ಪಂಜಾಬ್ ಸಿಎಂ ರಾಜೀನಾಮೆಗೆ ಸಂಸದ ನಳಿನ್ ಕುಮಾರ್ ಆಗ್ರಹ

ಮಂಗಳೂರು, ಜ.6: ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ಪ್ರವಾಸ ವೇಳೆ ಭಾರಿ ಭದ್ರತಾ ಲೋಪ ಘಟನೆಗೆ ಸಂಬಂಧಿ ನೈತಿಕ ಹೊಣೆಹೊತ್ತು ಅಲ್ಲಿನ ಸಿಎಂ ರಾಜಿನಾಮೆ ನೀಡಬೇಕು, ಇಲ್ಲವೇ ಅಲ್ಲಿನ ಸರ್ಕಾರವನ್ನು ವಜಾಗೊಳಿಸಬೇಕು ಎಂದು ದ.ಕ. ಸಂಸದ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಗುರುವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಪಂಜಾಬ್ ಸರ್ಕಾರದ ಬೇಜವಾಬ್ದಾರಿ ನಡವಳಿಕೆಯಿಂದ ಪ್ರಧಾನಿ ಮೋದಿ ಅವರು ತಮ್ಮ ಪ್ರವಾಸವನ್ನು ರದ್ದುಪಡಿಸುವಂತೆ ಆಗಿದೆ ಎಂದರು.
ಪ್ರಧಾನಿ ವಾಹನ ಸಂಚಾರ ವೇಳೆ ಝೀರೋ ಟ್ರಾಫಿಕ್ ಕಲ್ಪಿಸಬೇಕಾಗಿತ್ತು. ಆದರೆ ಪ್ರಧಾನಿ ಸಂಚಾರ ವೇಳೆ ರೈತರು ಪ್ರತಿಭಟಿಸಲು ಸಾಧ್ಯವಾಗಿರುವುದು ಹೇಗೆ? ಪ್ರತಿಭಟನಾಕಾರರ ಜೊತೆ ಸ್ಥಳೀಯ ಪೊಲೀಸರು ಚಹಾ ಪಾನ ಮಾಡುತ್ತಿದ್ದ ದೃಶ್ಯಗಳು ವೈರಲ್ ಆಗಿದ್ದು, ಇದು ಪ್ರಧಾನಿಗೆ ಭದ್ರತೆ ಒದಗಿಸಬೇಕಾದ ಅಲ್ಲಿನ ರಾಜ್ಯ ಸರ್ಕಾರದ ವೈಫಲ್ಯವಾಗಿದೆ ಎಂದು ದೂರಿದರು.
ಮೋದಿಯ ವ್ಯಕ್ತಿತ್ವಕ್ಕೆ ಭೀತಿಗೊಂಡ ಕಾಂಗ್ರೆಸ್ ಹಿಂಬಾಗಿಲ ಮೂಲಕ ಪ್ರಧಾನಿಗೆ ಹೊಡೆತ ನೀಡಲು ಹೊರಟಿದೆ. ಪ್ರಧಾನಿ ಭೇಟಿ ವೇಳೆ ನಿಯಮಗಳನ್ನು ಪಾಲಿಸದೆ ಗಾಳಿಗೆ ತೂರಿರುವುದು ಕಾಂಗ್ರೆಸ್ ಮಾನಸಿಕತೆಗೆ ಹಿಡಿದ ಕೈಗನ್ನಡಿ ಎಂದು ಆರೋಪಿಸಿದ ಅವರು, ಪ್ರಧಾನಿ ಮೋದಿ ಭೇಟಿ ವಿಫಲಗೊಳಿಸಲು ಪಂಜಾಬಿನಲ್ಲಿ ನಡೆದ ಪೂರ್ವಯೋಜಿತ ಕೃತ್ಯ ಇದಾಗಿದೆ. ಈಗಾಗಲೇ ದೇಶದಲ್ಲಿ ಜನತೆ ಕಾಂಗ್ರೆಸ್‌ನ್ನು ಹೊರಗಿಟ್ಟಿದ್ದಾರೆ. ಇದೇ ರೀತಿ ಕಾಂಗ್ರೆಸ್ ತನ್ನ ಜಾಯಮಾನ ಮುಂದುವರಿಸಿದರೆ, ಇಡೀ ದೇಶದಲ್ಲಿ ಕಾಂಗ್ರೆಸ್‌ನ್ನು ಜನತೆ ತಿರಸ್ಕರಿಸುತ್ತಾರೆ ಎಂದರು.
ನಾಯಕತ್ವ ಸಾಬೀತಿಗೆ ಪಾದಯಾತ್ರೆ
ಕೋವಿಡ್ ಕಠಿಣ ಮಾರ್ಗಸೂಚಿ ಹೊರತೂ ಕಾಂಗ್ರೆಸ್ ಮೇಕೆದಾಟು ವಿಚಾರದಲ್ಲಿ ಪಾದಯಾತ್ರೆಗೆ ತೀರ್ಮಾನಿಸಿರುವುದು ದುರದೃಷ್ಟಕರ. ಮಾಜಿ ಸಿಎಂ ಸಿದ್ದರಾಮಯ್ಯ ನಡುವಿನ ನಾಯಕತ್ವ ಸಾಬೀತಿಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಈ ಪಾದಯಾತ್ರೆಗೆ ಕಟ್ಟುಬಿದ್ದಿದ್ದಾರೆ. ಇದರಲ್ಲಿ ರಾಜ್ಯದ ಜನತೆಯ ಹಿತಾಸಕ್ತಿ ಯಾವುದೂ ಇಲ್ಲ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಅಸೆಂಬ್ಲಿ ಚುನಾವಣೆಯಲ್ಲಿ ಗೆಲುವಿನ ಸ್ಥಾನ ಸಿಗುವುದಿಲ್ಲ ಎಂಬ ಭೀತಿಯಿಂದ ಕಾಂಗ್ರೆಸ್ ಮೇಕೆ ದಾಟು ವಿಚಾರದಲ್ಲಿ ಪಾದಯಾತ್ರೆಗೆ ಮುಂದಾಗಿದೆ. ಮೇಕೆದಾಟು ವಿಚಾರದಲ್ಲಿಕಾನೂನಾತ್ಮಕ ಸಮಸ್ಯೆ ಬಗೆಹರಿಸಿ ಅದರ ಅನುಷ್ಠಾನಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಲಿವೆ. ಈಗ ಕಾಂಗ್ರೆಸ್ ಕೇವಲ ರಾಜಕೀಯ ಲಾಭಕ್ಕಾಗಿ ಈ ಹೋರಾಟ ಕೈಗೆತ್ತಿಕೊಂಡಿದೆ ಎಂದು ನಳಿನ್ ಕುಮಾರ್ ಆರೋಪಿಸಿದರು.
ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್‌ಗೆ ರಾಜ್ಯದ ಜನತೆಯ ಹಿತಾಸಕ್ತಿ ಇದ್ದಿದ್ದರೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಆಗಲೇ ಬಗೆಹರಿಸಲು ಮುಂದಾಗಬೇಕಿತ್ತು. ಅವರ ಸರ್ಕಾರ ಇದ್ದಾಗ ಒಂದೇ ಒಂದು ಸಭೆ ಕರೆದಿಲ್ಲ ಎಂದು ಹೇಳಿದರು.
ರಾಜಕೀಯ ಕಾರಣಕ್ಕೆ ಕಾಂಗ್ರೆಸ್ ನಡೆಸಲು ಉದ್ದೇಶಿಸಿರುವ ಮೇಕೆದಾಟು ಹೋರಾಟವನ್ನು ಕೈಬಿಡಬೇಕು. ರಾಜ್ಯದಲ್ಲಿ ಈಗ ಹೋರಾಟಕ್ಕಿಂತ ಜನತೆಯ ಆರೋಗ್ಯ ಮುಖ್ಯ. ಅದಕ್ಕಾಗಿ ಕೋವಿಡ್ ನಿರ್ಮೂಲನೆಗೆ ಪಕ್ಷಬೇಧ ಮರೆದು ಸರ್ಕಾರಕ್ಕೆ ಕೈಜೋಡಿಸಬೇಕು. ಅದು ಬಿಟ್ಟು ಬಲಾತ್ಕಾರವಾಗಿ ಅಹಂಕಾರದಲ್ಲಿ ಪಾದಯಾತ್ರೆ ನಡೆಸಿ ಕೋವಿಡ್ ಉಲ್ಬಣಿಸಿದರೆ, ಅದಕ್ಕೆ ಕಾಂಗ್ರೆಸ್ಸೇ ಹೊಣೆಯಾಗುತ್ತದೆ ಎಂದು ನಳಿನ್ ಕುಮಾರ್ ಹೇಳಿದರು.
ಕೋವಿಡ್ ವಾರಾಂತ್ಯ ಕರ್ಫ್ಯೂ, ಲಾಕ್‌ಡೌನ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶಿ ಸೂತ್ರದಂತೆ ಆಯಾ ರಾಜ್ಯ ಸರ್ಕಾರಗಳು ತಜ್ಞರ ಸಮಿತಿ ಶಿಫಾರಸಿನಂತೆ ತೀರ್ಮಾನ ಕೈಗೊಳ್ಳತ್ತವೆ. ಇದರಲ್ಲಿ ಸಚಿವರು, ಶಾಸಕರು ಅಥವಾ ಮುಖ್ಯಮಂತ್ರಿಗಳ ಪಾತ್ರ ಏನೂ ಇಲ್ಲ. ಸರ್ಕಾರಕ್ಕೆ ಜನತೆಯ ಆರೋಗ್ಯ ಮುಖ್ಯ ಎಂದು ಸಂಸದ ನಳಿನ್ ಹೇಳಿದರು.







