ಕೋವಿಡ್ ಮಾರ್ಗಸೂಚಿ ಪರಿಷ್ಕಾರ: ಹೋಮ್ ಐಸೋಲೇಶನ್ 10ರಿಂದ 7 ದಿನಗಳಿಗೆ ಇಳಿಕೆ

ಹೊಸದಿಲ್ಲಿ, ಜ. 5: ಲಘು ಹಾಗೂ ಲಕ್ಷಣ ರಹಿತ ಕೋವಿಡ್ ಪ್ರಕರಣಗಳಲ್ಲಿ ಹೋಮ್ ಐಸೋಲೇಶನ್‌ಗೆ ಕೇಂದ್ರ ಸರಕಾರ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಬಳಿಕ ಸತತ 3 ದಿನ ಜ್ವರ ಇಲ್ಲದೇ ಇದ್ದಲ್ಲಿ ಕನಿಷ್ಠ 7 ದಿನಗಳ ಬಳಿಕ ಹೋಮ್ ಐಸೋಲೇಶನ್‌ಗೆ ಒಳಗಾಗಿರುವ ರೋಗಿ ಐಸೋಲೇಶನ್ ಅನ್ನು ಅಂತ್ಯಗೊಳಿಸಬಹುದು. ಅವರು ಮಾಸ್ಕ್ ಧರಿಸುವುದನ್ನು ಮುಂದುವರಿಸಬೇಕು. ಹೋಮ್ ಐಸೋಲೇಶನ್ ಅಂತ್ಯಗೊಂಡ ಬಳಿಕ ಅವರು ಮತ್ತೆ ಪರೀಕ್ಷೆಗೆ ಒಳಗಾಗಬೇಕಾದ ಅಗತ್ಯತೆ ಇಲ್ಲ. ಇದುವರೆಗೆ ರೋಗ ಲಕ್ಷಣ ಕಂಡುಬಂದ 10 ದಿನಗಳ ಬಳಿಕ ಹೋಮ್ ಐಸೋಲೇಶನ್ ಅಂತ್ಯಗೊಳ್ಳುತ್ತಿತ್ತು. ಇಂದಿನ ವರೆಗೆ ಪ್ರತಿ ಒಮೈಕ್ರಾನ್ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕೊರೋನ ವೈರಸ್ ಈ ರೂಪಾಂತರಿತ ತಳಿ ಕಂಡು ಬಂದ ಬಳಿಕ ರೋಗ ನಿಯಂತ್ರಣ ರಾಷ್ಟ್ರೀಯ ಕೇಂದ್ರ ರೋಗ ಲಕ್ಷಣ ಹಾಗೂ ಗಂಭೀರತೆಯನ್ನು ಅರಿತುಗೊಳ್ಳಲು ಪ್ರತಿ ರೋಗಿಗಳ ದಾಖಲೀಕರಣ ಮಾಡಿಕೊಳ್ಳುತ್ತಿದೆ. ಪರಿಷ್ಕೃತ ಮಾರ್ಗಸೂಚಿಯ ಪ್ರಕಾರ 60 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ಹೈಪರ್ ಟೆನ್ಶನ್, ಸಕ್ಕರೆ ಖಾಯಿಲೆ, ಹೃದ್ರೋಗ, ದೀರ್ಘಕಾಲೀನ ಶ್ವಾಸಕೋಸದ ತೊಂದರೆ ಮೊದಲಾದ ಹಲವು ಸಹ ರೋಗಗಳು ಇರುವ ವೃದ್ಧ ರೋಗಿಗಳಿಗೆ ವೈದ್ಯರು ಸೂಕ್ತ ಮೌಲ್ಯ ಮಾಪನ ಮಾಡಿದ ಬಳಿಕವೇ ಹೋಮ್ ಐಸೋಲೇಶನ್‌ಗೆ ಅನುಮತಿ ನೀಡಬೇಕು. ಎಚ್ಐವಿ, ಅಂಗಾಂಗ ಕಸಿ ಹಾಗೂ ಕ್ಯಾನ್ಸರ್ ಥೆರಪಿಗೆ ಒಳಗಾಗುತ್ತಿರುವ ರೋಗ ನಿರೋಧ ಶಕ್ತಿಯ ಕೊರತೆ ಇರುವ ರೋಗಿಗಳಿಗೆ ವೈದ್ಯರ ಸೂಚನೆ ಇಲ್ಲದೆ ಹೋಮ್ ಐಸೋಲೇಶನ್‌ಗೆ ಶಿಫಾರಸು ಮಾಡಬಾರದು ಎಂದು ಆರೋಗ್ಯ ಸಚಿವಾಲಯ ಹೇಳಿದೆ.







