ಹಿಂದೂ ಮಹಿಳೆಯರನ್ನು ಗುರಿಯಾಗಿಸಿ ಕಾರ್ಯಾಚರಿಸುತ್ತಿದ್ದ ಟೆಲಿಗ್ರಾಂ ಚಾನೆಲ್ ಸ್ಥಗಿತ: ಐಟಿ ಸಚಿವ

photo:PTI
ಹೊಸದಿಲ್ಲಿ: ಹಿಂದೂ ಮಹಿಳೆಯರನ್ನು ಗುರಿಯಾಗಿಸಿ ಕಾರ್ಯಾಚರಿಸುತ್ತಿದ್ದ ಟೆಲಿಗ್ರಾಂ ಚಾನೆಲ್ ಒಂದನ್ನು ಸ್ಥಗಿತಗೊಳಿಸಿರುವುದಾಗಿ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಶ್ಣವ್ ಬುಧವಾರ ತಿಳಿಸಿದ್ದಾರೆ. ಚಾನೆಲ್ ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಿರುವುದಾಗಿಯೂ ಅವರು ತಿಳಿಸಿದ್ದಾರೆ.
ಹಿಂದೂ ಮಹಿಳೆಯರ ಭಾವಚಿತ್ರ ದುರ್ಬಳಕೆ ಮಾಡಿ ಅವಮಾನಿಸುತ್ತಿರುವುದಾಗಿ ಸಾಮಾಜಿಕ ಜಾಲತಾಣದ ಬಳಕೆದಾರರು ದೂರಿರುವುದಾಗಿ ವರದಿಯಾಗಿದೆ. ದೂರು ಕೇಳಿ ಬಂದ ಬೆನ್ನಲ್ಲೇ ಚಾನೆಲನ್ನು ಸ್ಥಗಿತಗೊಳಿಸಲಾಗಿದೆ.
ಈ ಕುರಿತು ಸಚಿವರು ಟ್ವೀಟ್ ಮಾಡಿದ್ದು, ಚಾನೆಲನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೇಂದ್ರ ಸರ್ಕಾರ ಸಂಬಂಧಪಟ್ಟವರನ್ನು ಸಂಪರ್ಕಿಸುತ್ತಿದೆ ಎಂದಿದ್ದಾರೆ.
ಮೆಸೇಜಿಂಗ್ ಆಪ್ ಆದ ಟೆಲಿಗ್ರಾಂ ನಲ್ಲಿ ಚಾನೆಲ್ ಮುಖಾಂತರ ಒಂದೇ ಬಾರಿ ಸಾವಿರಾರು ಬಳಕೆದಾರರನ್ನು ತಲುಪುವ ಅವಕಾಶವಿದೆ. ಮುಸ್ಲಿಂ ಮಹಿಳೆಯರನ್ನು ಹರಾಜಿಗೆ ಹಾಕಿ ವಿವಾದ ಸೃಷ್ಟಿಸಿದ ಬುಲ್ಲಿ ಬಾಯ್ ಪ್ರಕರಣದ ಬೆನ್ನಲ್ಲೇ ಈ ಪ್ರಕರಣ ಹೊರಬಂದಿದೆ. ಬುಲ್ಲಿ ಬಾಯ್ ಪ್ರಕರಣ ಸಾಕಷ್ಟು ವಿವಾದ ಸೃಷ್ಟಿಸಿದ್ದು, ಸದ್ಯ ಅದನ್ನೂ ತಡೆ ಹಿಡಿಯಲಾಗಿದೆ.







