ಜ.6ರಿಂದ 'ಕಂಪೆನಿ ಸೆಕ್ರೆಟರಿಗಳ ರಾಷ್ಟ್ರೀಯ ಸಮಾವೇಶ': ರಾಜ್ಯಪಾಲರಿಂದ ಚಾಲನೆ

ಬೆಂಗಳೂರು, ಜ, 5: ‘ದೇಶದ ಆಡಳಿತ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ತರಲು ಮಹತ್ವದ ಪಾತ್ರ ವಹಿಸುತ್ತಿರುವ ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೇಟರೀಸ್ ಆಫ್ ಇಂಡಿಯಾ ವತಿಯಿಂದ ‘ಉತ್ತಮ ಆಡಳಿತ: ಸಾರ್ವತ್ರಿಕ ಧರ್ಮ' ಎಂಬ ವಿಷಯದಡಿ ನಾಳೆ(ಜ.6)ಯಿಂದ ಮೂರು ದಿನಗಳ 49ನೆ ಕಂಪೆನಿ ಸೆಕ್ರೆಟರಿಗಳ ರಾಷ್ಟ್ರೀಯ ಸಮಾವೇಶ ಆರಂಭವಾಗಲಿದೆ' ಎಂದು ಐಸಿಎಸ್‌ಐ ಅಧ್ಯಕ್ಷ ಸಿ.ಎಸ್.ನಾಗೇಂದ್ರ ರಾವ್ ತಿಳಿಸಿದ್ದಾರೆ.
ಬುಧವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಂಗಳೂರು ಅರಮನೆ ಆವರಣದಲ್ಲಿ ನಡೆಯಲಿರುವ ಸಮಾವೇಶವನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಉದ್ಘಾಟಿಸಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ಎಸ್‌ಬಿಐನ ವ್ಯವಸ್ಥಾಪಕ ನಿರ್ದೇಶಕ ಸ್ವಾಮಿನಾಥನ್ ಜಾನಕಿರಾಮನ್ ಪಾಲ್ಗೊಳ್ಳಲಿದ್ದಾರೆ. ಮೂರು ದಿನಗಳ ಸಮಾವೇಶದಲ್ಲಿ ವಿವಿಧ ಗೋಷ್ಠಿಗಳನ್ನು ಆಯೋಜಿಸಲಾಗಿದೆ' ಎಂದರು.
‘ಮೊದಲ ದಿನದಂದು ಸಂಜೆ ನಾಯಕತ್ವದಲ್ಲಿ ಪರಿವರ್ತನೆ ಮತ್ತು ಉತ್ತಮ ಆಡಳಿತ ಕುರಿತು ಜೈನ್ ವಿವಿಯ ಡಾ.ರಾಜ್‌ದೀಪ್ ಮನ್ವಾನಿ ಮಾತನಾಡಲಿದ್ದಾರೆ. ಜ.7ರಂದು ಕಂಪೆನಿಗಳ ಸಾಮಾಜಿಕ ಜವಾಬ್ದಾರಿ ಮತ್ತು ಸೇವಾ ಆಡಳಿತ ಕುರಿತು ಮೈಸೂರಿನ ಯದುವಿರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಲಿದ್ದಾರೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯಕಾರಿ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್, ಮಹಾರಾಷ್ಟ್ರದ ನಿವೃತ್ತ ಐಎಎಸ್ ಅಧಿಕಾರಿ ಸಂಜಯ್ ಉಬಲೆ ಭಾಗಿಯಾಗಲಿದ್ದಾರೆ' ಎಂದು ವಿವರಿಸಿದರು.
‘ಡಿಟಿಟಲ್ ಯುಗದಲ್ಲಿ ಆಡಳಿತ, ಸವಾಲುಗಳು ಮತ್ತು ಅವಕಾಶಗಳು' ಕುರಿತ ಗೋಷ್ಠಿಯಲ್ಲಿ ರಾಷ್ಟ್ರೀಯ ಕಾನೂನು ಶಾಲೆಯ ಉಪಕುಲಪತಿ ಪ್ರೊ.ಸುಧೀರ್ ಕೃಷ್ಣಸ್ವಾಮಿ ಮಾತನಾಡಲಿದ್ದು, ಸಾಂಸ್ಥಿಕ ಮಂಡಳಿಗಳು, ವೈವಿಧ್ಯತೆ, ಇಕ್ವಿಟಿ ಮತ್ತು ಎಲ್ಲವನ್ನೊಳಗೊಂಡ ಪರಿಣಾಮಕಾರಿ ಆಡಳಿತ ಕುರಿತು ಬೆಂಗಳೂರಿನ ಐಎಸ್‌ಬಿಎಂನ ಸಹಾಯಕ ಪ್ರಾಧ್ಯಾಪಕ ಡಾ.ರಂಗರಾಜನ್ ಶ್ರೀನಿವಾಸನ್ ಮಾತನಾಡಲಿದ್ದಾರೆ. ಬಳಿಕ ಮಂಡಳಿಗಳ ಸ್ವಾಯತ್ತತೆ, ಆಡಳಿತದ ಗುಣಮಟ್ಟ ಹೆಚ್ಚಳ ಕುರಿತು ಎನ್‌ಎಸ್‌ಡಿಎಲ್‌ನ ಕಾರ್ಯಕಾರಿ ನಿರ್ದೇಶಕ ಸಮೀರ್ ಬನ್ವಾತ್ ಬೆಳಕು ಚೆಲ್ಲಲಿದ್ದಾರೆ ಎಂದರು.
ಉದ್ಯೋಗಕ್ಕೆ ವಿಫುಲ ಅವಕಾಶ: ಕೋವಿಡ್ ಸಂಕಷ್ಟದ ನಡುವೆಯೂ ಪ್ರತಿದಿನ ದೇಶದಲ್ಲಿ 600 ಕಂಪೆನಿಗಳು ನೋಂದಣಿಯಾಗುತ್ತಿದ್ದು, ಇದೊಂದು ಸಕಾರಾತ್ಮಕ ಬೆಳವಣಿಗೆ. ಪ್ರಸ್ತುತ 67,205 ಕಂಪೆನಿಗಳು ಕಾರ್ಯನಿರ್ವಹಿಸುತ್ತಿವೆ. ಮುಂಬರುವ ದಿನಗಳಲ್ಲೂ ಹೊಸ ಹೊಸ ಕಂಪೆನಿಗಳಿಗೆ ಅವಕಾಶಗಳಿವೆ. ಹೀಗಾಗಿ ಮುಂಬರುವ ದಿನಗಳಲ್ಲಿ ಸಿಐಎಸ್‌ಐ ತನ್ನ ಕೋರ್ಸ್ಗಳನ್ನು ಎಸೆಸೆಲ್ಸಿ ಮತ್ತು ಪಿಯುಸಿ ಹಂತದಲ್ಲಿ ಪರಿಚಯಿಸಲು ಚಿಂತನೆ ನಡೆಸುತ್ತಿದೆ. ವಿದ್ಯಾರ್ಥಿಗಳಿಗೆ ಈ ಕೋರ್ಸ್ ಬಗ್ಗೆ ತಿಳಿದುಕೊಳ್ಳಲು ಮತ್ತು ಆಯ್ಕೆ ಮಾಡಿಕೊಳ್ಳಲು ಸಹಕಾರಿ ಎಂದು ನಾಗೇಂದ್ರ ರಾವ್ ಹೇಳಿದರು.
ರಾಜ್ಯದಲ್ಲಿ ಪಿಯುಸಿ ತರಗತಿ ಪರೀಕ್ಷೆಗಳನ್ನು ಪೂರ್ಣಗೊಳಿಸಿದ ನಂತರ ಸಿಎಸ್ ಕೋರ್ಸ್ಗಳನ್ನು ತೆಗೆದುಕೊಳ್ಳಬಹುದು. ಪ್ರಸ್ತುತ 2.5ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಂಪೆನಿ ಸೆಕ್ರೇಟರಿ ಕೋರ್ಸ್ಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಆರ್ಥಿಕ ಬೆಳವಣಿಗೆ ಹಾಗೂ ಉದ್ಯೋಗಾವಕಾಶ ಒದಗಿಸಲು ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು. ಐಸಿಎಸ್‌ಐ ಕಾರ್ಯದರ್ಶಿ ಆಶಿಶ್ ಮೋಹನ್, ಬೆಂಗಳೂರು ಘಟಕದ ಅಧ್ಯಕ್ಷ ವಿಜಯ್‌ಕುಮಾರ್ ಸಜ್ಜನ್, ಉಪಾಧ್ಯಕ್ಷ ಸಿ.ರಾಮಸುಬ್ರಮಣ್ಯಂ ಸೇರಿದಂತೆ ಇನ್ನಿತರರು ಹಾಜರಿದ್ದರು.








