ಚಿಕ್ಕಮಗಳೂರು: ಕ್ರೀಡೆಯಿಂದ ದೈಹಿಕ, ಮಾನಸಿಕ ಆರೋಗ್ಯ ಹೆಚ್ಚಲಿದೆ; ಎಸ್ಪಿ ಎಂ.ಎಚ್.ಅಕ್ಷಯ್

ಚಿಕ್ಕಮಗಳೂರು, ಜ.6: ಪ್ರತಿನಿತ್ಯ ಕರ್ತವ್ಯದ ಒತ್ತಡದ ನಡುವೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಆರೋಗ್ಯದೊಂದಿಗೆ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್ ತಿಳಿಸಿದರು.
ಇತ್ತೀಚೆಗೆ ನಗರದ ರಾಮನಹಳ್ಳಿಯ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ನಡೆದ ವೃತ್ತಮಟ್ಟದ ಅರಣ್ಯ ಇಲಾಖೆ ಕ್ರೀಡಾಕೂಟ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ನಿತ್ಯ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಇಂತಹ ಕ್ರೀಡಾಕೂಟಗಳನ್ನು ಆಯೋಜಿಸುವುದರಿಂದ ಸಿಬ್ಬಂದಿಗಳ ಮನಸ್ಸಿಗೆ ನೆಮ್ಮದಿ ಮತ್ತು ಕರ್ತವ್ಯ ನಿರ್ವಹಣೆಗೆ ಸ್ಫೂರ್ತಿ ತುಂಬುತ್ತದೆ. ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆ ಕೆಲಸ ಸಮನ್ವಯತೆಯಿಂದ ಕೂಡಿದ್ದು ಶ್ರದ್ಧೆ ಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಚಿಕ್ಕಮಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸುನೀಲ್ ಪವಾರ್ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡಾಕೂಟದಲ್ಲಿ ಚಿಕ್ಕಮಗಳೂರು ವೃತ್ತ, ಪ್ರಾದೇಶಿಕ ಅರಣ್ಯ ವಿಭಾಗ, ಭದ್ರಾ ಹುಲಿ ಸಂರಕ್ಷಿತ, ಸಾಮಾಜಿಕ ಅರಣ್ಯ ಅಭಿವೃದ್ಧಿ ನಿಗಮದ ನೌಕರರು ಪಾಲ್ಗೊಂಡಿದ್ದು, ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ ಶ್ರದ್ಧೆಯಿಂದ ಕ್ರೀಡಾಕೂಟ ದಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಮಂಗಳವಾರ ನಡೆದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್ ಕ್ರೀಡಾಕೂಟದಲ್ಲಿ ಗೆದ್ದ ತಂಡಗಳಿಗೆ ಬಹುಮಾನ ವಿತರಣೆ ಮಾಡಿದರು. ಭದ್ರ ಸಂರಕ್ಷಿತ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಪ್ರಭಾಕರನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಇ.ಕ್ರಾಂತಿ, ಕೊಪ್ಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ನಿಲೇಶ್ ಶಿಂದೆ ದೇವೂಬ, ಕೊಪ್ಪ ವಿಭಾಗದ ಸತೀಶ್, ಬಿ.ಎಂ.ಬಸಪ್ಪ ಎಲ್.ನಂದೀಶ್ ಸೇರಿದಂತೆ ಅನೇಕರು ಇದ್ದರು.







