ಪೆಲೆಸ್ತೀನ್ ನ ಸಮಾಜಸೇವಾ ಸಂಸ್ಥೆಗೆ ಅನುದಾನ ಸ್ಥಗಿತಗೊಳಿಸಿದ ನೆದರ್ಲ್ಯಾಂಡ್

photo:twitter/@UAWC1986
ಅಮ್ಸ್ಟರ್ಡಾಂ, ಜ.6: ಭಯೋತ್ಪಾದಕ ಸಂಘಟನೆ ಎಂದು ಇಸ್ರೇಲ್ನಿಂದ ನಿಷೇಧಕ್ಕೆ ಒಳಗಾಗಿರುವ , ಪೆಲೆಸ್ತೀನ್ನ ಸಮಾಜಸೇವಾ ಸಂಸ್ಥೆ ಯೂನಿಯನ್ ಆಫ್ ಎಗ್ರಿಕಲ್ಚರಲ್ ವರ್ಕ್ ಕಮಿಟಿ (ಯುಎಡಬ್ಲ್ಯೂಸಿ)ಗೆ ನೀಡುತ್ತಿರುವ ಆರ್ಥಿಕ ನೆರವನ್ನು ಸ್ಥಗಿತಗೊಳಿಸುವುದಾಗಿ ನೆದರ್ಲ್ಯಾಂಡ್ ಸರಕಾರ ಘೋಷಿಸಿದೆ.
'ಈ ಕ್ರಮವನ್ನು ಖಂಡಿಸಿರುವ ಯುಎಡಬ್ಲ್ಯೂಸಿ ‘ರಾಜಕೀಯ ಷರತ್ತುಗಳ ಹಿನ್ನೆಲೆಯಲ್ಲಿ ಪೆಲೆಸ್ತೀನ್ನ ಸಮಾಜ ಸೇವಾ ಸಂಸ್ಥೆಗೆ ಇದೇ ಮೊದಲ ಬಾರಿಗೆ ಸರಕಾರವೊಂದು ಆರ್ಥಿಕ ನೆರವು ಸ್ಥಗಿತಗೊಳಿಸಿದೆ ಎಂದಿದೆ. ಈ ಸಂಸ್ಥೆಗೆ ನೆದರ್ಲ್ಯಾಂಡ್ ಸರಕಾರ 2013ರಿಂದಲೂ ದೇಣಿಗೆ ನೀಡುತ್ತಿದೆ.
ಇಸ್ರೇಲ್ ವಶಪಡಿಸಿಕೊಳ್ಳುವ ಅಪಾಯದಲ್ಲಿರುವ ಭೂಮಿಯಲ್ಲಿ ಪುನರ್ವಸತಿ ಕಲ್ಪಿಸುವುದು ಸೇರಿದಂತೆ ಪೆಲೆಸ್ತೀನಿಯರಿಗೆ ಹಲವು ವಿಧದಲ್ಲಿ ಯುಎಡಬ್ಲ್ಯೂಸಿ ನೆರವಾಗುತ್ತಿದೆ. ಆಕ್ರಮಿತ ಪಶ್ಚಿಮದಂಡೆಯಲ್ಲಿ ಇಸ್ರೇಲ್ ಸೇನೆಯ ನೇರ ನಿಯಂತ್ರಣದಲ್ಲಿರುವ (ಅಕ್ರಮ ಇಸ್ರೇಲ್ ವಸಾಹತು ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ) ಸಿ-ಪ್ರದೇಶದ 60%ಕ್ಕೂ ಅಧಿಕ ರೈತರಿಗೆ ಈ ಸಂಸ್ಥೆ ಸಹಾಯ ಒದಗಿಸುತ್ತಿದೆ.
ಡಚ್ ಸರಕಾರದ ಹಾನಿಕಾರಕ ಮತ್ತು ಅನ್ಯಾಯದ ನಿರ್ಧಾರವನ್ನು ಪ್ರಶ್ನಿಸುವ ಕಾನೂನು ಕ್ರಮಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಯುಎಡಬ್ಲ್ಯೂಸಿ ಹೇಳಿದ್ದು, ಇದು ನಮ್ಮ ಸಂಸ್ಥೆಯನ್ನು ಮೀರಿ ಪ್ರತಿಧ್ವನಿಸುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ.
2021ರ ಅಕ್ಟೋಬರ್ ನಲ್ಲಿ ಪೆಲೆಸ್ತೀನ್ ಗೆ ಸಂಬಂಧಿಸಿದ 6 ಸಂಘಟನೆಗಳನ್ನು ಭಯೋತ್ಪಾದಕ ಗುಂಪು ಎಂದು ಇಸ್ರೇಲ್ ನಿಷೇಧಿಸಿತ್ತು. ಇವು ಎಡಪಂಥೀಯ ಪಾಪ್ಯುಲರ್ ಫ್ರಂಟ್ ಫಾರ್ ದಿ ಲಿಬರೇಷನ್ ಆಫ್ ಪೆಲೆಸ್ತೀನ್(ಪಿಎಫ್ಎಲ್ಪಿ)ಗೆ ಸಂಯೋಜಿತಗೊಂಡಿವೆ ಎಂದು ಇಸ್ರೇಲ್ ಪ್ರತಿಪಾದಿಸಿತ್ತು. ಈ ಕ್ರಮಕ್ಕೆ ಅಂತರಾಷ್ಟ್ರೀಯ ಸಮುದಾಯ ಮತ್ತು ಮಾನವ ಹಕ್ಕುಗಳ ಸಂಘಟನೆಯಿಂದ ತೀವ್ರ ಖಂಡನೆ ಮತ್ತು ವಿರೋಧ ವ್ಯಕ್ತವಾಗಿತ್ತು.







