ಮುಸ್ಲಿಮರ ನರಮೇಧದ ಕರೆಗೆ ಸುಪ್ರೀಂ ಕೋರ್ಟ್ ಕ್ರಮ ಕೈಗೊಳ್ಳದಿರುವುದು ತೀವ್ರ ನಿರಾಶದಾಯಕ: ನ್ಯಾಯಮೂರ್ತಿ ಮದನ್ ಲೋಕೂರ್

Photo: Thewire.in
ಹೊಸದಿಲ್ಲಿ: ಮುಸ್ಲಿಮರ ನರಮೇಧಕ್ಕಾಗಿ ನೀಡಿದ ಕರೆಯನ್ನು ಸುಪ್ರೀಂ ಕೋರ್ಟ್ ಕೂಡಾ ಗಂಭೀರವಾಗಿ ಪರಿಗಣಿಸದಿರುವುದು ಅತ್ಯಂತ ಕಳವಳಕಾರಿ ಎಂದು ನ್ಯಾಯಮೂರ್ತಿ ಮದನ್ ಬಿ ಲೋಕೂರು ಅಭಿಪ್ರಾಯಪಟ್ಟಿದ್ದಾರೆ.
ಮುಸ್ಲಿಮರ ನರಮೇಧಕ್ಕಾಗಿ ಧರ್ಮ ಸಂಸದ್ ಸಮಾವೇಶದಲ್ಲಿ ನೀಡಿದ ಕರೆಯ ವಿವಾದ ಹೊತ್ತಿ ಉರಿಯುತ್ತಿರುವ ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಲೋಕೂರ್ ಅವರ ಈ ಹೇಳಿಕೆಯು ಸಾಕಷ್ಟು ಗಮನ ಸೆಳೆದಿದೆ. ನರಮೇಧಕ್ಕಾಗಿ ಕರೆ ನೀಡಿದ ಕೂಡಲೇ ಸುಪ್ರೀಂ ಕೋರ್ಟ್ ಕ್ರಮ ತೆಗೆದುಕೊಳ್ಳಬೇಕಿತ್ತು. ಹಾಗೆ ಕ್ರಮ ಜರುಗಿಸುವುದು ಸುಪ್ರೀಂ ಕೋರ್ಟಿನ ಕಾನೂನಾತ್ಮಕ ಹಾಗೂ ನೈತಿಕ ಕರ್ತವ್ಯ ಎಂದು ಅವರು ಹೇಳಿದ್ದಾರೆ.
ಆರ್ಟಿಕಲ್ 3 ಪ್ರಕಾರ ನರಮೇಧಕ್ಕಾಗಿ ನೀಡುವ ಕರೆಯನ್ನೂ ನರಮೇಧವೆಂದೇ ಪರಿಗಣಿಸಬೇಕು. ಅದರ ಪ್ರಕಾರ, ನರಮೇಧದಂತಹ ಗಂಭೀರ ಪ್ರಕರಣದಲ್ಲಿಯೂ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸದೆ ಮೌನ ವಹಿಸಿರುವುದು ಹಾಗೂ ಕ್ರಮ ತೆಗೆದುಕೊಳ್ಳದೆ ಇರುವುದು ಅತ್ಯಂತ ಕಳವಳಕಾರಿ ಸಂಗತಿ ಎಂದು ಅವರು ಬಣ್ಣಿಸಿದ್ದಾರೆ.
Thewire.in ಗಾಗಿ ಖ್ಯಾತ ಪತ್ರಕರ್ತ ಕರನ್ ಥಾಪರ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಸ್ವಯಂ ಪ್ರೇರಿತವಾಗಿ ಮಧ್ಯಪ್ರವೇಶಿಸಲು ಇಷ್ಟವಿಲ್ಲದಿದ್ದರೂ, ಕನಿಷ್ಟ ಪಕ್ಷ ಮಾಜಿ ಕಾನೂನು ಸಚಿವರು ಸೇರಿದಂತೆ 76 ಮಂದಿ ವಕೀಲರ ನಿಯೋಗ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಬೇಕೆಂದು ಪತ್ರ ಬರೆದ ಮೇಲಾದರೂ ಪ್ರಕರಣವನ್ನು ಕೈಗೆತ್ತಿಕೊಳ್ಳಬಹುದಿತ್ತು ಎಂದು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಏನು ಮಾಡಬಹುದಿತ್ತು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಘಟನೆ ನಡೆದ ತಕ್ಷಣವೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಘಟನೆ ಬಗ್ಗೆ 24 ಗಂಟೆಗಳೊಳಗೆ ವರದಿ ನೀಡುವಂತೆ ನಿರ್ದೇಶಿಸಬಹುದಿತ್ತು. ಅದಾದ ಬಳಿಕ ನಿರ್ದಿಷ್ಟ ಅವಧಿಯೊಳಗೆ ಸಮಗ್ರ ತನಿಖೆ ಮಾಡಿ ವರದಿ ನೀಡುವಂತೆ ಕೇಳಬಹುದಾಗಿತ್ತು. ಮೂರನೆಯದಾಗಿ ನರಮೇಧಕ್ಕಾಗಿ ಕರೆ ನೀಡಿದವರನ್ನು ತಕ್ಷಣವೇ ಬಂಧಿಸಿ ಕಂಬಿ ಹಿಂದೆ ಹಾಕಿಸಬಹುದಿತ್ತು ಎಂದು ತಿಳಿಸಿದ್ದಾರೆ.
ನರಮೇಧಕ್ಕೆ ಕರೆ ನೀಡಿದಾಗಲೆಲ್ಲಾ ಕ್ರಮ ಕೈಗೊಳ್ಳುವುದು ಸುಪ್ರೀಂ ಕೋರ್ಟ್ಗೆ ನೈತಿಕ ಹಾಗೂ ಕಾನೂನಿನಡಿಯ ಕರ್ತವ್ಯವಾಗಿರುತ್ತದೆ. ಮೂಲಭೂತ ಹಕ್ಕುಗಳ ಚ್ಯುತಿಯಾಗದಂತೆ ರಕ್ಷಕನಾಗಿ ನಿಲ್ಲುವ ಅಧಿಕಾರ ಸುಪ್ರೀಂ ಕೋರ್ಟ್ಗೆ ಇದೆ. ನರಮೇಧಕ್ಕೆ ಕರೆ ನೀಡುವುದು ಮೂಲಭೂತ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದ್ದು ಸುಪ್ರೀಂ ಕೋರ್ಟ್ ಮೂಲಭೂತ ಹಕ್ಕುಗಳ ರಕ್ಷಣೆಗಾಗಿಯಾದರೂ ಈ ಪ್ರಕರಣದಲ್ಲಿ ಭಾಗಿಯಾಗಬಹುದಿತ್ತು.
ಹೊಸ ವರ್ಷದ ವಿರಾಮ ಕಳೆದು ನಾಲ್ಕು ದಿನಗಳ ನಂತರವೂ ಕೋರ್ಟ್ ಏಕೆ ಕ್ರಮಕೈಗೊಂಡಿಲ್ಲ ಎಂಬುದು ವಿವರಿಸಲಾಗದ ಸಂಗತಿಯಾಗಿದೆ. ಸುಮೋಟೋ ಅಲ್ಲವಾದರೂ ಸಹ, 76 ವಕೀಲರು ಪತ್ರ ಬರೆದ ಬಳಿಕವಾದರೂ ಕ್ರಮ ಕೈಗೊಳ್ಳಬದುದಿತ್ತು ಎಂದು ಅವರು ಹೇಳಿದ್ದಾರೆ.
ದಿಲ್ಲಿ ಹೈಕೋರ್ಟ್ನ ಮಾಜಿ ನ್ಯಾಯಾಧೀಶೆ ರೇಖಾ ಶರ್ಮಾ ಅವರು ಇಂಡಿಯನ್ ಎಕ್ಸ್ಪ್ರೆಸ್ನಲ್ಲಿ ಬರೆದಿರುವ ಲೇಖನದಲ್ಲಿ, ʼಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಮಾತ್ರವಲ್ಲದೆ ಉಳಿದ ಪ್ರತಿಯೊಬ್ಬ ನ್ಯಾಯಾಧೀಶರು ಕೂಡಾ ಈ ವಿಷಯದಲ್ಲಿ ಕಾರ್ಯನಿರ್ವಹಿಸುವ ಅಧಿಕಾರವನ್ನು ಮತ್ತು ಬಾಧ್ಯತೆಯನ್ನು ಹೊಂದಿದ್ದಾರೆʼ ಎಂದು ನೀಡಿರುವ ಹೇಳಿಕೆಯನ್ನು ಒಪ್ಪಿಕೊಂಡ ಲೋಕೂರ್, ಸುಪ್ರೀಂ ಕೋರ್ಟ್ನ 30 ನ್ಯಾಯಾಧೀಶರಲ್ಲಿ ಒಬ್ಬರೂ ಕೂಡ ನರಮೇಧದ ವಿಷಯದಲ್ಲಿ ಮಧ್ಯಪ್ರವೇಶಿಸಲು ಮುಂದಾಗದಿರುವುದು ಸೋಜಿಗ. ಇದು ಅತ್ಯಂತ ಕಳವಳಕಾರಿ ಸಂಧರ್ಭ ಎಂದು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿದಿರುವುದು ದೇಶಕ್ಕೆ ಯಾವ ಸಂದೇಶವನ್ನು ರವಾನಿಸುತ್ತದೆ ಎಂದು ಪ್ರಶ್ನಿಸಿದಾಗ, ಇದನ್ನೊಂದು ʼಭಯಾನಕ ಸನ್ನಿವೇಶʼ, ಇದರಿಂದ ತೊಂದರೆಗೆ ಒಳಗಾಗುತ್ತೇವೆ ಎಂದು ಅವರು ಬಣ್ಣಿಸಿದ್ದಾರೆ.







