ಕಝಕಿಸ್ತಾನದಲ್ಲಿ ವ್ಯಾಪಕ ಪ್ರತಿಭಟನೆ: ಪೊಲೀಸ್ ಕಾರ್ಯಾಚರಣೆಯಲ್ಲಿ ಹಲವರ ಮೃತ್ಯು
ರಶ್ಯಾ ನೇತೃತ್ವದ ಶಾಂತಿಪಾಲನಾ ಪಡೆ ರವಾನೆ

photo:PTI
ಅಲ್ಮಾಟಿ, ಜ.6: ಕಝಕಿಸ್ತಾನದಲ್ಲಿ ತೈಲ ಬೆಲೆ ಹೆಚ್ಚಳ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸೆಗೆ ತಿರುಗಿದ್ದು ಸರಕಾರಿ ಕಟ್ಟಡದ ಮೇಲೆ ಆಕ್ರಮಣಕ್ಕೆ ಮುಂದಾದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಹಲವರು ಮೃತಪಟ್ಟಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಈ ಮಧ್ಯೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರಕಾರಕ್ಕೆ ನೆರವಾಗಲು ರಶ್ಯಾ ನೇತೃತ್ವದ ಮಿಲಿಟರಿ ಒಕ್ಕೂಟದ ಸೇನೆಯನ್ನು ರವಾನಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಮಧ್ಯೆ, ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆಯೇ, ಪ್ರತಿಭಟನಾ ಪೀಡಿತ ಪ್ರದೇಶಗಳಲ್ಲಿ ಜಾರಿಗೊಳಿಸಿದ್ದ ತುರ್ತು ಪರಿಸ್ಥಿತಿಯನ್ನು ದೇಶಾದ್ಯಂತ ವಿಸ್ತರಿಸಲಾಗಿದ್ದು ಜನವರಿ 19ರವರೆಗೆ ಜಾರಿಯಲ್ಲಿರುತ್ತದೆ. ರಾತ್ರಿ ಕರ್ಫ್ಯೂ, ಚಲನವಲನಕ್ಕೆ ನಿರ್ಬಂಧ ಮತ್ತು ಜನಗಂಗುಳಿ ಸೇರುವುದನ್ನು ನಿಷೇಧಿಸಲಾಗಿದೆ ಎಂದು ಅಧ್ಯಕ್ಷ ಕಾಸಿಂ ಟೊಕಯೆವ್ ಘೋಷಿಸಿದ್ದಾರೆ.
ಮಧ್ಯ ಏಶ್ಯಾದ ಮಾಜಿ ಸೋವಿಯತ್ ಗಣರಾಜ್ಯಗಳಲ್ಲಿ ಅತ್ಯಂತ ಸ್ಥಿರ ದೇಶ ಎನಿಸಿಕೊಂಡಿದ್ದ ಕಝಕಿಸ್ತಾನದಲ್ಲಿ ತೈಲ ಸಂಪನ್ಮೂಲ ಹೇರಳವಾಗಿದೆ. ಆದರೆ ಜನವರಿ 1ರಿಂದ ತೈಲ ಬೆಲೆಯನ್ನು ಹೆಚ್ಚಿಸಿರುವುದನ್ನು ವಿರೋಧಿಸಿ ಆರಂಭವಾದ ಪ್ರತಿಭಟನೆ ಸರಕಾರಿ ವಿರೋಧಿ ಪ್ರತಿಭಟನೆಯ ರೂಪಕ್ಕೆ ತಿರುಗಿದೆ. ಒತ್ತಡ ಹೆಚ್ಚುತ್ತಿರುವಂತೆಯೇ ಅಧ್ಯಕ್ಷ ಕಾಸಿಂ ಜೊಮರ್ಟ್ ಟೊಕಯೆವ್ ಅವರು ರಶ್ಯಾ ನೇತೃತ್ವದ, 5 ರಾಷ್ಟ್ರಗಳ ‘ಕಲೆಕ್ಟಿವ್ ಸೆಕ್ಯುರಿಟಿ ಟ್ರೀಟಿ ಆರ್ಗನೈಸೇಷನ್(ಸಿಎಸ್ಟಿಒ)ನ ನೆರವು ಕೋರಿದ್ದರು.
'ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಸ್ಟಿಒ ಮುಖ್ಯಸ್ಥರು ‘ಪರಿಸ್ಥಿತಿಯನ್ನು ಸ್ಥಿರಗೊಳಿಸಲು ಮತ್ತು ಸಾಮಾನ್ಯಗೊಳಿಸಲು ಸೀಮಿತ ಅವಧಿಗೆ ಶಾಂತಿಪಾಲನಾ ಪಡೆಯನ್ನು ಕಝಕಿಸ್ತಾನಕ್ಕೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ಹೊರಗಿನವರ ಹಸ್ತಕ್ಷೇಪ ಈ ಹಿಂಸಾಚಾರಕ್ಕೆ ಕಾರಣ. ಬುಧವಾರ ತಡರಾತ್ರಿ ಉಗ್ರವಾದಿ ಶಕ್ತಿಗಳು ದೇಶದ ಅತೀ ದೊಡ್ಡ ನಗರವಾದ ಅಲ್ಮಾಟಿಯಲ್ಲಿ ಆಡಳಿತ ಕಟ್ಟಡ ಮತ್ತು ಪೊಲೀಸ್ ಇಲಾಖೆಯನ್ನು ಪ್ರವೇಶಿಸಲು ಪ್ರಯತ್ನಿಸಿದಾಗ ಪೊಲೀಸರು ಅವರನ್ನು ಹಿಮ್ಮೆಟ್ಟಿಸಿದರು. ಈ ಕಾರ್ಯಾಚರಣೆಯಲ್ಲಿ ಹಲವು ಆಕ್ರಮಣಕಾರರು ಹತರಾಗಿದ್ದು ಅವರ ಗುರುತು ಪತ್ತೆಹಚ್ಚಲಾಗುತ್ತಿದೆ ಎಂದು ಪೊಲೀಸ್ ಇಲಾಖೆಯ ವಕ್ತಾರೆ ಸಲ್ತನೆಟ್ ಅಝಿರ್ಬೆಕ್ ಹೇಳಿದ್ದಾರೆ. ಮೃತರಲ್ಲಿ ಪೊಲೀಸ್ ಅಧಿಕಾರಿಗಳೂ ಸೇರಿದ್ದಾರೆ ಎಂದು ಮೂಲಗಳು ಹೇಳಿವೆ.
1991ರಲ್ಲಿ ಕಝಕಿಸ್ತಾನ ಸ್ವಾತಂತ್ರ್ಯ ಪಡೆದಂದಿನಿಂದ ಕೆಲವು ಸಂಘಟನೆಗಳಲ್ಲಿ ಬೂದಿಮುಚ್ಚಿದ ಕೆಂಡದಂತಿದ್ದ ಅಸಮಾಧಾನ ಇದೀಗ ತೈಲ ಬೆಲೆ ಏರಿಕೆಯ ವಿರುದ್ಧದ ಪ್ರತಿಭಟನೆಯಾಗಿ ಹೊರಹೊಮ್ಮಿದೆ ಎಂದು ವಿಶ್ಲೇಷಿಸಲಾಗಿದೆ. ಗುರುವಾರ ಸಶಸ್ತ್ರ ಪೊಲೀಸ್ ಪಡೆ, ಸೇನೆಯ ತುಕಡಿಯನ್ನು ನಿಯೋಜಿಸಿ ಬಿಗು ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರೂ ಅಲ್ಮಾಟಿ ನಗರದ ಪ್ರಮುಖ ವೃತ್ತದಲ್ಲಿ ನೂರಾರು ಪ್ರತಿಭಟನಾಕಾರರು ರ್ಯಾಲಿ ನಡೆಸಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಪಡೆ ಆಗಮಿಸುತ್ತಿದ್ದಂತೆಯೇ ಗುಂಡಿನ ಸದ್ದು ಕೇಳಿಸಿದೆ ಎಂದು ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.







