ಕುಂದಾಪುರ: ದಾರಿಯಲ್ಲಿ ಸಿಕ್ಕಿದ 10 ಸಾವಿರ ರೂ. ವಾರಸುದಾರರಿಗೆ ಮರಳಿಸಿದ ವಿದ್ಯಾರ್ಥಿನಿಯರು
ಪ್ರಾಮಾಣಿಕತೆ ಮೆರೆದ ನಾಲ್ವರು ವಿದ್ಯಾರ್ಥಿನಿಯರಿಗೆ ಶಿಕ್ಷಣ ಸಚಿವ ಪ್ರಶಂಸೆ

ಕುಂದಾಪುರ, ಜ.7: ತಾಲೂಕಿನ ಕೋಣಿ ಪ್ರೌಢ ಶಾಲಾ ನಾಲ್ವರು ವಿದ್ಯಾರ್ಥಿನಿಯರು ಶಾಲೆಯಿಂದ ಮನೆಗೆ ತೆರಳುತ್ತಿದ್ದಾಗ ರಸ್ತೆಯಲ್ಲಿ 10 ಸಾವಿರ ರೂ. ಬಿದ್ದು ಸಿಕ್ಕಿದೆ. ಅದನ್ನು ವಿದ್ಯಾರ್ಥಿನಿಯರಾದ ಶ್ರಾವ್ಯಾ, ಐಶ್ವರ್ಯಾ ಜೆ., ಪ್ರಸ್ತುತಿ ಮತ್ತು ವೈಷ್ಣವಿ ಎಂಬವರು ಅದರ ವಾರಸುದಾರರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ವಿದ್ಯಾರ್ಥಿನಿಯರ ಪ್ರಾಮಾಣಿಕತೆ ವಿಚಾರವನ್ನು ಅರಿತ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರನ್ನು ಟ್ವಿಟರ್ ನಲ್ಲಿ ಪ್ರಶಂಸಿಸಿದ್ದು, ಅಭಿನಂದಿಸಿದ್ದಾರೆ.
ನಾಲ್ವರು ವಿದ್ಯಾರ್ಥಿನಿಯರು ಸಾರ್ವಜನಿಕ ರಸ್ತೆಯಲ್ಲಿ ಸಿಕ್ಕಿದ ಹಣವನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ನೀಡಿದ್ದಾರೆ. ಹಣ ಸಿಕ್ಕಿರುವ ಬಗ್ಗೆ ಮುಖ್ಯೋಪಾಧ್ಯಾಯರು ವಾಟ್ಸ್ ಆ್ಯಪ್ ಮೂಲಕ ಸಾರ್ವಜನಿಕ ಸಂದೇಶವನ್ನು ಹರಿಬಿಟ್ಟಿದ್ದಾರೆ. ಇದರಿಂದ ಹಣವು ಊರಿನ ಅಂಚೆ ಇಲಾಖೆಯ ಉದ್ಯೋಗಿ ಸುರೇಖಾ ಎಂಬವರಿಗೆ ಸೇರಿದ್ದೆಂದು ತಿಳಿದುಬಂತು.
ಅದೇರೀತಿ ಶಾಲೆಯ ಅಸಂಬ್ಲಿ ನಡೆಯುತ್ತಿರುವ ಸಂದರ್ಭ ಶ್ರಾವ್ಯಾ, ಐಶ್ವರ್ಯಾ ಜೆ., ಪ್ರಸ್ತುತಿ ಮತ್ತು ವೈಷ್ಣವಿ ಹಣವನ್ನು ಅದರ ವಾರಸುದಾರರಾದ ಸುಲೇಖಾರಿಗೆ ಹಸ್ತಾಂತರಿಸಿದರು. ಸುಲೇಖಾ ಶಾಲೆಯ ಎಲ್ಲಾ ವಿದ್ಯಾರ್ಥಿಗಳಗೆ ಸಿಹಿ ವಿತರಿಸಿ ಕೃತಜ್ಞತೆ ಸಲ್ಲಿಸಿದರು.
ಕೆ. ಜಿ ಜಗನ್ನಾಥರಾವ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮಾಧವ ಅಡಿಗ ವಿದ್ಯಾರ್ಥಿನಿಯರನ್ನು ಅಭಿನಂದಿಸಿದರು.
ಶಿಕ್ಷಣ ಸಚಿವರಿಂದ ಪ್ರಶಂಸೆ: ನಾಲ್ವರು ವಿದ್ಯಾರ್ಥಿನಿಯರ ಪ್ರಾಮಾಣಿಕತೆ ವಿಷಯವನ್ನು ಅರಿತ ರಾಜ್ಯ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿದ್ಯಾರ್ಥಿನಿಯರನ್ನು ಪ್ರಶಂಸಿಸಿ ಟ್ವೀಟ್ ಮಾಡಿದ್ದಾರೆ.
"ಶಾಲೆಗಳು ಮಕ್ಕಳಿಗೆ ಶಿಕ್ಷಣದ ಜೊತೆಗೆ ಜೀವನದ ಮೌಲ್ಯಗಳನ್ನು ತಿಳಿಸಿಕೊಡುವ ಕೇಂದ್ರಗಳು ಆಗಬೇಕು. ತಮಗೆ ದಾರಿಯಲ್ಲಿ ದೊರೆತ ಹಣವನ್ನು ಮಾಲಕರಿಗೆ ಹಿಂತಿರುಗಿಸಿದ ಕುಂದಾಪುರ ತಾಲ್ಲೂಕಿನ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರಾದ ಶ್ರಾವ್ಯಾ, ಐಶ್ವರ್ಯಾ ಜೆ., ಪ್ರಸ್ತುತಿ ಮತ್ತು ವೈಷ್ಣವಿರವರ ಪ್ರಾಮಾಣಿಕತೆ ಪ್ರಶಂಸನೀಯ" ಎಂದು ಹೇಳಿದ್ದಾರೆ.
ಶಾಲೆಗಳು ಮಕ್ಕಳಿಗೆ ಶಿಕ್ಷಣದ ಜೊತೆಗೆ ಜೀವನದ ಮೌಲ್ಯಗಳನ್ನು ತಿಳಿಸಿಕೊಡುವ ಕೇಂದ್ರಗಳು ಆಗಬೇಕು. ತಮಗೆ ದಾರಿಯಲ್ಲಿ ದೊರೆತ ಹಣವನ್ನು ಮಾಲೀಕರಿಗೆ ಹಿಂತಿರುಗಿಸಿದ ಕುಂದಾಪುರ ತಾಲ್ಲೂಕಿನ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರಾದ ಶ್ರಾವ್ಯಾ, ಐಶ್ವರ್ಯಾ.ಜೆ, ಪ್ರಸ್ತುತಿ ಮತ್ತು ವೈಷ್ಣವಿ ರವರ ಪ್ರಾಮಾಣಿಕತೆ ಪ್ರಶಂಸನೀಯ. https://t.co/D98NKA7grp
— B.C Nagesh (@BCNagesh_bjp) January 6, 2022









