ಉಡುಪಿ: ಶೂ ಪಾಲಿಶ್, ಟೀ ಮಾರಾಟ ಮಾಡಿದ ಅತಿಥಿ ಉಪನ್ಯಾಸಕರು !
ಸಿಎಂ, ಸಚಿವರ ಮುಖವಾಡ ಧರಿಸಿ ವಿನೂತನ ಪ್ರತಿಭಟನೆ

ಉಡುಪಿ, ಜ. 6: ಸೇವಾ ಖಾಯಮತಿ ಮತ್ತು ಸೇವಾ ಭದ್ರತೆಗಾಗಿ ಕಳೆದ 26 ದಿನಗಳಿಂದ ಮುಷ್ಕರ ಹಮ್ಮಿಕೊಂಡಿರುವ ಸರಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ಗುರುವಾರ ಅಜ್ಜರಕಾಡುವಿನ ಭುಜಂಗ ಪಾರ್ಕ್ ಸಮೀಪ ಬೂಟ್ ಪಾಲಿಶ್, ಟೀ ಮಾರಾಟ ಹಾಗೂ ಪೊರಕೆಯಲ್ಲಿ ಕಸ ಗುಡಿಸುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಹಿತರಕ್ಷಣಾ ಸಮಿತಿಯ ಜಿಲ್ಲಾ ಘಟಕ ಹಾಗೂ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರ ಮುಖವಾಡ ಹಾಕಿಕೊಂಡಿದ್ದರು.
ಅತಿಥಿ ಉಪನ್ಯಾಸಕಿ ಮಮತಾ ಸ್ಥಳದಲ್ಲಿ ತಂದಿರಿಸಿದ್ದ ಟೀಯನ್ನು ಮಾರಾಟ ಮಾಡಿ ಧರಣಿ ನಡೆಸಿದರೆ, ಸತೀಶ್ ಸಾಲಿಗ್ರಾಮ ಬೂಟ್ ಪಾಲಿಶ್ ಮಾಡುವ ಮೂಲಕ ಸರಕಾರಕ್ಕೆ ಛೀಮಾರಿ ಹಾಕಿದರು. ಸುಬ್ರಹ್ಮಣ್ಯ ಸಹಿತ ಹಲವಾರು ಮಂದಿ ಉಪನ್ಯಾಸಕರು ಕಸ ಗುಡಿಸುವ ಮೂಲಕ ಪ್ರತಿಭಟನೆ ನಡೆಸಿದರು.
ದಯಾ ಮರಣಕ್ಕೆ ಅವಕಾಶ ನೀಡಿ
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷೆ ಡಾ. ಶಾಹಿದಾ ಜಹಾನ್, 1977ರ ಕೆಸಿಎಸ್ ಸಾಮಾನ್ಯ ನೇಮಕಾತಿ ಪ್ರಕಾರ ಅರೆಕಾಲಿಕ ಉಪನ್ಯಾಸ ಮಾಡುವ ಉಪನ್ಯಾಸಕರನ್ನು ಪೂರ್ಣಕಾಲಿಕ ಮಾಡುವ ಅವಕಾಶವಿದೆ. ಈ ಆದೇಶ ಎಲ್ಲ ರಾಜ್ಯಗಳಲ್ಲಿ ಪಾಲನೆಯಾಗುತ್ತಿದ್ದರೂ ನಮ್ಮ ರಾಜ್ಯದಲ್ಲಿ ಮಾತ್ರ ಉಲ್ಲಂಘನೆಯಾಗುತ್ತಿದೆಂದು ಆರೋಪಿಸಿದರು.
ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರಿಗೆ ಭವಿಷ್ಯವಿಲ್ಲದಂತಾಗಿದೆ. ನೆಟ್, ಸ್ಲೆಟ್, ಪಿಎಚ್‌ಡಿ ಮಾಡಿ 11 ಸಾವಿರ ರೂ.ಗೆ ದುಡಿಯುವಂತಾಗಿದೆ. ಈ ಬಗ್ಗೆ ಶಾಸಕರು, ಸಚಿವರಲ್ಲಿ ತಿಳಿಸಿದರೆ ವ್ಯಂಗ್ಯವಾಡುತ್ತಾರೆ. ನಾಲ್ಕು ದಿನದೊಳಗೆ ಬೇಡಿಕೆ ಈಡೇರಿಸದಿದ್ದರೆ ಕಾಲೇಜು ಎದುರು ಅಮರಣಾಂತ ಉಪವಾಸ ಹಮ್ಮಿಕೊಳ್ಳಲಾಗುವುದು. ಅತಿಥಿ ಉಪನ್ಯಾಸಕರೆಲ್ಲ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಅತಿಥಿ ಉಪನ್ಯಾಸಕ ಮಣಿಕಂಠ ದೇವಾಡಿಗ, ಅತಿಥಿ ಉಪನ್ಯಾಸಕರು ಕಳೆದ ಯುಜಿಸಿ ನಿಯಮಾವಳಿ ಪ್ರಕಾರ ಅತಿಥಿ ಉಪನ್ಯಾಸಕರಿಗೆ 1 ಗಂಟೆಯ ತರಗತಿಗೆ 1,500ರೂ. ವೇತನ ನೀಡಬೇಕು. ಆದರೆ ಅದನ್ನೂ ಪಾಲಿಸುತ್ತಿಲ್ಲ. ವಿದ್ಯಾರ್ಥಿಗಳನ್ನು ರೂಪಿಸುವ ಗುರುಗಳಿಗೆ ಬೆಲೆಯೇ ಇಲ್ಲದಂತಾಗಿರುವುದು ಖೇದಕರ ಎಂದು ಹೇಳಿದರು.
ಎಲ್ಲ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರು ಮುಷ್ಕರ ನಡೆಸುತ್ತಿದ್ದಾರೆ. ಶೇ.75ರಷ್ಟು ಅತಿಥಿ ಉಪನ್ಯಾಸಕರಿದ್ದರೆ, ಕೇವಲ ಶೇ.25ರಷ್ಟು ಮಾತ್ರ ಖಾಯಂ ಉಪನ್ಯಾಸಕರು ಇದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ತರಗತಿಗಳು ನಡೆಯುತ್ತಿಲ್ಲ. ಹಾಗಾಗಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ನಮ್ಮ ಬದುಕು ಕೂಡ ದೊಂಬರಾಟವಾಗಿದೆ. ನಾವು ಮುಂದೆ ಪಕೋಡಾ ಮಾರಾಟ ಮಾಡುವುದು, ಶೂ ಪಾಲಿಶ್ ಮಾಡುವ ಪರಿಸ್ಥಿತಿ ಎದುರಾಗಿದೆ. ಇದಕ್ಕಾದರೂ ಸರಕಾರ ಅನುಮತಿ ಕೊಡಲಿ ಎಂದು ಮನವಿ ಮಾಡದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್, ಕಾರ್ಯದರ್ಶಿ ಡಾ.ಸುಬ್ರಮಣಿ, ಅತಿಥಿ ಉಪನ್ಯಾಸಕರಾದ ಡಾ.ರೇಷ್ಮಾ ಯೋಗಾನಂದ, ಮಮತಾ, ರಂಜಿತ್ ಶೆಟ್ಟಿ, ಸುಬ್ರಹ್ಮಣ್ಯ, ಸತೀಶ್, ವಿನಯ ಚಂದ್ರ, ಮಹೇಶ್ ಕೊಟ್ಟಾರಿ ಹಾಗೂ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಉಪಸ್ಥಿತರಿದ್ದರು.








