ಬಾಬಾಬುಡಾನ್ ಗಿರಿ ದರ್ಗಾ ವಿಚಾರ: ಜ.13ರಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ

ಫೈಲ್ ಚಿತ್ರ
ಬೆಂಗಳೂರು, ಜ.6: ಚಿಕ್ಕಮಗಳೂರು ಜಿಲ್ಲೆಯ ಐ.ಡಿ.ಪೀಠದ ಶ್ರೀ ಗುರುದತ್ತಾತ್ತ್ರೇಯ ಬಾಬಾಬುಡಾನ್ಸ್ವಾಮಿ ದರ್ಗಾ ಸಂಸ್ಥೆಗೆ ಪೂಜಾ ವಿಧಿವಿಧಾನಗಳ ಬಗ್ಗೆ ಸರಕಾರವೆ ಹೊಸದಾಗಿ ತೀರ್ಮಾನ ಕೈಗೊಳ್ಳುವಂತೆ ಹೈಕೋರ್ಟ್ ಕಳೆದ ಸೆಪ್ಟಂಬರ್ 29ರಂದು ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಕಾನೂನು ಸಚಿವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಚಿವ ಸಂಪುಟದ ಉಪ ಸಮಿತಿಯ ಸಭೆಯನ್ನು ಇಂದು ಮುಂದೂಡಲಾಯಿತು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ನೇತೃತ್ವದಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಸಭೆಯನ್ನು ಕರೆಯಲಾಗಿತ್ತು. ಸಚಿವ ಎಸ್.ಅಂಗಾರ, ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ, ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಎನ್.ಕೆ.ಎಂ.ಶಾಫಿ ಸಅದಿ, ಸದಸ್ಯ ಅಡ್ವೊಕೇಟ್ ಆರ್.ಅಬ್ದುಲ್ ರಿಯಾಝ್ ಖಾನ್ ಸಭೆಗೆ ಆಗಮಿಸಿದ್ದರು. ಆದರೆ, ದರ್ಗಾದ ಶಾ ಖಾದ್ರಿ ಗೈರು ಹಾಜರಾಗಿದ್ದರು.
ಈ ಹಿನ್ನೆಲೆಯಲ್ಲಿ ಇಂದಿನ ಸಭೆಯನ್ನು ಮುಂದೂಡಿ, ಜ.13ರಂದು ಬೆಳಗ್ಗೆ 10.30ಕ್ಕೆ ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿ, ಅಲ್ಲಿಯೇ ಸಾರ್ವಜನಿಕರಿಂದ ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಸಲಹೆಗಳನ್ನು ಸ್ವೀಕರಿಸಲು ಸಚಿವ ಸಂಪುಟ ಉಪ ಸಮಿತಿಯು ನಿರ್ಧರಿಸಿದೆ.





