ತಿಂಗಳೊಳಗೆ ಪಿಜಿ ಫಲಿತಾಂಶ : ಪ್ರೊ. ಯಡಪಡಿತ್ತಾಯ

ಮಂಗಳೂರು, ಜ.6: ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿ ಪರೀಕ್ಷೆಗಳ ಫಲಿತಾಂಶವನ್ನು ಮುಂದಿನ ಒಂದು ತಿಂಗಳೊಳಗೆ ಪ್ರಕಟಿಸಲಾಗುವುದು. ಮೌಲ್ಯ ಮಾಪನ ಮಾಡಲು ವಿವಿಯಿಂದ ಹೊರಗಿನ ಪ್ರೊಫೆಸರ್‌ಗಳನ್ನು ಅವಲಂಬಿಸಬೇಕಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಯಡಪಡಿತ್ತಾಯ ಅಭಿಪ್ರಾಯಿಸಿದರು.
ಮಂಗಳೂರು ವಿವಿ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮುಂದಿನ ವರ್ಷದಿಂದ ಡಿಜಿಟಲ್ ವೌಲ್ಯಮಾಪನದ ಅನಿವಾರ್ಯತೆ ಇದೆ. ಈ ಬಗ್ಗೆ ಇ ಟೆಂಡರ್ ಪ್ರಕ್ರಿಯೆ ನಡೆದಿದೆ. ಸಿಂಡಿಕೇಟ್ ಅನುಮತಿ ಪಡೆದು ಶೀಘ್ರವೇ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ಪದವಿ ಪರೀಕ್ಷೆಗಳ ಫಲಿತಾಂಶದಲ್ಲಿ ಆಗಿರುವ ಗೊಂದಲ ಕುರಿತಂತೆ ಪ್ರತಿಕ್ರಿಯಿಸಿದ ಪರೀಕ್ಷಾಂಗ ಕುಲಸಚಿವ ಪ್ರೊ. ಪಿ.ಎಲ್. ಧರ್ಮ, ಈ ಬಾರಿ ಕೋವಿಡ್ ಲಾಕ್‌ಡೌನ್ ಒತ್ತಡದ ನಡುವೆಯೂ ಪರೀಕ್ಷೆ ನಡೆಸಲಾದ ಕಾರಣ ಕೆಲವೊಂದು ಕಾಲೇಜುಗಳಲ್ಲಿ ಇಂಟರ್‌ನಲ್ ಪೇಪರ್ ಕೋಡ್ ಲಿಂಕ್ ಮಾಡುವಾಗ ಆಗಿರುವ ಸಮಸ್ಯೆಯಿಂದ ತೊಂದರೆ ಹಾಗೂ ವಿಳಂಬ ಆಗಿರುವುದು ನಿಜ. ಈ ಕುರಿತಂತೆ ಸಮಸ್ಯೆ ಆಗಿರುವ 38 ಕಾಲೇಜುಗಳ ಪ್ರಾಂಶುಪಾಲರಿಂದ ದಾಖಲೆಗಳನ್ನು ಪಡೆದುಕೊಂಡು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗಿದೆ ಎಂದರು.
ಪರೀಕ್ಷಾಂಗ ವಿಭಾಗಕ್ಕೆ ಪ್ರತ್ಯೇಕ ವೆಬ್‌ಸೈಟ್
ಮಂಗಳೂರು ವಿವಿ ವ್ಯಾಪ್ತಿಯ ಕಾಲೇಜುಗಳ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ವೆಬ್‌ಸೈಟ್ ಮಾಡಲು ಸಿಂಡಿಕೇಟ್ ನಿಂದ ಅನುಮತಿ ದೊರಕಿದೆ. ಮುಂದಿನ ದಿನಗಳಲ್ಲಿ ಈಗಿರುವ ಸಮಸ್ಯೆಗಳು ಬಗೆಹರಿಯಲಿವೆ ಎಂದವರು ಹೇಳಿದರು.
2015ರಿಂದ 2020ರವರೆಗೆ ಹೊರಗುತ್ತಿಗೆಯಡಿ ಸಾಫ್ಟ್‌ವೇರ್ ಮೂಲಕ ಪರೀಕ್ಷಾ ಫಲಿತಾಂಶವನ್ನು ಒದಗಿಸಲಾಗುತ್ತಿತ್ತು. ಕಳೆದ ವರ್ಷದಿಂದ ನಾವೇ ಹೊಸ ಸಾಫ್ಟ್‌ವೇರ್ ಅಭವೃದ್ಧಿಪಡಿಸಿದ್ದೇವೆ. ಹೊಸತಾಗಿರುವ ಕಾರಣ ಕೆಲವೊಂದು ಸಮಸ್ಯೆಗಳು ಕಾಣಿಸಿಕೊಂಡಿವೆ. ತಜ್ಞರ ಸಮಿತಿಯ ಮೂಲಕ ಸಂಪೂರ್ಣ ಪರಿಶೀಲನೆಗೊಳಪಡಿಸಿ ಸಿಂಡಿಕೇಟ್ ಸಭೆಯಲ್ಲಿ ಮಂಡಿಸಲಾಗಿದೆ. ಉತ್ತಮ ಫಲಿತಾಂಶ ನೀಡುವ ಪ್ರಯತ್ನ ಮಾಡಲಾಗಿದೆ. ಆದರೆ ಕೆಲವೊಂದು ಕಾಲೇಜುಗಳ ಇಂಟರ್‌ನಲ್ ಅಂಕಗಳನ್ನು ಲಿಂಕ್ ಮಾಡುವ ಸಂದರ್ಭ ತಾಂತ್ರಿಕ ಅಡಚಣೆಯಿಂದ ಸಮಸ್ಯೆ ಆಗಿದೆ ಎಂದು ಅವರು ಹೇಳಿದರು.







