಯ ಮುಂದಿನ ವಾಯ್ದೆಯವರೆಗೆ ಸಹಾಯಕ ಆಯುಕ್ತರ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.







