ಮುಂದಿನ 2-3 ತಿಂಗಳಲ್ಲಿ ಅಕ್ರಮ-ಸಕ್ರಮ ಯೋಜನೆ ಜಾರಿ: ಸಚಿವ ಬೈರತಿ ಬಸವರಾಜು

ತುಮಕೂರು.ಜ.06:ಮುಂದಿನ 2-3 ತಿಂಗಳಲ್ಲಿ ರಾಜ್ಯ ಸರಕಾರ ಅಕ್ರಮ ಸಕ್ರಮ ಯೋಜನೆ ಜಾರಿಗೆ ತರಲಿದೆ ಎಂದು ನಗರಾಭಿವೃದ್ದಿ ಸಚಿವ ಭೈರತಿ ಬಸವರಾಜು ತಿಳಿಸಿದ್ದಾರೆ.
ನಗರದ ಪಾಲಿಕೆ ಸಭಾಂಗಣದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಸಚಿವ ಈಶ್ವರಪ್ಪ ಅವರ ನೇತೃತ್ವದಲ್ಲಿ ಸಚಿವ ಸಂಪುಟದ ಉಪಸಮಿತಿ ರಚಿಸಿದ್ದು, ಈಗಾಗಲೇ 2-3 ಸಭೆಗಳನ್ನು ನಡೆಸಲಾಗಿದೆ. ಅಕ್ರಮ ಸಕ್ರಮ ಯೋಜನೆ ಯಿಂದ ಸರಕಾರಕ್ಕೆ ಆದಾಯವೂ ಬರುವುದರಿಂದ ಸಭೆ ನಡೆಸಿ,ರೂಪರೇಷೆಗಳನ್ನು ಸಿದ್ದಪಡಿಸಿ,ಯೋಜನೆಯನ್ನು ಜಾರಿಗೆ ತರಲಾಗುವುದು ಎಂದರು.
ಅಕ್ರಮ ಸಕ್ರಮ ಯೋಜನೆಯಿಂದ ನಗರದ ಹೊರವಲಯಗಳ ಕಂದಾಯ ನಿವೇಶನಗಳಲ್ಲಿ ಮನೆ ನಿರ್ಮಿಸಿಕೊಂಡಿರುವ ಸಾವಿರಾರು ಜನರಿಗೆ ಅನುಕೂಲವಾಗಲಿದೆ.ಯೋಜನೆ ವ್ಯಾಪ್ತಿಗೆ ಒಳಪಟ್ಟ ಪ್ರದೇಶಗಳಿಗೆ ಮೂಲಭೂತ ಸೌಕರ್ಯ ಒದಿಗಲಸಲು ಸಹ ಸಹಕಾರಿಯಾಗಲಿದೆ.ಈ ನಿಟ್ಟಿನಲ್ಲಿ ಸರಕಾರ ಶೀಘ್ರ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಬಿ.ಎ.ಬಸವರಾಜು ನುಡಿದರು.
ತುಮಕೂರು ಮಹಾನಗರಕ್ಕೆ ಸ್ಮಾರ್ಟ್‍ಸಿಟಿಯಿಂದ ಇದುವರೆಗೂ ಸುಮಾರು 580 ಕೋಟಿ ರೂಗಳನ್ನು ಖರ್ಚು ಮಾಡಿ 180 ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.ಇನ್ನೂ 420 ಕೋಟಿ ರೂಗಳನ್ನು ಬಳಸಬೇಕಾಗಿದೆ. ಇದರಲ್ಲಿ 151 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು,ವಿವಿದ ಹಂತಗಳಲ್ಲಿ ಪ್ರಗತಿಯಲ್ಲಿದೆ.ಅಲ್ಲದೆ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ ಯಡಿ 125 ಕೋಟಿ ರೂಗಳನ್ನು ನೀಡಿದ್ದು,ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ. ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಈ ಎಲ್ಲಾ ಕಾಮಗಾರಿಗಳಿಗೂ ಚಾಲನೆ ನೀಡಲಾಗುವುದು ಎಂದ ಸಚಿವರು,ಪ್ರಸ್ತುತ ರಾಷ್ಟ್ರಮಟ್ಟದಲ್ಲಿ ತುಮಕೂರು ಸ್ಮಾರ್ಟ್‍ಸಿಟಿ 9ನೇ ರ್ಯಾಂಕ್ ಪಡೆದಿದ್ದು, ಕರ್ನಾಟಕದಲ್ಲಿ ಮೊದಲನೇ ಸ್ಥಾನದಲ್ಲಿದೆ ಎಂದರು.
ಇಲಾಖಾ ವ್ಯಾಪ್ತಿಗೆ ಬರುವ 10 ನಗರಪಾಲಿಕೆಗಳಲ್ಲಿಯೂ ಸ್ವಚ್ಚತೆಗೆ ಹೆಚ್ಚಿನ ಅದ್ಯತೆ ನೀಡಲಾಗಿದೆ.ಜೊತೆಗೆ ಅಭಿವೃದ್ದಿಗೆ ಪೂರಕ ವಾತಾವರಣ ಸೃಷ್ಟಿಸಲಾಗುತ್ತಿದೆ.ಆಗಿರುವ ಲೋಪದೋಷಗಳನ್ನು ಸರಿಪಡಿಸಿಕೊಂಡು, ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ದಿ ಕಡೆಗೆ ಹೆಜ್ಜೆ ಇರಿಸಲಾಗುವುದು ಎಂದು ಸಚಿವ ಭೈರತಿ ಬಸವರಾಜು,ಬೆಂಗಳೂರಿಗೆ ಪರ್ಯಾಯವಾಗಿ ವೇಗಬಾಗಿ ಬೆಳೆಯುತ್ತಿರುವ ತುಮಕೂರು ನಗರದ ಸಮಗ್ರ ಅಭಿವೃದ್ದಿ ದೃಷ್ಟಿಯಿಂದ ಮುಂದಿನ ಬಜೆಟ್‍ನಲ್ಲಿ ಮತ್ತಷ್ಟು ಹೆಚ್ಚು ಅನುದಾನವನ್ನು ಒದಗಿಸಲು ಕ್ರಮ ವಹಿಸಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ನಗರಗಳ ಅಭಿವೃದ್ದಿಗೆ ಅದ್ಯತೆ ನೀಡುತಿದ್ದು, ಮುಂದಿನ ದಿನಗಳಲ್ಲಿ ನಗರದ ಹೊರವಲಯದಲ್ಲಿರುವ ಬಡಾವಣೆಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸಲು ಆಯುಕ್ತರಿಗೆ ಸೂಚಿಸುವುದಾಗಿ ತಿಳಿಸಿದರು.
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ,ಬಸವರಾಜ ಬೊಮ್ಮಾಯಿ ಅವರು ನೀರಾವರಿ ಸಚಿವರಾಗಿದ್ದಾಗ ಮೇಕೆದಾಟು ಯೋಜನೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದಾರೆ.ಆದರೆ ಕಾಂಗ್ರೆಸ್ ತನ್ನ ರಾಜಕೀಯ ಪ್ರತಿಷ್ಠೆಗಾಗಿ ಪಾದಯಾತ್ರೆ ಕೈಗೊಂಡಿದೆ.ಈ ಸಂಬಂದ ನೀರಾವರಿ ಸಚಿವರಾದ ಗೋವಿಂದ ಕಾರಜೋಳ ಅವರು ಸ್ಥಳಕ್ಕೆ ಭೇಟಿ ನೀಡಿ, ನಿಜಾಂಶವನ್ನು ಜನರಿಗೆ ತಿಳಿಸಲಿದ್ದಾರೆ ಎಂದರು.
ಈ ವೇಳೆ ಸಂಸದ ಜಿ.ಎಸ್.ಬಸವರಾಜು,ಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ, ಉಪಮೇಯರ್ ನಾಜೀಮಾ ಬಿ ಉಪಸ್ಥಿತರಿದ್ದರು.
ಸುದ್ದಿಗೋಷ್ಠಿ ನಂತರ ಸುಮಾರು 8 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಿಸಿರುವ ನಗರಪಾಲಿಕೆ ನೂತನ ಕಟ್ಟಡ, 16 ಕೋಟಿ ರೂಗಳ ವೆಚ್ಚದಲ್ಲಿ ಏಂಪ್ರೆಸ್ ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನ ಹೊಸ ಸಭಾಂಗಣ ಹಾಗೂ ಮಾರಿಯಮ್ಮ ನಗರದ 72 ಕೊಳಗೇರಿ ನಿವಾಸಿಗಳಿಗಾಗಿ 16 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ವಸತಿ ಸಮುಚ್ಚಯವನ್ನು ಲೋಕಾರ್ಪಣೆಗೊಳಿಸಿದರು.







