ಸಿ.ಎಸ್. ದ್ವಾರಕಾನಾಥ್‌ರ ‘ಸಾಕ್ರೆಟಿಸ್ ಮತ್ತಿತರ ಕತೆಗಳು’ ಕೃತಿ ಬಿಡುಗಡೆ
ತಬ್ಬಲಿ ಜಾತಿಗಳ ಪರ ಗಟ್ಟಿ ಧ್ವನಿ: ಅಗ್ರಹಾರ ಕೃಷ್ಣಮೂರ್ತಿ

ಬೆಂಗಳೂರು: ಕತೆಗಳಲ್ಲಿಯ ಗಾಂಭೀರ್ಯದ ಟೊಳ್ಳುತನ ಬಯಲು ಮಾಡುವ ಲೇಖಕ-ಕತೆಗಾರ ಸಿ.ಎಸ್. ದ್ವಾರಕಾನಾಥರು ತಬ್ಬಲಿ ಜಾತಿಗಳ ಪರವಾದ ಗಟ್ಟಿ ಧ್ವನಿಯಾಗಿದ್ದಾರೆ ಎಂದು ಸಾಹಿತಿ-ಚಿಂತಕ ಅಗ್ರಹಾರ ಕೃಷ್ಣಮೂರ್ತಿ ಅವರು ಪ್ರಶಂಸಿಸಿದರು.
ಅಲೆಮಾರಿ ಬುಡಕಟ್ಟು ಭಾಮಹಾಸ ಸಂಸ್ಥೆಯು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನ ಡಾ. ಎಚ್.ಎನ್. ಸಭಾಂಗಣದಲ್ಲಿ ಚಿಂತಕ ಸಿ.ಎಸ್. ದ್ವಾರಕಾನಾಥ್ ಅವರ ‘ಸಾಕ್ರೆಟಿಸ್ ಮತ್ತಿತರ ಕತೆಗಳು’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕತೆಗಳಲ್ಲಿ ಗಾಂಭೀರ್ಯ ಇರಬೇಕು ಎಂಬ ಕಾರಣಕ್ಕೆ ಅದನ್ನು ಬಲವಂತವಾಗಿ ಎಳೆದು ತರುವುದೇ ಹೆಚ್ಚು. ಆದರೆ, ದ್ವಾರಕಾನಾಥರ ಕತೆಗಳಲ್ಲಿ ಈ ಗಾಂಭೀರ್ಯದ ‘ಮಿತ್’ ಅನ್ನು ಒಡೆಯುವ ಪ್ರಯತ್ನಗಳಿವೆ. ವೈಚಾರಿಕತೆ ಜೊತೆಗೆ ಸಮುದಾಯದ ನಂಬಿಕೆಗಳನ್ನು ಹಾಸ್ಯದ ಲೇಪನದೊಂದಿಗೆ ಈ ಕತೆಗಳು ಓದುಗರನ್ನು ಸೆಳೆಯುತ್ತವೆ. ಕತೆಗಾರನಿಗೆ ಇರಬಹುದಾದ ಹಲಬಗೆಯ ಆಸಕ್ತಿಗಳನ್ನು ಓದುಗರಿಗೆ ನೀಡುವ ಅದಮ್ಯ ಹಂಬಲವೂ ಈ ಕತೆಗಳಲ್ಲಿದೆ. ಆದ್ದರಿಂದ, ಕತೆಗಾರರು ಒಳಗೊಂಡು ಇಲ್ಲಿಯ ಕತೆಗಳು ತಬ್ಬಲಿ ಪರವಾದ ಧ್ವನಿಯನ್ನು ಧ್ವನಿಸುತ್ತವೆ ಎಂದು ಹೇಳಿದರು.
ಕತೆಗಾರರು ವಸ್ತುವಿನ ಆಯ್ಕೆಯಲ್ಲೂ ವಿಭಿನ್ನತೆ ಮೆರೆದಿದ್ದಾರೆ. ಅಲಕ್ಷಿತ ಅನುಭವ ಲೋಕವನ್ನು ದಾಖಲಿಸಿದ್ದಾರೆ. ಸಾಮಾಜಿಕ ಜಾತಿ ವ್ಯವಸ್ಥೆಯನ್ನು ಕುರಿತು ಸೃಷ್ಟಿಸಿರುವ ಹಲವು ಉತ್ತಮ ಕಥೆಗಳಲ್ಲಿ ಪೈಕಿ ‘ಮಾದಾರಿ ಕಥೆ’ಯೂ ಒಂದು ಎಂದು ಪ್ರಶಂಸಿಸಿದರು.
ವಿಮರ್ಶಕಿ ಡಾ. ಎಂ.ಎಸ್. ಆಶಾದೇವಿ ಮಾತನಾಡಿ ಸಿ.ಎಸ್. ದ್ವಾರಕಾನಾಥರ ‘ಸಾಕ್ರೆಟಿಸ್ ಮತ್ತಿತರ ಕತೆಗಳು’ ಕೃತಿಯು ಕಲಾಪಠ್ಯವಾಗಿ, ಸಾಂಸ್ಕೃತಿಕ ಪಠ್ಯವಾಗಿ ಹಾಗೂ ಸಾಮಾಜಿಕ ಪಠ್ಯವಾಗಿ ತನ್ನ ಅಸ್ತಿತ್ವವನ್ನು ಸಾಬೀತು ಪಡಿಸುತ್ತಿದೆ. ಕಾಲಘಟ್ಟದ ತಲ್ಲಣಗಳನ್ನು ಬಿಂಬಿಸುವ ಈ ಸಂಕಲನದ ಕತೆಗಳು, ಅರಿವಿನ ಹಿಂಸೆಯ ಕತೆಗಳಾಗಿಯೂ ತಮ್ಮ ಛಾಪನ್ನು ಮೂಡಿಸುತ್ತಿವೆ. ಈ ಕತೆಗಳನ್ನು ಬರೆದಿಲ್ಲ, ಬರೆಯಿಸಿಕೊಂಡವು. ಇಂತಹ ಕತೆಗಳ ಸಮಗ್ರ ವಿಮರ್ಶೆಯಾಗಬೇಕು. ಆದರೆ, ಕನ್ನಡ ಸಾಹಿತ್ಯದಲ್ಲಿ ವಿಮರ್ಶೆಯು ಅಳಿವಿನ ಅಂಚಿನಲ್ಲಿದೆ ಎಂದು ವಿಷಾದಿಸಿದರು.
ಲಂಕೇಶರ ಕತೆಗಳ ಪ್ರಭಾವ ‘ಸಾಕ್ರೆಟಿಸ್ ಮತ್ತಿತರ ಕತೆಗಳು’ ಕೃತಿಯ ಕತೆಗಳಲ್ಲಿದೆ. ಒಂದು ಅಸ್ವಸ್ಥ ಸಮುದಾಯದ ಅವ್ಯವಸ್ಥೆಯನ್ನು ತಿಳಿಸುವಲ್ಲಿ ಕತೆಗಳು ಪ್ರಮುಖವಾಗಿ ಕಂಡು ಬರುತ್ತವೆ ಎಂದೂ ಅವರು ಅಭಿಪ್ರಾಯಪಟ್ಟರು.
ಪ್ರೊ. ಸಿ.ಜಿ. ಲಕ್ಷ್ಮಿಪತಿ ಮಾತನಾಡಿ ಇಡೀ ಪುಸ್ತಕದ ಹಿಂದೆ ಬಾಬಾ ಸಾಹೇಬ ಅಂಬೇಡ್ಕರ್ ಅವರ ಪ್ರಭಾವ ಅಗಾಧವಾಗಿದೆ ಎಂದು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಕತೆಗಾರ ಸಿ.ಎಸ್. ದ್ವಾರಕಾನಾಥ್ ಉಪಸ್ಥಿತರಿದ್ದು, ಡಾ. ರವಿಕುಮಾರ್ ಬಾಗಿ ಸ್ವಾಗತಿಸಿದರು.







