ಬುಲ್ಲಿ ಬಾಯಿ ಆ್ಯಪ್ ಪ್ರಕರಣ: ಮಾಡಿದ ಕೃತ್ಯದಲ್ಲಿ ʼಯಾವುದೇ ವಿಷಾದವಿಲ್ಲʼ ಎಂದ ಪ್ರಮುಖ ಆರೋಪಿ; ವರದಿ

ಹೊಸದಿಲ್ಲಿ: ವಿವಾದಿತ ಬುಲ್ಲಿ ಬಾಯಿ ಆ್ಯಪ್ ಸೃಷ್ಟಿಕರ್ತ ಇಂಜಿನಿಯರಿಂಗ್ ವಿದ್ಯಾರ್ಥಿ, ದಿಲ್ಲಿ ಪೊಲೀಸರಿಂದ ಅಸ್ಸಾಂನಲ್ಲಿ ಬಂಧಿಸಲ್ಪಟ್ಟ ನೀರಜ್ ಬಿಷ್ಣೋಯಿ,.ತಾನು ಒಂದು ಸಮುದಾಯದ ಮಹಿಳೆಯರನ್ನು ಅವಹೇಳನಗೈಯ್ಯಲು ಈ ಆ್ಯಪ್ ಸೃಷ್ಟಿಸಿದ್ದಾಗಿ ಒಪ್ಪಿಕೊಂಡಿದ್ದರೂ ತನ್ನ ಕೃತ್ಯಕ್ಕಾಗಿ ಯಾವುದೇ ರೀತಿಯಲ್ಲಿ ವಿಷಾದ ಪಟ್ಟಿಲ್ಲ ಎಂದು indiatvnews.com ವರದಿ ಮಾಡಿದೆ.
"ಆತ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಾನೆ ಹಾಗೂ ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾನೆ, ಆದರೆ ವಿಷಾದವಿಲ್ಲ" ಎಂದು ಮೂಲಗಳು ತಿಳಿಸಿವೆ.
ಈ ಆ್ಯಪ್ ಮಾತ್ರವಲ್ಲದೆ ಅದರ ಟ್ವಿಟ್ಟರ್ ಹ್ಯಾಂಡಲ್‍ಗಳನ್ನೂ ತಾನೇ ರಚಿಸಿದ್ದಾಗಿ ಹಾಗೂ ಗಿಟ್ ಹಬ್ ಖಾತೆ ಮತ್ತು ಆ್ಯಪ್ ಅನ್ನು ನವೆಂಬರ್ 2021ರಲ್ಲಿ ಅಭಿವೃದ್ಧಿ ಪಡಿಪಡಿಸಿ ಅದನ್ನು ಡಿಸೆಂಬರ್ 2021ರಲ್ಲಿ ಅಪ್‍ಡೇಟ್ ಮಾಡಲಾಗಿತ್ತು ಎಂದೂ ಆತ ವಿಚಾರಣೆ ವೇಳೆ ತಿಳಿಸಿದ್ದಾನೆ.
ಆತ ತನ್ನ ಟಾರ್ಗೆಟ್ ಮಹಿಳೆಯರ ಪಟ್ಟಿಯನ್ನು ಅಕ್ಟೋಬರ್ ನಲ್ಲಿಯೇ ಸಿದ್ಧಪಡಿಸಿದ್ದ ಹಾಗೂ ಅವರ ಚಟುವಟಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿಗಾವಹಿಸಿದ್ದನಲ್ಲದೆ ಅವರ ಫೋಟೋಗಳನ್ನೂ ಡೌನ್‍ಲೋಡ್ ಮಾಡಿದ್ದ. ಆತ ಎರಡು ಟ್ವಿಟ್ಟರ್ ಖಾತೆಗಳನ್ನೂ ಆ್ಯಪ್ ಕುರಿತ ಸುದ್ದಿ ನೀಡಲು ಆರಂಭಿಸಿದ್ದ. ಈ ಟ್ವಿಟ್ಟರ್ ಖಾತೆಗಳ ಮೂಲಕ ಆತ ಮುಂಬೈ ಪೊಲೀಸರನ್ನು ಅಣಕವಾಡಿದ್ದ ಹಾಗೂ ನಿರಪರಾಧಿಗಳನ್ನು ಬಂಧಿಸಬಾರದೆಂದು ಹೇಳಿದ್ದನಲ್ಲದೆ ತಾನೇ ಇದರ ಹಿಂದಿನ ಅಪರಾಧಿ ಸಾಧ್ಯವಾದರೆ ಬಂಧಿಸಿ ಎಂದು ಪೊಲೀಸರಿಗೆ ಸವಾಲೊಡ್ಡಿದ್ದ ಎನ್ನಲಾಗಿದೆ.
ಭೋಪಾಲದ ವೆಲ್ಲೋರ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬಿಟೆಕ್ ವಿದ್ಯಾರ್ಥಿಯಾಗಿರುವ ಬಿಷ್ಣೋಯಿ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವನು. ಆತನ ತಂದೆ ರಾಜಸ್ಥಾನದಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದರೆ ತಾಯಿ ಗೃಹಿಣಿಯಾಗಿದ್ದಾರೆ. ಇಬ್ಬರು ಸಹೋದರಿಯರಲ್ಲಿ ಒಬ್ಬಾಕೆ ವಕೀಲೆಯಾಗಿದ್ದಾರೆ ಎಂದು ತಿಳಿದು ಬಂದಿದೆ.







