ಗುಂಡ್ಲುಪೇಟೆ: ಅರಣ್ಯ ಇಲಾಖೆಯ ವಾಹನದ ಮೇಲೆಯೇ ದಾಳಿ ನಡೆಸಿದ ಕಾಡಾನೆ

ಚಾಮರಾಜನಗರ, ಜ.7: ಅರಣ್ಯ ಇಲಾಖೆಯ ಸಿಬ್ಬಂದಿಯಿದ್ದ ವಾಹನದ ಮೇಲೆಯೇ ಕಾಡಾನೆಯೊಂದು ದಾಳಿ ನಡೆಸಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿ ಶಿವಕುಮಾರಪುರ ಬಳಿ ಇಂದು ಮುಂಜಾನೆ ನಡೆದಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ಅರಣ್ಯ ವ್ಯಾಪ್ತಿಯಲ್ಲಿಂದು ಬೆಳಗ್ಗೆ 6:30ರ ವೇಳೆ ಘಟನೆ ನಡೆದಿದೆ. ಇಂದು ಮುಂಜಾನೆ ಶಿವಕುಮಾರಪುರ ಮಠ ಪ್ರದೇಶದಲ್ಲಿ ಕಾಡಾನೆ ಕಾಣಿಸಿಕೊಂಡಿದೆ. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅದರಂತೆ ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಯ ವಾಹನದ ಮೇಲೆಯೇ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ವಾಹನವನ್ನು ಮಗುಚಿ ಹಾಕಿದ ಆನೆ ಅದನ್ನು ನಜ್ಜುಗುಜ್ಜು ಮಾಡಿದೆ. ಈ ವೇಳೆ ಅರಣ್ಯ ಸಿಬ್ಬಂದಿ ಯಾವುದೇ ಅಪಾಯಗಳಿಲ್ಲದೆ ಪಾರಾಗಿದ್ದಾರೆ.
ಕಳೆದ 3-4 ದಿನಗಳಿಂದ ಸುತ್ತಲಿನ ಗ್ರಾಮದ ಜಮೀನಿನಲ್ಲೇ ಆನೆ ಬೀಡು ಬಿಟ್ಟಿದೆ ಎಂದು ಸ್ಥಳೀಯರು ದೂರಿದ್ದಾರೆ.
Next Story





