ರೊಮೇನಿಯಾ: ಒಮೈಕ್ರಾನ್ ಪ್ರಕರಣ ಉಲ್ಬಣ

ಸಾಂದರ್ಭಿಕ ಚಿತ್ರ
ಬುಕಾರೆಸ್ಟ್, ಜ.6: ಯುರೋಪ್ನಲ್ಲಿ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಕ್ಷೇತ್ರಕ್ಕೆ ಅತ್ಯಲ್ಪ ವೆಚ್ಚ ಮಾಡುವ ದೇಶ ಎನಿಸಿರುವ ರೊಮೇನಿಯಾದಲ್ಲಿ ಒಮೈಕ್ರಾನ್ ಸೋಂಕಿನ ಪ್ರಕರಣ ತೀವ್ರಗತಿಯಲ್ಲಿ ಉಲ್ಬಣಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಯುರೋಪಿಯನ್ ಯೂನಿಯನ್ನ ಸದಸ್ಯ ರಾಷ್ಟ್ರಗಳಲ್ಲಿ ಆರೋಗ್ಯ ವ್ಯವಸ್ಥೆಯ ಶ್ರೇಯಾಂಕ ಪಟ್ಟಿಯಲ್ಲಿ ರೊಮೇನಿಯಾ ನಿರಂತರವಾಗಿ ಕಳಪೆ ಸಾಧನೆ ತೋರುತ್ತಿದೆ. ರೊಮೇನಿಯಾದಲ್ಲಿ ಈಗ ದೈನಂದಿನ ಸೋಂಕು ಪ್ರಕರಣ 1,800ಕ್ಕೆ ತಲುಪಿದ್ದು ಅತೀ ಶೀಘ್ರದಲ್ಲೇ ದೈನಂದಿನ ಸೋಂಕು ಪ್ರಕರಣ 25,000 ತಲುಪಬಹುದು ಎಂದು ಸಾಂಕ್ರಾಮಿಕ ರೋಗ ಕೇಂದ್ರದ ಮುಖ್ಯಸ್ಥ ಅಡ್ರಿಯಾನಾ ಪಿಸ್ತಲ್ ಎಚ್ಚರಿಸಿದ್ದರು. ಯುರೋಪಿಯನ್ ಯೂನಿಯನ್ ದೇಶಗಳಲ್ಲಿ ಕನಿಷ್ಟ ಲಸಿಕಾಕರಣ ಪ್ರಕ್ರಿಯೆ ದಾಖಲಿಸಿದ ದೇಶಗಳ ಪಟ್ಟಿಯಲ್ಲಿ ಬಲ್ಗೇರಿಯಾ ಮೊದಲ ಸ್ಥಾನದಲ್ಲಿದ್ದರೆ ರೊಮೇನಿಯಾ 2ನೇ ಸ್ಥಾನದಲ್ಲಿದೆ.
"ಆದರೆ ಲಸಿಕೆ ಹಾಕಿಸಿಕೊಳ್ಳುವ ವಿಷಯದಲ್ಲಿ 20 ಮಿಲಿಯನ್ ಜನಸಂಖ್ಯೆ ಇರುವ ರೊಮೇನಿಯಾದ ಜನರಲ್ಲಿ ಸಂದೇಹ ಮತ್ತು ಗೊಂದಲ ನೆಲೆಸಿದೆ. ‘ಇದು ನಿಜವಾದ ಸಾಂಕ್ರಾಮಿಕವಲ್ಲ. ಇದೊಂದು ಉನ್ಮಾದದ ಪ್ರಕ್ರಿಯೆಯಾಗಿದೆ ಮತ್ತು ರಾಜಕೀಯ ದೃಷ್ಟಿಯಿಂದ, ಹಣ ಮಾಡುವ ಉದ್ದೇಶದಿಂದ ನಡೆಸಲ್ಪಡುವ ಪ್ರಕ್ರಿಯೆಯಾಗಿದೆ" ಎಂದು ರೊಮೇನಿಯಾದ ಲೇಖಕ ಮಾರಿಯಸ್ ಮಿಯೋಕ್ ಪ್ರತಿಪಾದಿಸಿದ್ದಾರೆ.
‘ನಿಮ್ಮನ್ನು ಮೂರ್ಖರನ್ನಾಗಿಸಿದ್ದಾರೆ ಎಂದು ಜನರಿಗೆ ಮನವರಿಕೆ ಮಾಡುವುದಕ್ಕಿಂತ ಅವರನ್ನು ಮೂರ್ಖರನ್ನಾಗಿಸುವುದು ಸುಲಭದ ವಿಷಯ ಎಂಬ ಖ್ಯಾತ ಸಾಹಿತಿ ಮಾರ್ಕ್ ಟ್ವೈನ್ ಅವರ ಹೇಳಿಕೆಯನ್ನು ಮಿಯೋಕ್ ಉಲ್ಲೇಖಿಸಿದ್ದಾರೆ. ತಮ್ಮ ಪುಸ್ತಕದ ಸ್ವಯಂ ಪ್ರಕಾಶಕರಾಗಿರುವ ಮಿಯೋಕ್ ಅವರ ‘ಕೋವಿಡ್-ದಿ ಲೈ ಆಫ್ ದಿ ಸೆಂಚುರಿ (ಕೋವಿಡ್-ಶತಮಾನದ ಸುಳ್ಳು) ಎಂಬ ಕೃತಿ ಇತ್ತೀಚೆಗೆ ಬಿಡುಗಡೆಯಾಗಿದೆ. ಆದರೆ ಈ ಪುಸ್ತಕದ ಮಾರಾಟಕ್ಕೆ ಅಂಗಡಿಯವರು ಹಿಂಜರಿಯುತ್ತಿದ್ದು ಇದೆಲ್ಲಾ ಷಡ್ಯಂತ್ರದ ಒಂದು ಭಾಗ ಎಂದವರು ಹೇಳಿದ್ದಾರೆ.







