ಕೋಡಿ ಕಡಲ ಕಿನಾರೆಯ ‘ಫ್ರೆಂಡ್ಸ್ ಉದ್ಯಾನವನ’ ಉದ್ಘಾಟನೆ

ಕುಂದಾಪುರ, ಜ.5: ಕೋಡಿಯ ಫ್ರೆಂಡ್ಸ್ ಯುವ ಸಂಘಟನೆ ವತಿಯಿಂದ ಕೋಡಿ ಸರಕಾರಿ ಆಸ್ಪತ್ರೆಯ ಬಳಿ ಕಡಲ ಕಿನಾರೆಯಲ್ಲಿ ನಿರ್ಮಿಸಿದ ನೂತನ ಫ್ರೆಂಡ್ಸ್ ಉದ್ಯಾನವನವನ್ನು ಕುಂದಾಪುರದ ಡಿವೈಎಸ್‌ಪಿ ಶ್ರೀಕಾಂತ್ ಕೆ. ಬುಧವಾರ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಕುಂದಾಪುರ ಪುರಸಭಾ ಮುಖ್ಯಾಧಿಕಾರಿ ಗೋಪಾಲ ಕೃಷ್ಣ ಶೆಟ್ಟಿ ಮಾತನಾಡಿ, 3.5ಕಿ.ಮೀ. ಉದ್ದದ ಸುಂದರ ಕಡಲತಡಿಯನ್ನು ಹೊಂದಿದ ಕೋಡಿಯಲ್ಲಿ ಸುಂದರ ಉದ್ಯಾನವನ ನಿರ್ಮಾಣಗೊಂಡಿದೆ. ಇಲ್ಲಿಯ ಅಭಿವೃದ್ಧಿಗಾಗಿ ಪುರಸಭೆ ಸರ್ವ ಸಹಕಾರ ನೀಡುತ್ತದೆ. ದೀಪದ ವ್ಯವಸ್ಥೆ ಮಾಡಲಾಗಿದ್ದು, ದಾರಿದೀಪ, ಸೀ ವಾಕ್ನಲ್ಲಿ ಬೆಳಕಿನ ವ್ಯವಸ್ಥೆ, ಸಿಸಿ ಕ್ಯಾಮೆರಾ ಅಳವಡಿಕೆ, ಪರಿಸರದ ಶೌಚಾಲಯರಹಿತ ಮನೆಗಳಿಗೆ ಶೌಚಾಲಯ, ರಸ್ತೆಗಳ ಪಕ್ಕ ಬೀದಿ ದೀಪ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಪುರಸಭಾ ಸದಸ್ಯರಾದ ಲಕ್ಷ್ಮೀ ಬಾಯಿ, ನಾಗರಾಜ ಕಾಂಚನ್, ನಿವೃತ್ತ ಯೋಧ ರಾದ ರಾಮ ಕೆ.ದೇವಾಡಿಗ, ದಯಾನಂದ ಶೇರೆಗಾರ್, ಕೋಡಿ ಸರಕಾರಿ ವೈದ್ಯಾಧಿಕಾರಿ ಡಾ.ಉಮೇಶ್ ನಾಯಕ್, ಪುರಸಭಾ ಮಾಜಿ ಸದಸ್ಯರಾದ ಸಂಜೀವ ಪೂಜಾರಿ, ಕೋಡಿ ಪ್ರಭಾಕರ, ಉದ್ಯಮಿ ನಾಗರಾಜ ಶ್ರೀಯಾನ್ ಶುಭ ಹಾರೈಸಿದರು.
ಕೋಟೆ ಜಟ್ಟಿಗೇಶ್ವರ ಯುವಕ ಮಂಡಲ ಅಧ್ಯಕ್ಷ ಕೆ.ಎಚ್.ರಾಜೇಂದ್ರ ಶೇರೆಗಾರ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕೆ.ಎಚ್.ಜನಾರ್ದನ ನಾಯಕ್, ಅಶೋಕ್ ಪೂಜಾರಿ, ತಿಮ್ಮಪ್ಪ ಖಾರ್ವಿ, ಯತೀಶ್ ಬಂಗೇರ, ಉಸ್ಮಾನ್ ಕೋಡಿ, ಉಮೇಶ ಮಾಸ್ಟ್ರು ಅವರನ್ನು ಸನ್ಮಾನಿಸಲಾಯಿತು. ಕಾರ್ತಿಕ್ ಕೋಡಿ ಸ್ವಾಗತಿಸಿದರು. ಶರತ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಂದ್ರ ಕಾಂಚನ್ ಕಾರ್ಯ ಕ್ರಮ ನಿರ್ವಹಿಸಿದರು.







