ಪ್ರಧಾನಿ, ಉತ್ತರಪ್ರದೇಶ ಮುಖ್ಯಮಂತ್ರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಪತ್ರ

ಲಕ್ನೋ, ಜ. 5: ಚುನಾವಣಾ ರ್ಯಾಲಿ ಉದ್ಘಾಟಿಸಲು ಹಾಗೂ ಈ ಕಾರ್ಯಕ್ರಮದಲ್ಲಿ ರಾಜಕೀಯ ಹೇಳಿಕೆ ನೀಡಲು ಸರಕಾರದ ಆಡಳಿತಾಂಗ, ಹಣ ಬಳಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಾಂಗ್ರೆಸ್ ಬುಧವಾರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.
ವಿಧಾನ ಸಭೆ ಚುನಾವಣೆ ನಡೆಯಲಿರುವ ಉತ್ತರಪ್ರದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಕಾರ್ಯಕ್ರಮಗಳನ್ನು ಮುಂದೂಡಿರುವ ಕಾಂಗ್ರೆಸ್, ಕೋವಿಡ್ನ ಮೂರನೇ ಅಲೆ ಸಾಧ್ಯತೆ ಇರುವುದರಿಂದ ರಾಜ್ಯದಲ್ಲಿ ದೊಡ್ಡ ರ್ಯಾಲಿಗಳನ್ನು ರದ್ದುಗೊಳಿಸುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸಿದೆ.
‘‘ಉತ್ತರಪ್ರದೇಶ ಹಾಗೂ ಚುನಾವಣೆ ನಡೆಯಲಿರುವ ಇತರ ರಾಜ್ಯಗಳಲ್ಲಿ ಪ್ರಮುಖ ರ್ಯಾಲಿಯನ್ನು ಮುಂದೂಡಲು ಕಾಂಗ್ರೆಸ್ ನಿರ್ಧರಿಸಿದೆ. ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಅಂದಾಜಿಸುವಂತೆ ನಾವು ರಾಜ್ಯ ಘಟಕದಲ್ಲಿ ವಿನಂತಿಸಿದ್ದೇವೆ. ಅನಂತರ ರ್ಯಾಲಿ ನಡೆಸುವ ಬಗ್ಗೆ ನಿರ್ಧರಿಸಲಾಗುವುದು’’ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.





