ಬಹುಕೋಟಿ ವಂಚನೆ ಪ್ರಕರಣ: ನಿರ್ಮಾಪಕ ಆನಂದ ಅಪ್ಪುಗೋಳ ಬಂಧನ

ಸಾಂದರ್ಭಿಕ ಚಿತ್ರ
ಬೆಳಗಾವಿ, ಜ.6: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅರ್ಬನ್ ಕೋ–ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಬಹುಕೋಟಿ ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿನೆಮಾ ನಿರ್ಮಾಪಕ ಆನಂದ ಬಾಲಕೃಷ್ಣ ಅಪ್ಪುಗೋಳನನ್ನು ಜಾರಿ ನಿರ್ದೇಶನಾಲಯ(ಈಡಿ) ಬಂಧಿಸಿದೆ.
ಠೇವಣಿದಾರರಿಗೆ ವಂಚಿಸಿರುವ ಆರೋಪ ಸಂಬಂಧ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅರ್ಬನ್ ಕೋ–ಆಪರೇಟಿವ್ ಕ್ರೆಡಿಟ್ ಸೊಸೈಟಿ, ಭೀಮಾಂಬಿಕಾ ಹಾಗೂ ಗಜರಾಜ ಸಹಕಾರ ಸಂಘದ ಅಧ್ಯಕ್ಷರೂ ಆದ ಆನಂದ ಬಾಲಕೃಷ್ಣ ಅಪ್ಪುಗೋಳ ವಿರುದ್ಧ 250 ಕೋಟಿ ವಂಚಿಸಿರುವ ಆರೋಪ ಕೇಳಿಬಂದಿತ್ತು.
ಈ ಸಂಬಂಧ ಆನಂದ ಬಾಲಕೃಷ್ಣ ಅಪ್ಪುಗೋಳ ಸೇರಿದಂತೆ 15 ಜನರ ವಿರುದ್ಧ ಬೆಳಗಾವಿಯ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420 ಸೇರಿದಂತೆ ಇನ್ನಿತರೆ ಆರೋಪದಡಿ ವಂಚನೆ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ತನಿಖೆ ನಡೆಸಿದ ಈಡಿ ತನಿಖಾಧಿಕಾರಿಗಳು ಆನಂದ ಬಾಲಕೃಷ್ಣ ಅಪ್ಪುಗೋಳರನ್ನು ಗುರುವಾರ ಬಂಧಿಸಿ ಏಳು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಏನಿದು ಪ್ರಕರಣ?: ಸಂಗೊಳ್ಳಿ ರಾಯಣ್ಣ ಸೊಸೈಟಿಯು ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ 35 ಶಾಖೆಗಳನ್ನು ಹೊಂದ್ದಿದ್ದು, 26 ಸಾವಿರ ಜನರಿಂದ ಠೇವಣಿ ಸಂಗ್ರಹಿಸಿತ್ತು. ಆನಂದ ಬಾಲಕೃಷ್ಣ ಅಪ್ಪುಗೋಳ ಸೇರಿ ಸೊಸೈಟಿಯ ಹಲವು ನಿರ್ದೇಶಕರು ಠೇವಣಿ ಹಣವನ್ನು ಸ್ವಂತಕ್ಕೆ ಬಳಸಿಕೊಂಡು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ದೂರಲಾಗಿತ್ತು. ಈ ಕುರಿತು ಸಹಕಾರ ಇಲಾಖೆ ನಿಬಂಧಕರು 2017 ರಂದು ದೂರು ದಾಖಲಿಸಿದ್ದರು. ಈ ಹಿಂದಿನ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರಕಾರದ ಅವಧಿಯಲ್ಲಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ಇದಾದ ಬಳಿಕ ಈಡಿಯೂ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿತ್ತು.







