ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತದೊಂದಿಗೆ ಸಹಕರಿಸಿ: ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ

ಮಂಗಳೂರು, ಜ.5: ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತದೊಂದಿಗೆ ಜಿಲ್ಲೆಯ ಜನರ ಸಹಕಾರ ಅತ್ಯಗತ್ಯ. ಈ ನಿಟ್ಟಿನಲ್ಲಿ ಜಿಲ್ಲೆಯ ನಾಗರಿಕರು, ವಿವಿಧ ಸಂಘ- ಸಂಸ್ಥೆಗಳ ಮುಖಂಡರು ಸಹರಿಸಬೇಕು ಎಂದು ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.ಕರೆ ನೀಡಿದರು.
ಕೋವಿಡ್ ನಿಯಂತ್ರಣ ಸಂಬಂಧ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪದಾಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಯ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳ ಚಾಲಕರು ಹಾಗೂ ನಿರ್ವಾಹಕರು ಕಡ್ಡಾಯವಾಗಿ ಕೋವಿಡ್‌ನ ಎರಡು ಡೋಸ್‌ಗಳ ಲಸಿಕೆ ಪಡೆದಿರಬೇಕು ಮತ್ತು ಕರ್ತವ್ಯ ನಿರ್ವಹಣೆ ವೇಳೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಪ್ರಯಾಣಿಕರು ಬಸ್ ಹತ್ತುವ ವೇಳೆ ಕೋವಿಡ್ ಲಸಿಕೆ ಪಡೆದಿರುವ ಬಗ್ಗೆ ತಿಳಿಯಬೇಕು, ಪಡೆಯದ ಪ್ರಯಾಣಿಕರಿಗೆ ಜಾಗೃತಿ ಮೂಡಿಸಬೇಕು, ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಬಸ್ ಹತ್ತುವಂತೆ ತಿಳಿಸಬೇಕು. ಜಾಗೃತಿಗೆ ಸಂಬಂಧಿಸಿದಂತೆ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಸಭೆ ನಡೆಸಿ, ಚಾಲಕರು ಹಾಗೂ ನಿರ್ವಾಹಕರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಡಿಸಿ ಸೂಚಿಸಿದರು.
ಕ್ಯಾಟರಿಂಗ್ ಮಾಡುವವರು ಸಹ ವಿವಿಧ ಸಮಾರಂಭಗಳಲ್ಲಿ ಊಟ, ಉಪಹಾರ ನೀಡುವ ಸಂದರ್ಭಗಳಲ್ಲಿ ಕೋವಿಡ್ ನಿಯಮಾವಳಿಗಳ ಪಾಲನೆ ಕುರಿತು ತಿಳಿದುಕೊಳ್ಳಬೇಕು. ನಗರದಲ್ಲಿರುವ ಎಲ್ಲಾ ಮಾಲ್‌ಗಳಲ್ಲಿಯೂ ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಲೇಬೇಕು. ಮಾಲ್‌ಗಳ ಪ್ರತಿಯೊಂದು ಮಳಿಗೆಗಳ ಪ್ರವೇಶ ದ್ವಾರದಲ್ಲಿ ಕೋವಿಡ್ ಲಸಿಕೆಯ ಎರಡೂ ಡೋಸ್ ಆಗಿರುವ ಬಗ್ಗೆ, ಮಾಸ್ಕ್ ಧಾರಣೆ ಕುರಿತು ಎಚ್ಚರ ವಹಿಸಬೇಕು, ಪೆಟ್ರೋಲ್ ಪಂಪ್‌ಗಳಲ್ಲಿ ಸುರಕ್ಷಿತ ಅಂತರ, ಕೋವಿಡ್ ವ್ಯಾಕ್ಸಿನ್ ಪಡೆಯುವ ಮಹತ್ವದ ಬಗ್ಗೆ ತಿಳಿಸಿಕೊಡಬೇಕು, ಹೊಟೇಲ್‌ಗಳಲ್ಲಿ ಶೇ.50ರ ಅನುಪಾತದಲ್ಲಿ ಗ್ರಾಹಕರಿಗೆ ಸೇವೆ ನೀಡುವುದು ಸಹಿತ ಗ್ರಾಹಕರು ಕೋವಿಡ್ ವ್ಯಾಕ್ಸಿನ್ ಪಡೆದ ಬಗ್ಗೆ ಖಚಿತ ಪಡಿಸಿಕೊಳ್ಳುವಂತಹ ಪ್ರಕ್ರಿಯೆಗಳನ್ನು ಅನುಸರಿಸಬೇಕು ಎಂದು ಡಿಸಿ ತಿಳಿಸಿದರು.
ಚಲನಚಿತ್ರ ಮಂದಿರಗಳು, ರೆಸ್ಟೋರೆಂಟ್‌ಗಳು ಶೇ.50ರ ಅನುಪಾತದಲ್ಲಿ ಕಾರ್ಯನಿರ್ವಹಣೆ ಹಾಗೂ ಕೋವಿಡ್ ನಿಯಮಾವಳಿಗಳ ಪಾಲನೆಯ ಬಗ್ಗೆ ಎಚ್ಚರ ವಹಿಸಬೇಕು. ವಿವಿಧ ಸಂಘ ಸಂಸ್ಥೆಗಳು ಕೆಲಸಗಾರರಲ್ಲಿ ಯಾವುದಾದರೂ ರೋಗ ಲಕ್ಷಣಗಳು ಕಂಡು ಬಂದ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸುವ ಕೆಲಸ ಮಾಡಬೇಕು. ವಾಣಿಜ್ಯ ಮಳಿಗೆಗಳು ಹಾಗೂ ಇತರೆಡೆ ಆರೋಗ್ಯ ಇಲಾಖೆಯವರು ಸ್ವ್ಯಾಬ್ ಸಂಗ್ರಹಕ್ಕೆ ಬಂದಾಗ ಸೂಕ್ತ ರೀತಿಯಲ್ಲಿ ಸಹಕರಿಸಬೇಕು, ಇಲ್ಲದಿದ್ದರೆ ಅಂತಹವರ ವಿರುದ್ಧ ಎಫ್‌ಐಆರ್ ದಾಖಲಿಸಿ, ಅವರ ಮಳಿಗೆಗಳ ಪರವಾನಗಿಯನ್ನು ತಾತ್ಕಾಲಿಕವಾಗಿ ರದ್ದು ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ದ.ಕ.ಜಿಪಂ ಸಿಇಒ ಡಾ. ಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಿ ಶ್ರೀಧರ್, ಖಾಸಗಿ ಬಸ್, ಹೋಟೆಲ್, ಚಲನಚಿತ್ರ, ಮಾಲ್, ಕ್ಯಾಟರಿಂಗ್ ಸಹಿತ ವಿವಿಧ ಸಂಘಗಳ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.







