ತಾನು ಸಾಕಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ: ಪದ್ಮಶ್ರೀ ಪುರಸ್ಕೃತ ಉದ್ಧವ್ ಕುಮಾರ್ ಭರಾಲಿಗೆ ಜಾಮೀನು

ಗುವಾಹಟಿ: ತಾನು ಪೋಷಿಸುತ್ತಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂಬ ಆರೋಪದ ಮೇಲೆ ಪದ್ಮಶ್ರೀ ಪುಸ್ಕೃತ ನವ ಉದ್ಯಮಿ ಉದ್ಧವ್ ಕುಮಾರ್ ಭಾರಾಲಿಯನ್ನು ಪೊಲೀಸರು ಬಂಧಿಸಿದ್ದು, ಬಳಿಕ ನಿರೀಕ್ಷಣಾ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಈಶಾನ್ಯ ಅಸ್ಸಾಂನ ಲಖಿಂಪುರದಲ್ಲಿ ಮಕ್ಕಳ ಕಲ್ಯಾಣ ಸಮಿತಿಯ (ಸಿಡಬ್ಲ್ಯೂಸಿ) ಅಧ್ಯಕ್ಷರೊಂದಿಗೆ ವಿವಾದ ಉಂಟಾದ ನಂತರ ತನ್ನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿ ಹೇಳಿಕೊಂಡಿದ್ದಾನೆ. ಸಂತ್ರಸ್ತ ಬಾಲಕಿಯರನ್ನು ಪೋಷಿಸುವಂತೆ ಅಧ್ಯಕ್ಷರೇ ಮನವಿ ಮಾಡಿಕೊಂಡಿದ್ದರು ಎಂದು ಅವರು ಆರೋಪಿಸಿದ್ದಾರೆ.
ಡಿಸೆಂಬರ್ 18 ರಂದು ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಅಸ್ಸಾಂ ಪೊಲೀಸರು ಭಾರಾಲಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಇದು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ದೂರನ್ನು ಆಧರಿಸಿದೆ.
ತಳಮಟ್ಟದ ನೂತನ ಅವಿಷ್ಕಾರಗಳಿಗಾಗಿ 400ಕ್ಕೂ ಹೆಚ್ಚು ಪೇಟೆಂಟ್ ಗಳನ್ನು ಪಡೆದಿರುವ ಭಾರಾಲಿ 2019ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದುಕೊಂಡಿದ್ದರು. ಎಫ್‌ಐಆರ್ ದಾಖಲಾದ ನಂತರ ಹೈಕೋರ್ಟ್‌ನಿಂದ ಬಂಧನ ಪೂರ್ವ ಜಾಮೀನು ಕೋರಿದ್ದರು. ನ್ಯಾಯಾಲಯವು ಡಿಸೆಂಬರ್ 28 ರಂದು ಮಧ್ಯಂತರ ಜಾಮೀನು ನೀಡಿದ್ದು, ಜನವರಿ 7ರಂದು ಪ್ರಕರಣದ ತನಿಖೆ ಪ್ರಾರಂಭಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ನ್ಯಾಯಮೂರ್ತಿ ಅರುಣ್ ದೇವ್ ಚೌಧರಿ ಅವರು, "ಆರೋಪಿಸಲಾದ ಅಪರಾಧವು ʼಸ್ವಭಾವದಲ್ಲಿ ಗಂಭೀರವಾಗಿದೆʼ ಆದರೆ ಅರ್ಜಿದಾರರ ಪೂರ್ವಾಪರಗಳನ್ನು ಪರಿಗಣಿಸಿ ಜಾಮೀನು ನೀಡಲಾಗುತ್ತಿದೆ ಹಾಗೂ ಅವರ ಪ್ರತಿಷ್ಠೆಯನ್ನು ಅವಮಾನಿಸಲು ಮತ್ತು ಹಾನಿ ಮಾಡಲು ಬೇಗನೇ ಎಫ್‌ಐಆರ್ ಅನ್ನು ದಾಖಲಿಸಲಾಗಿದೆ" ಎಂಬ ಅವರ ಆರೋಪವನ್ನು ಪರಿಗಣಿಸಿ ಜಾಮೀನು ನೀಡಿದೆ ಎಂದು ಹೇಳಿದ್ದಾರೆ.







