ಭಾರತದ ಸ್ವಾತಂತ್ರಕ್ಕೆ ಮುಳುವಾಗಿರುವ ಜಾತಿ ವ್ಯವಸ್ಥೆ

ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಹೋರಾಟದ ಕುಲುಮೆ ಆರಿಹೋಗಿ ಸಮಾಜದ ಚೈತನ್ಯ ಉಡುಗಿಹೋಗಲಾರಂಭಿಸಿತು. ಯಾವ ವ್ಯವಸ್ಥೆ ಸಹಸ್ರಾರು ವರ್ಷಗಳಿಂದ ಭಾರತೀಯರನ್ನು ಸ್ವಾಭಿಮಾನ ಹೀನರನ್ನಾಗಿ ಮಾಡಿ ಪರಾಡಳಿತದ ಬಂಧನಕ್ಕೊಳಪಡಿಸಿತ್ತೋ ಅದೇ ವ್ಯವಸ್ಥೆ ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಪುನರುಜ್ಜೀವನಗೊಂಡಿತು. ದೇಶದ ರಾಜಕೀಯ ಸ್ವಾತಂತ್ರ್ಯವನ್ನು ಆ ವ್ಯವಸ್ಥೆ ತನ್ನ ಹಿತದ ಸಾಧನವನ್ನಾಗಿ ಮಾರ್ಪಡಿಸಿತು. ಉತ್ತಮ ಬದುಕಿನ ಎಲ್ಲ ಅವಕಾಶಗಳ ಮೇಲೂ ಆ ಅವ್ಯವಸ್ಥೆ ತನ್ನ ಸ್ವಾಮ್ಯವನ್ನು ಸ್ಥಾಪಿಸಿತು. ರಾಷ್ಟ್ರೀಯ ಸಂಪತ್ತಿನ ಬಹುಪಾಲನ್ನು ತನ್ನದಾಗಿ ಮಾಡಿಕೊಂಡಿತು. ಸ್ವತಂತ್ರ ಭಾರತದ ರಾಜಕೀಯ ವ್ಯವಸ್ಥೆಯನ್ನು ಭ್ರಷ್ಟಗೊಳಿಸಿತು. ಅದೇ ಜಾತಿ ವ್ಯವಸ್ಥೆ.
ಅಂದು 1947ರ ಆಗಸ್ಟ್ 14ರ ಮಧ್ಯರಾತ್ರಿ ಮುಗಿದು ಆಗಸ್ಟ್ 15 ಅರಳಿದ ಐತಿಹಾಸಿಕ ಘಳಿಗೆಯಲ್ಲಿ ಬ್ರಿಟಿಷ್ ಸಾಮಾಜ್ರಶಾಹಿಯ ಆಡಳಿತದ ಪುಟಗಳು ಮಡಚಿಕೊಂಡು ಸ್ವತಂತ್ರ ಭಾರತದ ಇತಿಹಾಸ ತೆರೆದುಕೊಂಡಿತು. ಸಹಸ್ರ ವರ್ಷಗಳ ಪರಾಡಳಿತದಲ್ಲಿ ಮುದುಡಿ ಹೋಗಿದ್ದ ಭಾರತೀಯರ ಮನಸ್ಸು ಅಂದು ಅರಳಿತು. ಅರಳಿದ ಈ ಮನಸ್ಸುಗಳಿಂದ ಭವ್ಯ ಭಾರತದ ಹೊಂಗನಸುಗಳ ಕಂಪು ಹರಡಿತು. ಸರ್ವಸಮಾನತೆಯ ಸಮೃದ್ಧ ಭಾರತದ ಕಲ್ಪನೆಗಳು ಕವಲೊಡೆದವು.
ಆದಿನ ಮೂವತ್ತ ಮೂರು ಕೋಟಿ ಭಾರತೀಯರ ಪ್ರತಿನಿಧಿಯಾಗಿ ಬ್ರಿಟಿಷ್ ಪ್ರಭುಗಳಿಂದ ರಾಜ್ಯಾಧಿಕಾರವನ್ನು ಪಡೆದ ಪ್ರಧಾನಿ ಜವಾಹರಲಾಲ್ ನೆಹರೂ ಭಾವುಕರಾಗಿ ಮಾತನಾಡಿ, ದೇಶದ ಸಮಸ್ತ ಪ್ರಜ್ಞಾವಂತ ಪ್ರಜಾಸಮೂಹದ ಆಶೋತ್ತರಗಳನ್ನು ಪ್ರತಿಧ್ವನಿಸಿದರು. ಸ್ವಾತಂತ್ರ ಗಳಿಕೆಯ ಆ ಐತಿಹಾಸಿಕ ಸನ್ನಿವೇಶದಲ್ಲಿ 'ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ' ಕಾಯಕ ಆರಂಭವಾಯಿತೆಂಬ ಮಾತುಗಳನ್ನಾಡಿದರು.
ನಿಜ, ಅಂದು ಜವಾಹರಲಾಲ್ ನೆಹರೂ ಬಿಡಿಸಿದ್ದ ಸುಂದರ-ಸಮೃದ್ಧ ಭಾರತದ ನುಡಿ ಚಿತ್ರವನ್ನು ಸಾಕಾರಗೊಳಿಸುವ ವೈಚಾರಿಕ ಒಲವು ಪ್ರಜಾಸಮೂಹದಲ್ಲೂ ಇತ್ತು ಮತ್ತು ಇದಕ್ಕೆ ಪೂರಕವಾದ ರಾಜಕೀಯ ಪ್ರೌಢಿಮೆಯೂ ಮುಖಂಡರಾದವರಲ್ಲಿತ್ತು. ಸ್ವಾತಂತ್ರದ ಹೆದ್ದಾರಿಯಲ್ಲಿ ಅಂದು ಭಾರತವು ಸುಖ-ಸಮೃದ್ಧಿಯೆಡೆಗೆ ಇಟ್ಟ ದಾಪುಗಾಲನ್ನು ಸಮಗ್ರ ಜಗತ್ತೇ ಅತ್ಯಾಸಕ್ತಿಯಿಂದ ಗಮನಿಸಿತ್ತು. ಅಪಾರ ಜನಶಕ್ತಿ ಹಾಗೂ ನಿಸರ್ಗ ಸಂಪತ್ತಿನ ಆಗರವಾಗಿರುವ ಭಾರತದ ಸ್ವಾತಂತ್ರವು ಜಗತ್ತಿನಲ್ಲಿ ಹೊಸ ಶಕ್ತಿಯೊಂದರ ಉಗಮದ ಸಂಕೇತವೆಂದು ಸಮಗ್ರ ವಿಶ್ವವೇ ಭಾವಿಸಿತ್ತು.
ಹೌದು, ನಮಗಾಗ ಎಲ್ಲ ಅಲಂಕಾರಗಳೂ ಇದ್ದವು. ಅಂದಿನ ವಿಶ್ವದಲ್ಲಿ ಎಲ್ಲರಿಗೂ ಎದ್ದು ಕಾಣುವ ಮಹಾಮೇಧಾವಿಗಳೂ-ಮುತ್ಸದ್ದಿಗಳೂ ಆದ ರಾಜಕಾರಣಿಗಳು ಈ ದೇಶದಲ್ಲಿ ಅನೇಕರಿದ್ದರು. ಸುಖೀ ಸಮಾಜವೊಂದರ ಶಿಲ್ಪಿಗಳಾಗಬಲ್ಲ ನುರಿತ ಆಡಳಿತಗಾರರೂ ಆಗಿದ್ದರು.ತಮ್ಮ ಬದುಕಿನ ವಾಸ್ತವವಾಗಿರುವ ಎಲ್ಲಾ ಭಿನ್ನತೆಗಳನ್ನೂ ಬದಿಗೊತ್ತಿ ರಾಷ್ಟ್ರೀಯ ಭಾವನೆಗಳಲ್ಲಿ ಒಂದಾಗಿ ಬೆರೆಯಬಲ್ಲ ಪ್ರಜಾಸಮೂಹವಿತ್ತು. ಪರಾಡಳಿತದಿಂದ ಮುಕ್ತವಾಗಿ ಸ್ವಾತಂತ್ರ್ಯದೆಡೆಗೆ ಮುನ್ನಡೆದ ಜಗತ್ತಿನ ಇನ್ಯಾವ ದೇಶಕ್ಕೆ ಹೋಲಿಸಿದರೂ ಭಾರತದಷ್ಟು ಸಮೃದ್ಧ ಹಾಗೂ ಅನುಕೂಲಕರ ಸ್ಥಿತಿಯಲ್ಲಿದ್ದ ದೇಶ ಇನ್ನೊಂದಿಲ್ಲವೆನ್ನಬಹುದು.
ಇಷ್ಟೆಲ್ಲ ಇದ್ದರೂ ಈ ದೇಶ ಇಂದೇನಾಗಿದೆ? 1947ರ ಆಗಸ್ಟ್ 15ರಂದು ನಾವು ಆರಂಭಿಸಿದ್ದ ಉಜ್ವಲ ಭಾರತದ ಪ್ರಯಾಣ ಈಗೆಲ್ಲಿ ಮುಟ್ಟಿದೆ? ಅಂದು ಅರಳಿದ್ದ ಸಮೃದ್ಧ ಭಾರತದ ಕಲ್ಪನೆ ಈಗೆಲ್ಲಿ ಕಮರಿ ಹೋಗಿದೆ? ಅಂದು ಮೇಧಾವಿ ರಾಜಕಾರಣಿಗಳಿಂದ ತುಂಬಿದ್ದ ಭಾರತದಲ್ಲಿ ಇಂದೇಕೆ ಅಪಾಪೋಲಿ ರಾಜಕಾರಣಿಗಳ ಅಟ್ಟಹಾಸ ನಡೆಯುತ್ತಿದೆ? ಅಂದು ಭಾರತೀಯರನ್ನೆಲ್ಲಾ ಒಂದು ವೈಚಾರಿಕ ಎರಕಕ್ಕೆ ತಂದಿದ್ದ ರಾಷ್ಟ್ರೀಯ ಭಾವನೆ ಇಂದೇಕೆ ಕರಗಿ ಹೋಗುತ್ತಿದೆ? ಅಂದು ಸಾರ್ವಜನಿಕ ಜೀವನದಲ್ಲಿದ್ದ ಸ್ವಚ್ಛತೆ ಇಂದೇಕೆ ಮಾಲಿನ್ಯದ ಮಹಾರಾಶಿಯಾಗಿ ಪರಿವರ್ತನೆ ಗೊಂಡಿದೆ? ಮನುಷ್ಯನನ್ನು ಮನುಷ್ಯನಾಗಿ ಕಾಣಲಾಗದಷ್ಟು ನಮ್ಮ ಮನಸ್ಸೇಕೆ ಕಲುಷಿತಗೊಂಡಿದೆ? ಅಂದು ಸರಳಜೀವನಕ್ಕೆ ಸಿಗುತ್ತಿದ್ದ ಮರ್ಯಾದೆ ಇಂದೇಕೆ ವೈಭವೋಪೇತ ಭೋಗ ಜೀವನಕ್ಕೆ ಸಿಗುತ್ತಿದೆ?
ಸ್ವಾತಂತ್ರ್ಯ ಬಂದು ನಲ್ವತ್ತೊಂದು ವರ್ಷಗಳಾದರೂ ಮಾನವ ಉತ್ಕರ್ಷಕ್ಕೆ ಮೂಲ ವಸ್ತುವಾದ ವಿದ್ಯೆಯಿಂದ ಶೇಕಡಾ 60ರಷ್ಟು ಮಂದಿ ಇಂದಿಗೂ ಯಾಕೆ ವಂಚಿತರಾಗಿದ್ದಾರೆ? ಸ್ವಾತಂತ್ರ ಬಂದಾಗ ದೇಶದಲ್ಲಿದ್ದ ಒಂದು ಕೋಟಿ ಬಾಲಕಾರ್ಮಿಕರ ಸಂಖ್ಯೆ ಇಂದೇಕೆ ಎರಡು ಕೋಟಿಗೆ ಏರಿದೆ? ಅಂದು ಇದ್ದ ಎರಡು ಹೊತ್ತು ಹೊಟ್ಟೆ ತುಂಬ ಉಣ್ಣಲು ಅನ್ನವಿಲ್ಲದ ದರಿದ್ರರ ಸಂಖ್ಯೆ 16 ಕೋಟಿಯಿಂದ ಇಂದೇಕೆ 35 ಕೋಟಿಗೆ ಏರಿದೆ?
ಇವೆಲ್ಲಾ ಯಾರೂ ಸುಲಭದಲ್ಲಿ ಉತ್ತರಿಸಲಾಗದ ಪ್ರಶ್ನೆಗಳೆಂಬುದನ್ನು ನಾನು ಬಲ್ಲೆ. ಆದರೆ ವರ್ಷ ಕಳೆದು ಒಂದು ಕಂದಾಚಾರದ ಸಾಲಿಗೆ ಸೇರುತ್ತಿರುವ ಸ್ವಾತಂತ್ರೋತ್ಸವದ ಆಚರಣೆಯಲ್ಲಿ ಮೈಮರೆಯುವ ಜನ ತುಸು ಯೋಚನೆ ಮಾಡಲೆಂಬುದಕ್ಕಾಗಿ ಮೇಲಿನ ಪ್ರಶ್ನೆಗಳನ್ನೆಲ್ಲಾ ಪೋಣಿಸಿದ್ದೇನೆ.
ಇಂತಹ ಪ್ರಶ್ನೆಗಳನ್ನು ಪೋಣಿಸಿದವನು ನಾನೇ ಮೊದಲಿಗನೆಂಬ ಭ್ರಮೆ ನನಗೇನಿಲ್ಲ. ಪ್ರತಿ ವರ್ಷವೂ ಸ್ವಾತಂತ್ರ ದಿನಾಚರಣೆಯ ಸಂದರ್ಭದಲ್ಲಿ ಈ ತೆರನ ಪ್ರಶ್ನೆಗಳು ಏಳುತ್ತವೆ. ಅವುಗಳ ಬಗ್ಗೆ ಜಿಜ್ಞಾಸೆಯೂ ನಡೆಯುತ್ತದೆ. ಇಂತಹ ಜಿಜ್ಞಾಸೆಯಲ್ಲಿ ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಭಾರತವು ಹಿಡಿದಿರುವ ಅವನತಿಯ ಹಾದಿಗೆ ಭ್ರಷ್ಟ ಅಥವಾ ಸ್ವಾರ್ಥ ರಾಜಕಾರಣಿಗಳು ಕಾರಣರೆಂಬ ಒಟ್ಟು ಅಭಿಪ್ರಾಯ ಮೂಡಿಬರುತ್ತದೆ.
ದೇಶದ ಇಂದಿನ ದುರ್ಗತಿಗೆ ಕಳಪೆ ರಾಜಕಾರಣಿಗಳ ಕಾಣಿಕೆ ಇದೆಯೆಂಬುದನ್ನು ನಾನು ಒಪ್ಪುತ್ತೇನೆ. ಆದರೆ ಕಳಪೆ ರಾಜಕಾರಣಿಗಳೇ ನಮ್ಮೆಲ್ಲ ಅವನತಿಗೂ ಕಾರಣರೆಂಬುದನ್ನು ನಾನು ಒಪ್ಪಿಕೊಳ್ಳಲಾರೆ. ಏನಿದ್ದರೂ ರಾಜಕಾರಣಿಗಳ ಕಳಪೆ ಮಟ್ಟವನ್ನು ನಾವು ರೋಗದ ಚಿಹ್ನೆಯೆಂದು ಗುರುತಿಸಬಹುದು. ಶರೀರದ ರಕ್ತ ಕೆಟ್ಟುಹೋದಾಗ ಶರೀರದ ಸಂದು ಗೊಂದುಗಳಲ್ಲಿ ಕಾಣಿಸಿಕೊಳ್ಳುವ ಕುರುವಿನ ಸ್ಥಾನವನ್ನು ನಾವು ಈ ಭ್ರಷ್ಟ ಅಥವಾ ಕಳಪೆ ರಾಜಕಾರಣಿಗಳಿಗೆ ಕೊಡಬಹುದು.
ಭಾರತೀಯರಾದ ನಾವು ಸಾರ್ವಜನಿಕ ಜೀವನದ ನೆಮ್ಮದಿಯನ್ನು ಕೆಡಿಸುತ್ತಿರುವ ಈ 'ಕುರು'ವಿಗೆ ಚಿಕಿತ್ಸೆಯನ್ನು ಮಾಡುತ್ತಿರುವೆವೇ ಹೊರತು ಈ ಕುರುವನ್ನು ಹುಟ್ಟಿಸಿದ ಮಲಿನ ಶರೀರಕ್ಕೆ ಚಿಕಿತ್ಸೆಯನ್ನು ಮಾಡುತ್ತಿಲ್ಲ. ಒಬ್ಬ ಭ್ರಷ್ಟ ರಾಜಕಾರಣಿಯನ್ನು ತೆಗೆದು ಇನ್ನೊಬ್ಬ ಸೋಗಿನ ಸುಂದರನನ್ನು ಅಧಿಕಾರ ಗದ್ದುಗೆಗೇರಿಸುತ್ತೇವೆ. ಆತನ ಸೋಗು ಬಯಲಾದಾಗ ಮತ್ತೆ ಅದೇ ತಪ್ಪನ್ನು ಮಾಡುತ್ತೇವೆ. ಆದರೆ ನಮ್ಮ ಸಾರ್ವಜನಿಕ ಜೀವನವೆಂಬ ಶರೀರದಲ್ಲಿ ಕೆಟ್ಟಿರುವ ರಕ್ತವನ್ನು ಶುದ್ಧೀಕರಿಸಲು ಒಡಲೌಷಧ ಕೊಡುವ ಕೆಲಸವನ್ನು ನಾವು ಮಾಡಿಲ್ಲ.
ಹೀಗಾಗಿ ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ನಮಗೆ ಸಾರ್ವಜನಿಕ ಜೀವನದಲ್ಲಿ ಉತ್ತಮರನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ. ಕ್ರೌರ್ಯದ ಪರಾಕಾಷ್ಠೆಯಂತಿದ್ದ ಇಂದಿರಾ ಗಾಂಧಿಯವರಲ್ಲಿ ನಾವು 'ದೇವಿದುರ್ಗೆ'ಯನ್ನು ಕಂಡೆವು. ಅಶ್ಲೀಲ ಮತ್ತು ಅಸಭ್ಯತೆಯ ಕೊಚ್ಚೆಯಲ್ಲಿ ಅರಳಿದ ರಜತ ಪರದೆಯ ತಾರೆಗಳಾದ ಎಂ.ಜಿ. ರಾಮಚಂದ್ರನ್ ಮತ್ತು ಎನ್.ಟಿ. ರಾಮರಾವ್ ಅವರಲ್ಲಿ ದೈವತ್ವವನ್ನು ಕಾಣಲು ಈ ಭಾರತೀಯರಿಗೆ ಸಾಧ್ಯವಾಯಿತು. ಆದರೆ ಯಾವುದೇ ಒಂದು ಸ್ವಸ್ಥ ಸಮಾಜವಾದರೂ ಅಭಿಮಾನದಿಂದ ಓಲೈಸಬೇಕಾದ ಆದರ್ಶ ವ್ಯಕ್ತಿ ಕಾಮರಾಜ ನಾಡಾರ್ ಅವರನ್ನು ಆದರಿಸಲು ಈ ಸಮಾಜಕ್ಕೆ ಸಾಧ್ಯವಾಗಿಲ್ಲ.
ಒಂದು ಸಮಾಜದ ಬದುಕು ಹಸನಾಗಬೇಕಾದರೆ ಅದು ಆರೋಗ್ಯವಂತ ಸಮಾಜವಾಗಿರಬೇಕು. ಜೀವನದ ಎಲ್ಲ ಕ್ಷೇತ್ರಗಳಲ್ಲಿ ಒಳಿತನ್ನು ಗುರುತಿಸುವ ಚೈತನ್ಯ ಅದಕ್ಕಿರಬೇಕು. ಅನ್ಯಾಯ ಅಸತ್ಯವನ್ನು ಪ್ರತಿಭಟಿಸುವ ಆತ್ಮಬಲ ಸಮಾಜಕ್ಕಿರಬೇಕು. ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ಚೈತನ್ಯ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಮೈದಳೆಯಿತು. ಅದರಿಂದಾಗಿಯೇ ಕಳೆದ ತಲೆಮಾರಿನಲ್ಲಿ ಜನಜೀವನದ ಎಲ್ಲ ಕ್ಷೇತ್ರಗಳಲ್ಲಿ ಸದ್‌ಶಕ್ತಿಗಳು ಅರಳಿದವು.
ಆದರೆ ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಹೋರಾಟದ ಕುಲುಮೆ ಆರಿಹೋಗಿ ಸಮಾಜದ ಚೈತನ್ಯ ಉಡುಗಿಹೋಗಲಾರಂಭಿಸಿತು. ಯಾವ ವ್ಯವಸ್ಥೆ ಸಹಸ್ರಾರು ವರ್ಷಗಳಿಂದ ಭಾರತೀಯರನ್ನು ಸ್ವಾಭಿಮಾನ ಹೀನರನ್ನಾಗಿ ಮಾಡಿ ಪರಾಡಳಿತದ ಬಂಧನಕ್ಕೊಳಪಡಿಸಿತ್ತೋ ಅದೇ ವ್ಯವಸ್ಥೆ ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಪುನರುಜ್ಜೀವನಗೊಂಡಿತು. ದೇಶದ ರಾಜಕೀಯ ಸ್ವಾತಂತ್ರ್ಯವನ್ನು ಆ ವ್ಯವಸ್ಥೆ ತನ್ನ ಹಿತದ ಸಾಧನವನ್ನಾಗಿ ಮಾರ್ಪಡಿಸಿತು. ಉತ್ತಮ ಬದುಕಿನ ಎಲ್ಲ ಅವಕಾಶಗಳ ಮೇಲೂ ಆ ಅವ್ಯವಸ್ಥೆ ತನ್ನ ಸ್ವಾಮ್ಯವನ್ನು ಸ್ಥಾಪಿಸಿತು. ರಾಷ್ಟ್ರೀಯ ಸಂಪತ್ತಿನ ಬಹುಪಾಲನ್ನು ತನ್ನದಾಗಿ ಮಾಡಿಕೊಂಡಿತು. ಸ್ವತಂತ್ರ ಭಾರತದ ರಾಜಕೀಯ ವ್ಯವಸ್ಥೆಯನ್ನು ಭ್ರಷ್ಟಗೊಳಿಸಿತು. ಅದೇ ಜಾತಿ ವ್ಯವಸ್ಥೆ.
ಐದು ಸಹಸ್ರ ವರ್ಷಗಳ ಕಳಂಕಮಯ ದಾಖಲೆ ಇರುವ ಈ ಜಾತಿ ವ್ಯವಸ್ಥೆಯನ್ನು ಇಂದಿನ ಆಧುನಿಕ ಯುಗದಲ್ಲಿ ಶಿಥಿಲಗೊಳಿಸಲು ಸಾಧ್ಯವಿತ್ತು. ಸಹಸ್ರ ವರ್ಷಗಳಿಂದ ಆಕ್ರಮಣಕಾರರ ಕಾಲಿಗೆರಗಿ ಅವರ ಗುಲಾಮಗಿರಿಯನ್ನು ಅಂಗೀಕರಿಸಿ ಭಾರತದ ಅಂತಃಸತ್ವವನ್ನು ಹೀರಿದ ಈ ಜಾತಿ ವ್ಯವಸ್ಥೆಯ ಮೇಲೆ ಸಮರ ಸಾರಿ ಅದನ್ನು ಶಿಥಿಲಗೊಳಿಸುವ ಒಂದು ಒಳ್ಳೆಯ ಅವಕಾಶ ನಮಗೆ ಸ್ವಾತಂತ್ರ್ಯದ ಪರ್ವಕಾಲದಲ್ಲಿತ್ತು. ಆದರೆ ನಾವು ಆ ಕೆಲಸವನ್ನು ಮಾಡಲಿಲ್ಲ.
ಜಾತಿ ವ್ಯವಸ್ಥೆ ಈ ದೇಶದ ಅವನತಿಗೆ ಮೂಲಕಾರಣವೆಂಬುದನ್ನು ಇತಿಹಾಸದ ಪ್ರಜ್ಞೆಯುಳ್ಳ ಎಲ್ಲರೂ ಒಪ್ಪಿಕೊಂಡಿದ್ದಾರೆ. ಹುಟ್ಟಿನಲ್ಲಿ ಮನುಷ್ಯನ ಸಾಮಾಜಿಕ ಅಂತಸ್ತನ್ನು ನಿರ್ಣಯಿಸುವ ಜಾತಿ ವ್ಯವಸ್ಥೆ ಮಾನವ ಸಮಾಜದ ಮುನ್ನಡೆಗೆ ಬಂಧನಕಾರಿಯೆಂಬುದನ್ನು ಯಾರೂ ಅಲ್ಲಗಳೆದಿಲ್ಲ. ಈ ವ್ಯವಸ್ಥೆ ಹೋಗಬೇಕೆಂದು ಎಲ್ಲರೂ ಹೇಳಿದ್ದರು- ಈಗಲೂ ಹೇಳುತ್ತಿದ್ದಾರೆ. ಆದರೆ ಅದನ್ನು ತೆಗೆಯುವ ಸಾಂಘಿಕ ಯತ್ನವನ್ನು ಈ ದೇಶ ಮಾಡಿಲ್ಲ.
ಯಾಂತ್ರೀಕರಣವು ಬದುಕಿನ ಬಗೆಯಾಗಿ ನಗರ ಸಂಸ್ಕೃತಿ ಬೆಳೆದಾಗ ಜಾತಿ ವ್ಯವಸ್ಥೆ ತಾನಾಗಿಯೇ ಶಿಥಿಲಗೊಳ್ಳುವುದೆಂಬ ವಾದವನ್ನು ಕೆಲವರು ಮುಂದೊಡ್ಡಿದರು. ಭಾರತೀಯರ ಬದುಕಿನಲ್ಲಿ ಬೆರೆತು ಬಂದಿರುವ ಜಾತಿ ಮೂಲವಾದ ಭಿನ್ನತೆಗಳ ನಡುವೆಯೂ ಏಕತೆಯನ್ನು ಸಾಧಿಸಬಹುದೆಂಬ ವಿಚಿತ್ರ ಸಿದ್ಧಾಂತವೊಂದನ್ನು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಪ್ರತಿಪಾದಿಸಿದರು. ಬುದ್ಧಿವಂತ ಜನರು ಮುಂದೊಡ್ಡಿದ ನಗರೀಕರಣವಾದ ಮತ್ತು ನೆಹರೂ ಪ್ರತಿಪಾದಿಸಿದ ಸಿದ್ಧಾಂತ ಈ ದೇಶದ ನಿಷ್ಠಾವಂತ ಪ್ರಜಾವರ್ಗವನ್ನು ಜಾತಿ ವ್ಯವಸ್ಥೆಯ ವಿರುದ್ಧದ ಸಮರದಿಂದ ವಿಮುಖರನ್ನಾಗಿ ಮಾಡಿದವು.
ಇವೆಲ್ಲದರ ಸಂಚಿತ ಫಲವಾಗಿ ಇಂದು ಈ ದೇಶದ ಮೇಲೆ ಜಾತಿ ವ್ಯವಸ್ಥೆಯ ಹಿಡಿತ ಬಲಗೊಂಡಿದೆ. ನಗರೀಕರಣವು ಜಾತಿ ಸ್ವಾಮ್ಯಕ್ಕೆ ಪೋಷಕವಾಗಿದೆ. ಸ್ವಾತಂತ್ರ್ಯ ಪೂರ್ವದ ದಿನಗಳಲ್ಲಿ ಕೆಳಜಾತಿಯ ಜನರ ಮೇಲೆ ನೇರ ಸವಾರಿ ಮಾಡುತ್ತಿದ್ದ ಮೇಲ್ಜಾತಿಯ ಜನ ಇಂದು ಅವರನ್ನು ಯಂತ್ರಮಾನವರಾಗಿ ಮಾಡಿದ್ದಾರೆ. ಎಲ್ಲ ಆಧುನಿಕ ಉತ್ಪಾದನಾ ಸಾಧನಗಳ ಮೇಲೂ ಮೇಲ್ಜಾತಿಯ ಜನರ ಪ್ರಭುತ್ವದ ಸ್ಥಾಪನೆಯಾಗಿದೆ. ರಾಷ್ಟ್ರೀಯ ಸಂಪತ್ತಿನ ಶೇಕಡಾ 70ರಷ್ಟು ಭಾಗ ಇಂದು ಶೇಕಡಾ 25ರಷ್ಟಿರುವ ಮೇಲ್ಜಾತಿಯ ಜನರ ಪಾಲಾಗುತ್ತಿದೆ. ದೇಶದ ಆಡಳಿತ ವ್ಯವಸ್ಥೆಯಲ್ಲಿ ಶೇಕಡಾ 75ರಷ್ಟು ಅಧಿಕಾರ ಸ್ಥಾನ ಈ ಮೇಲ್ಜಾತಿಯ ಜನರ ಕೈಯಲ್ಲಿದೆ. ಭ್ರಷ್ಟಗೊಂಡ ರಾಜಕೀಯ ವ್ಯವಸ್ಥೆ ಈ ಮೇಲ್ಜಾತಿಯ ಜನರ ಕೈಗೊಂಬೆಯಾಗಿದೆ.
ಒಟ್ಟು ಜನಸಂಖ್ಯೆಯ ಸುಮಾರು ಶೇಕಡಾ 25ರಷ್ಟಿರುವರೆಂದು ಅಂದಾಜು ಮಾಡಲಾಗಿರುವ ಮೇಲ್ಜಾತಿಯ ಜನ ನೂರಕ್ಕೆ ನೂರು ವಿದ್ಯಾವಂತರಾಗಿದ್ದಾರೆ. ಆದರೆ ಕೆಳಜಾತಿಯ ಜನರಲ್ಲಿ ಇಂದಿಗೂ ಶೇಕಡಾ 80ರಷ್ಟು ಅನಕ್ಷರಸ್ಥರಾಗಿ ಉಳಿದಿದ್ದಾರೆ.
ಜನಶಕ್ತಿಗೆ ಮಾನವೀಯ ಮೌಲ್ಯಗಳ ಪಾಠ ಹೇಳುವ ಭಾರತ ಇಂದಿಗೂ ಕೆಲ ಯೋಗ್ಯ ಕೂಲಿ ಕೇಳುವ ದಲಿತರನ್ನು ಜೀವ ಸಹಿತ ಸುಡುವ ಕ್ರೌರ್ಯವನ್ನು ತನ್ನ ಒಡಲಲ್ಲಿ ಉಳಿಸಿಕೊಂಡಿದೆ. ಇದು ಜಾತಿ ವ್ಯವಸ್ಥೆ ಮೂಲವಾದ ಕ್ರೌರ್ಯ.
ಇಂತಹ ಕ್ರೌರ್ಯ, ಪರಸ್ಪರ ಅಸಹನೆ-ಅಪನಂಬಿಕೆಗಳಿಂದ ತುಂಬಿರುವ ಒಂದು ಸಮಾಜವನ್ನು ರೋಗಗ್ರಸ್ತವೆಂದು ಗುರುತಿಸಲೇ ಬೇಕಾಗುತ್ತದೆ. ಈ ರೋಗದ ಮೂಲ ಜಾತಿ ವ್ಯವಸ್ಥೆ. ಆದ್ದರಿಂದ ಭಾರತದ ಹಿತದ ಕುರಿತು ಚಿಂತಿಸುವ ಜನರೆಲ್ಲ ಜಾತಿ ವ್ಯವಸ್ಥೆಯೆಂಬ ರೋಗದ ನಿವಾರಣೆಯ ಸಂಕಲ್ಪಮಾಡಬೇಕಾಗಿದೆ. ಸ್ವಾತಂತ್ರ್ಯ ದಿನಾಚರಣೆ ಇದಕ್ಕೊಂದು ಅವಕಾಶ.
ಜಾತಿ ವ್ಯವಸ್ಥೆ ಒಂದು ಜಿಡ್ಡು ಕಟ್ಟಿದ ರೋಗ, ಅದಕ್ಕೆ ಸರಳವಾದ ಚಿಕಿತ್ಸೆ ಇಲ್ಲ. ಸುಧಾರಣಾವಾದಿ ಕ್ರಮಗಳಿಂದ ಅಥವಾ ಕೆಲವರ ವೈಯಕ್ತಿಕ ಆದರ್ಶಗಳಿಂದ ವಾಸಿಯಾಗಬಲ್ಲ ರೋಗವಿದಲ್ಲ. ಜಾತಿ ವ್ಯವಸ್ಥೆ ಅಮಾನುಷವಾದುದೆಂಬುದನ್ನು ನಾವು ಒಪ್ಪಿಕೊಳ್ಳುವುದಾದರೆ, ಅದರ ವಿರುದ್ಧ ಸಮರ ಸಾರಬೇಕು. ದೇಶವು ಸಮಗ್ರವಾಗಿ ಈ ತತ್ವಕ್ಕೆ ಬದ್ಧವಾಗುವಂತಹ ಆಂದೋಲನ ನಡೆಯಬೇಕು. ಇಂತಹ ಆಂದೋಲನದಲ್ಲಿ ಮೂಡಿ ಬರುವ ನಾಯಕರು ಜಾತಿ ವ್ಯವಸ್ಥೆಯನ್ನು ನಿಷೇಧಿಸಬೇಕು. ಇಪ್ಪತ್ತೈದು ವರ್ಷಗಳ ಕಾಲ ಗಂಡು-ಹೆಣ್ಣುಗಳು ತಮ್ಮ ಜಾತಿಯ ಒಳಗೆ ವಿವಾಹ ಸಂಬಂಧ ಬೆಳೆಸುವುದನ್ನು ನಿಷೇಧಿಸಬೇಕು. ಇಂತಹ ಕಾನೂನಿನ ಅನುಸರಣೆಯ ನಂತರ ಭಾರತದಲ್ಲಿ ಜಾತಿಯ ಕಳಂಕವಿಲ್ಲದ ಹೊಸ ಮಾನವ ಜನಾಂಗದ ಉಗಮವಾದೀತು. ಅಂತಹ ಮಾನವ ಸಮಾಜ ಭಾರತವನ್ನು ಜಗತ್ತಿನ ಉತ್ತುಂಗಕ್ಕೇರಿಸಬಲ್ಲುದು.
ಇಂತಹ ತೀವ್ರ ಕ್ರಮಕ್ಕೆ ನಾವು ಸಿದ್ಧರಾಗದಿದ್ದರೆ ನಿಸ್ಸಂದೇಹವಾಗಿ ಭಾರತವು ಜಗತ್ತಿನ ಮಹಾಕೊಚ್ಚೆಯಾಗಿಯೇ ಉಳಿಯುವುದು. ಭಾರತದಲ್ಲಿ ಇರುವರೆಂದು ಅಂದಾಜು ಮಾಡಲಾಗಿರುವ ಸುಮಾರು ಎರಡು ಕೋಟಿ ಬಾಲ ಕಾರ್ಮಿಕರಲ್ಲಿ ಶೇಕಡಾ 95ರಷ್ಟು ಮಂದಿ ಕೆಳಜಾತಿಗೆ ಸೇರಿದವರು. ಎರಡು ಹೊತ್ತು ಉಣ್ಣಲು ಅನ್ನವಿಲ್ಲದ 32 ಕೋಟಿ ದರಿದ್ರ ಭಾರತೀಯರ ದೊಡ್ಡ ಸೇನೆಯಲ್ಲಿ ಶೇಕಡಾ 90ರಷ್ಟು ಮಂದಿ ಕೆಳಜಾತಿಯವರು. ದೇಶದ ಮಹಾ ನಗರಗಳಲ್ಲಿ ಇಂದು ಭಯಾನಕವಾಗಿ ಬೆಳೆದಿರುವ ವೇಶ್ಯಾವಾಟಿಕೆಗಳಲ್ಲಿರುವ ಹೆಣ್ಣು ಮಕ್ಕಳಲ್ಲಿ ನೂರಕ್ಕೆ 95 ಮಂದಿ ಕೆಳಜಾತಿಗೆ ಸೇರಿದವರು. ಇಂದು ಈ ಸ್ವತಂತ್ರ ಭಾರತದಲ್ಲಿ ಸರಕಾರದ ಎಲ್ಲ ಕಾನೂನುಗಳೂ ಅನ್ವಯವಾಗುವುದು ಕೆಳಜಾತಿಯ ಜನರಿಗೆ, ಸರಕಾರಿ ಸೌಲಭ್ಯಗಳು ಸಿಗುತ್ತಿರುವುದು ಮೇಲ್ಜಾತಿಯ ಜನರಿಗೆ; ಹೀಗೆ ನಡೆದುಕೊಂಡು ಬಂದಿದೆಯೆಂಬುದು ಯಾರಿಂದಲೂ ಅಲ್ಲಗಳೆಯಲಾಗದ ಸತ್ಯ.
ಆಡಳಿತಗಾರರ ಅಸಡ್ಡೆಗೀಡಾಗುವವರು ಕೆಳಜಾತಿಯ ಜನ ಅಪರಾಧವೆಸಗಿದ ಮೇಲ್ಜಾತಿಯ ಜನರನ್ನು ಪೊಲೀಸರು ತಮ್ಮ ಮಾಮೂಲಿಯಾದ ಬಾಯಿ ಬಿಡಿಸುವ ದೌರ್ಜನ್ಯಕ್ಕೆ ಈಡು ಮಾಡಿದ ಒಂದು ನಿದರ್ಶನವೂ ಸಿಗಲಾರದು. ಆದರೆ ಶಂಕಿತ ಅಪರಾಧಿ ಕೆಳಜಾತಿಯವನಾದರೆ ಅವನಿಗೆ ಪೊಲೀಸರ ಚಿತ್ರಹಿಂಸೆ ತಪ್ಪಿದ್ದಲ್ಲ. ಇತ್ತೀಚಿನ ವರ್ಷಗಳಲ್ಲಿ ಪೊಲೀಸ್ ಠಾಣೆಗಳಲ್ಲಿ ಹೆಚ್ಚುತ್ತಿರುವ ಸಾವುಗಳನ್ನು ಪಟ್ಟಿ ಮಾಡಿದರೆ ಅದರಲ್ಲಿ ನಾವು ಕಾಣಬಹುದಾದುದು ಕೆಳಜಾತಿಯ ನತದೃಷ್ಟರನ್ನು, ಸ್ವತಂತ್ರ ಭಾರತದ ಆಡಳಿತ ವ್ಯವಸ್ಥೆ ಹೇಗೆ ಮೇಲ್ಜಾತಿಯ ಹಿಡಿತಕ್ಕೆ ಸಿಕ್ಕಿಸಿದೆಯೆಂಬುದಕ್ಕೆ ಸಮರ್ಥನೆಯಾಗಿ ಇದನ್ನೆಲ್ಲ ಹೇಳುತ್ತಿದ್ದೇನೆ. ''ನೀವ್ಯಾಕೆ ಜಾತಿಯ ಮಾತಾಡ್ತೀರಿ? ಅದೆಲ್ಲ ಈಗ ಹೋಗಿದೆ.'' ಎನ್ನುವವರೂ ಇದ್ದಾರೆ. ಇಂತಹ ಮಾತನಾಡುವವರೆಲ್ಲ ಮೇಲ್ಜಾತಿಯ ಪಂಡಿತ ವರ್ಗ. ಕೆಳ ಜಾತಿಯ ಜನ ಪೈಶಾಚಿಕವಾದ ಜಾತಿ ವ್ಯವಸ್ಥೆಯ ಬಗ್ಗೆ ಯೋಚನೆ ಮಾಡಬಾರದೆಂಬುದಕ್ಕಾಗಿ ಇವರು 'ಜಾತಿ ಪದ್ಧತಿ' ಹೋಗಿದೆ ಎನ್ನುವ ಮಾತನಾಡುತ್ತಾರೆ.
ಸ್ವತಂತ್ರ ಭಾರತದಲ್ಲಿ ಜಾತಿ ವ್ಯವಸ್ಥೆ ತನ್ನ ಸ್ವಾಮ್ಯದ ಸೂತ್ರವನ್ನು ಬದಲಾಯಿಸಿದೆ ಯೆಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಆ ವ್ಯವಸ್ಥೆಯ ದಮನಕಾರಿಶಕ್ತಿ ಅಬಾಧಿತವಾಗಿ ಉಳಿದುಕೊಂಡು ಬಂದಿದೆ ಎಂಬುದು ಯಾರಿಂದಲೂ ಅಲ್ಲಗಳೆಯಲಾಗದ ಸತ್ಯ.
ಈ ಜಾತಿ ವ್ಯವಸ್ಥೆಯೇ ಇಂದು ಈ ದೇಶ ತನ್ನ ಮುನ್ನಡೆಗೆ ಒಂದು ಸೈದ್ಧಾಂತಿಕವಾದ ನೆಲೆಯನ್ನು ಕಂಡುಕೊಳ್ಳದಂತೆ ಮಾಡಿದೆ. ಈ ದೇಶದ ಯಾವ ರಾಜಕೀಯ ಪಕ್ಷಕ್ಕೂ ಇದುವರೆಗೆ ಸರ್ವಾನ್ವಯವಾಗಬಲ್ಲ ಸಾಮಾಜಿಕ ಹಾಗೂ ಆರ್ಥಿಕ ನೀತಿಯನ್ನು ಗುರುತಿಸಿಕೊಳ್ಳಲು ಸಾಧ್ಯವಾಗದಿರುವುದು ಇದರಿಂದಾಗಿಯೇ. ಸ್ವತಂತ್ರ ಭಾರತದಲ್ಲಿ ರಾಜಕೀಯ ಪಕ್ಷಗಳಲ್ಲಿ ಕಾಲ-ಕಾಲಕ್ಕೆ ಆಗುತ್ತಿರುವ ಒಡಕನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಅದರ ಹಿಂದೆ ಜಾತಿ ಮೂಲವಾದ ವೈರುಧ್ಯವನ್ನು ನಾವು ಕಾಣಬಹುದು. ತಾತ್ವಿಕ ನೆಲೆಯುಳ್ಳ ಕಮ್ಯುನಿಸ್ಟ್ ಪಕ್ಷದಲ್ಲಾದ ಒಡಕಿನಲ್ಲಿ ಜಾತಿ ವ್ಯವಸ್ಥೆಯ ಒಳತಳಿಯನ್ನು ಗುರುತಿಸಬಹುದು. ಅನೇಕರಿಗೆ ಅಪ್ರಿಯವೆನ್ನಿಸಬಹುದಾದ ವಿಚಾರವನ್ನೀಗ ನಾನು ಪ್ರತಿಪಾದಿಸುತ್ತಿರುವೆನೆಂಬುದರ ಅರಿವು ನನಗಿದೆ.
ಆದರೆ ರಾಜಕೀಯ ವಿಜ್ಞಾನದ ಒಬ್ಬ ವಿದ್ಯಾರ್ಥಿಯಾಗಿ ನಾನು ಸೂಕ್ಷ್ಮವಾಗಿ ಗಮನಿಸಿದ ಜಾತಿ ವ್ಯವಸ್ಥೆಯ ಬಂಧನಕಾರಿ ಆವಿಷ್ಕಾರಗಳ ಮೇಲೆ ಬೆಳಕು ಬೀರಬೇಕೆನ್ನುವುದಕ್ಕಾಗಿ ಇಷ್ಟೆಲ್ಲಾ ಹೇಳಿದೆ. ಸ್ವಾತಂತ್ರೋತ್ಸವ ಆಚರಣೆಯ ಈ ಸಂದರ್ಭದಲ್ಲಿ ನಮ್ಮ ಜನ ಈ ದೇಶದ ಇಂದಿನ ದುರ್ಗತಿಗೆ ನಿಜವಾದ ಕಾರಣಗಳೇನೆಂಬುದನ್ನು ಅರಿತುಕೊಳ್ಳಲಿ ಎಂಬುದಕ್ಕಾಗಿ ಇದನ್ನೆಲ್ಲ ಬರೆಯುತ್ತಿದ್ದೇನೆ. ಭಾರತೀಯ ಪರಂಪರೆಯಲ್ಲಿ ಸತ್ಯವು ಅಪ್ರಿಯವಾಗುವುದೆಂಬುದರ ಪೂರ್ಣ ಅರಿವು ನನಗಿದೆ. ನಾವು ಮಾನವ ಸಮಾಜದ ಮುನ್ನಡೆಯ ಇತಿಹಾಸ ಸರಿಯಾಗಿ ಓದಿದರೆ ಅಸಂಘಟಿತವಾದ ಯಾವ ಸಮಾಜವೂ ಸಾಧನೆಗಳ ಮೆಟ್ಟಿಲೇರಿದ ನಿದರ್ಶನವಿಲ್ಲ.
14-8-1988
(ಅಹರ್ನಿಶಿ ಪ್ರಕಾಶನ ಹೊರತಂದ, ದಿನೇಶ್ ಅಮಿನ್ ಮಟ್ಟು ಸಂಪಾದಿಸಿದ 'ಓದುಗರ ಸಂಪಾದಕ ವಡ್ಡರ್ಸೆ ರಘುರಾಮ ಶೆಟ್ಟರ ಬರೆಹಗಳು-ಬೇರೆಯೇ ಮಾತು ಕೃತಿಯಿಂದ.)







