ನೀಟ್ ಸ್ನಾತಕೋತ್ತರ ಪ್ರವೇಶಾತಿ: ಕೌನ್ಸೆಲಿಂಗ್ ಆರಂಭಿಸಲು ಸುಪ್ರೀಂ ಸೂಚನೆ

ಹೊಸದಿಲ್ಲಿ,ಜ.6: ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ (ನೀಟ್)ಯ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ಆರಂಭಿಸಬೇಕೆಂದು ಸುಪ್ರೀಂ ಕೋರ್ಟ್ ಗುರುವಾರ ಸೂಚಿಸಿರುವುದಾಗಿ ‘ಬಾರ್ ಆ್ಯಂಡ್ ಬೆಂಚ್’ ಕಾನೂನು ಸುದ್ದಿಜಾಲತಾಣ ವರದಿ ಮಾಡಿದೆ. ಆದಾಗ್ಯೂ ನೀಟ್ ಪ್ರವೇಶಾತಿಯಲ್ಲಿ ಆರ್ಥಿಕವಾಗಿ ದುರ್ಬಲ ವರ್ಗ ಶ್ರೇಣಿಯಡಿಯಲ್ಲಿನ ಮೀಸಲಾತಿ ಕುರಿತ ತನ್ನ ತೀರ್ಪನ್ನು ಅದು ಕಾಯ್ದಿರಿಸಿದೆ.
‘‘ ಕಳೆದ ಎರಡು ದಿನಗಳಿಂದ ನಾವು ಪ್ರಕರಣದ ಆಲಿಕೆಯನ್ನು ನಡೆಸುತ್ತಿದ್ದೇವೆ. ರಾಷ್ಟ್ರೀಯ ಹಿತದೃಷ್ಟಿಯಿಂದ ಕೌನ್ಸೆಲಿಂಗ್ ಆರಂಭಗೊಳ್ಳಬೇಕಾಗಿದೆ ’’ ಎಂದು ನ್ಯಾಯಾಲಯ ತಿಳಿಸಿತು.
ನೀಟ್ ಪ್ರವೇಶಾತಿಯಲ್ಲಿ ಆರ್ಥಿಕವಾಗಿ ದುರ್ಬಲ ವರ್ಗ ಶ್ರೇಣಿಯಡಿ ಮೀಸಲಾತಿಯನ್ನು ನೀಡಲು 8 ಲಕ್ಷ ರೂ. ವಾರ್ಷಿಕ ಆದಾಯದ ಮಿತಿಯನ್ನು ವಿಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಸಾಮಾನ್ಯವರ್ಗಗಳಿಗೆ ಸೇರಿದ ನೀಟ್ ಪ್ರವೇಶಾಕಾಂಕ್ಷಿಗಳ ಗುಂಪೊಂದು ಈ ಅರ್ಜಿಗಳನ್ನು ಸಲ್ಲಿಸಿತ್ತು. ನೀಟ್ ಸ್ನಾತಕೋತ್ತರ ಹಾಗೂ ಪದವಿ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಹಾಗೂ ಆರ್ಥಿಕವಗಿ ದುರ್ಬಲ ವರ್ಗಗಳಿಗೆ ಮೀಸಲಾತಿ ನೀಡಿರುವುದನ್ನು ಈ ಅರ್ಜಿಗಳಲ್ಲಿ ಪ್ರಶ್ನಿಸಲಾಗಿತ್ತು. ಈ ಪ್ರಕರಣವು ಇತ್ಯರ್ಥವಾಗುವವರೆಗೆ ನೀಟ್ ಪ್ರವೇಶಾತಿಗೆ ಕೌನ್ಸೆಲಿಂಗ್ಆರಂಭಿಸುವುದಿಲ್ಲವೆಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿತ್ತು.







