"ಕ್ರಿಶ್ಚಿಯನ್ ಕಾಲೇಜನ್ನು ಹಿಂದೂ ಕಾಲೇಜು ಮಾಡಿ ತೋರಿಸುತ್ತೇವೆ": ವೀಡಿಯೋ ವೈರಲ್
ಕಿನ್ನಿಗೋಳಿ: ಪೊಂಪೈ ಕಾಲೇಜಿನಲ್ಲಿ ಸ್ಕಾರ್ಫ್- ಕೇಸರಿ ಶಾಲು ವಿವಾದ
![ಕ್ರಿಶ್ಚಿಯನ್ ಕಾಲೇಜನ್ನು ಹಿಂದೂ ಕಾಲೇಜು ಮಾಡಿ ತೋರಿಸುತ್ತೇವೆ: ವೀಡಿಯೋ ವೈರಲ್ ಕ್ರಿಶ್ಚಿಯನ್ ಕಾಲೇಜನ್ನು ಹಿಂದೂ ಕಾಲೇಜು ಮಾಡಿ ತೋರಿಸುತ್ತೇವೆ: ವೀಡಿಯೋ ವೈರಲ್](/images/placeholder.jpg)
ಮುಲ್ಕಿ, ಜ.6: ಕಿನ್ನಿಗೋಳಿ ಸಮೀಪದ ದಾಮಸ್ ಕಟ್ಟೆಯಲ್ಲಿರುವ ಪೊಂಪೈ ಕಾಲೇಜಿನಲ್ಲಿ ಸ್ಕಾರ್ಫ್ ಮತ್ತು ಕೇಸರಿ ಶಾಲು ವಿವಾದ ತಲೆದೋರಿದೆ.
ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಸ್ಕಾರ್ಫ್ ಹಾಕಿ ತರಗತಿಗೆ ಹಾಜರಾಗುತ್ತಿರುವುದನ್ನು ವಿರೋಧಿಸಿ ಬುಧವಾರ ಕೆಲವು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕೇಸರಿ ಶಾಲು ಹಾಕಿ ತರಗತಿ ಹಾಜರಾಗಿದ್ದಾರೆ. ಸ್ಕಾರ್ಫ್ ಧರಿಸಿದರೆ ನಾವು ಕೇಸರಿ ಶಾಲು ಧರಿಸುವುದನ್ನು ಮುಂದುವರಿಸುವುದಾಗಿ ಕೇಸರಿ ಶಾಲುಧಾರಿ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಈ ವಿಚಾರ ವಿವಾದವಾಗುತ್ತಲೇ ಶಾಲಾಡಳಿತ ಸಮಿತಿ ಬುಧವಾರ ಮದ್ಯಾಹ್ನ ಕಾಲೇಜಿಗೆ ರಜೆ ನೀಡಿದ್ದು ಈ ಬಗ್ಗೆ ಆಡಳಿತ ಮಂಡಳಿ ಸಭೆ ನಡೆಸಿದೆ ಎಂದು ತಿಳಿದುಬಂದಿದೆ.
ಈ ನಡುವೆ "ಮುಸ್ಲಿಂ ವಿದ್ಯಾರ್ಥಿನಿಯರು ಸ್ಕಾರ್ಪ್ ಹಾಕುವುದನ್ನು ಮುಂದುವರಿಸಿದರೆ ನಾವು ಕೇಸರಿ ಶಾಲು ಹಾಕುವುದನ್ನು ಮುಂದುವರಿಸುತ್ತೇವೆ. ನಮಗೆ ವಿಶ್ವ ಹಿಂದೂ ಪರಿಷತ್, ಬಜರಂಗ ದಳ, ಎಬಿವಿಪಿ ಸಂಘಟನೆಗಳು ಬೆಂಬಲ ಸೂಚಿಸಿವೆ. ಇದು ಪ್ರಾರಂಭವಷ್ಟೇ. ಮುಂದಿನ ದಿನಗಳಲ್ಲಿ ಕ್ರಿಶ್ಚಿಯನ್ ಕಾಲೇಜನ್ನು ಹಿಂದೂ ಕಾಲೇಜು ಮಾಡಿ ತೋರಿಸುತ್ತೇವೆ" ಎಂದು ವಿದ್ಯಾರ್ಥಿಗಳು ಮಾತನಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.