ಧರ್ಮಸಂಸದ್ ನಲ್ಲಿ ದ್ವೇಷ ಭಾಷಣ: ಪುಣೆ ಪೊಲೀಸ್ ಕಸ್ಟಡಿಗೆ ಕಾಳಿಚರಣ್ ಮಹರಾಜ್

ಪುಣೆ, ಜ. 5: ಹರಿದ್ವಾರದ ಧರ್ಮ ಸಂಸದ್‌ನಲ್ಲಿ ಮಾಡಿದ ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿ ಹಿಂದೂ ಧಾರ್ಮಿಕ ನಾಯಕ ಕಾಳಿಚರಣ್ ಮಹಾರಾಜರನ್ನು ಪುಣೆ ಪೊಲೀಸರು ಬುಧವಾರ ರಾಯಪುರ ಪೊಲೀಸರಿಂದ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಧರ್ಮ ಸಂಸದ್‌ನಲ್ಲಿ ದ್ವೇಷ ಭಾಷಣ ಮಾಡಿದ ಆರೋಪದಲ್ಲಿ ಕಾಳಿಚರಣ್ ಮಹಾರಾಜ ಹಾಗೂ ಇತರ ಐವರ ವಿರುದ್ಧ ಇಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಪುಣೆ ಪೊಲೀಸರು ಕಾಳಿಚರಣ್ ಮಹಾರಾಜರನ್ನು ರಾಯಪುರ ಪೊಲೀಸರಿಂದ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಚತ್ತೀಸ್‌ಗಡದ ರಾಯಪುರ ನ್ಯಾಯಾಲಯ ಟ್ರಾನ್ಸಿಟ್ ರಿಮಾಂಡ್ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಪುಣೆಗೆ ಕರೆ ತರಲಾಗುತ್ತಿದೆ. ‘‘ನಾವು ಕಾಳಿಚರಣ್ ಮಹಾರಾಜನನ್ನು ಚತ್ತೀಸ್‌ಗಡದ ಪೊಲೀಸರಿಂದ ಕಸ್ಟಡಿಗೆ ತೆಗೆದುಕೊಂಡಿದ್ದೇವೆ. ಅವರನ್ನು ಪುಣೆಗೆ ಕರೆ ತರಲಾಗುತ್ತಿದೆೆ’’ ಎಂದು ಖಡಕ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್‌ನಲ್ಲಿ ಪ್ರಚೋದಕ ಭಾಷಣ ಮಾಡಿದ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಜಂಟು ಮಾಡಿದ ಆರೋಪದಲ್ಲಿ ಕಾಳಿಚರಣ್ ಮಹಾರಾಜ, ಬಲಪಂಥೀಯ ನಾಯಕ ಮಿಲಿಂದ್ ಎಕ್ಬೋಟೆ, ಕ್ಯಾಪ್ಟನ್ ದಿಗೇಂದ್ರ ಕುಮಾರ್ (ನಿವೃತ್ತ) ಹಾಗೂ ಇತರರ ವಿರುದ್ಧ ಪುಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಛತ್ರಪತಿ ಶಿವಾಜಿ ಮಹಾರಾಜನಿಂದ ಮೊಗಲ್ ಕಮಾಂಡರ್ ಅಪ್ಝಲ್ ಖಾನ್ ಹತ್ಯೆಯಾದ ದಿನದ ಸಂಭ್ರಮಾಚರಣೆಗೆ 2021 ಡಿಸೆಂಬರ್ 19ರಂದು ಎಕ್ಬೋಟೆ ನೇತೃತ್ವದ ಹಿಂದೂ ಅಘಾಡಿ ಸಂಘಟನೆ ‘ಶಿವ ಪ್ರತಾಪ್ ದಿನ’ ಆಯೋಜಿಸಿತ್ತು.







