ವೃತ್ತಿಯಲ್ಲಿ ದಕ್ಷತೆ ಇದ್ದಾಗ ಸಾರ್ವಜನಿಕರ ನಿರೀಕ್ಷೆ ಈಡೇರಿಸಲು ಸಾಧ್ಯ: ಕಮಿಷನರ್ ಶಶಿಕುಮಾರ್

ಮಂಗಳೂರು, ಜ.7: ಪೊಲೀಸ್ ಅಧಿಕಾರಿ, ಸಿಬ್ಬಂದಿ ತಮ್ಮ ವೃತ್ತಿಯಲ್ಲಿ ಸಂಪೂರ್ಣ ದಕ್ಷತೆ, ಪ್ರಾಮಾಣಿಕತೆಯಿಂದ ಕೆಲಸ ಕಾರ್ಯ ನಿರ್ವಹಿಸಿದಾಗ ಸಾರ್ವಜನಿಕರ ನಿರೀಕ್ಷೆಗಳನ್ನು ಈಡೇರಿಸಲು ಸಾಧ್ಯವಾಗುತ್ತದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ನಗರದ ಮಂಗಳೂರು ಪೊಲೀಸ್ ಕಮಿಷನರೇಟ್ ವತಿಯಿಂದ ಆಯೋಜಿಸಲಾದ ಕ್ರೀಡಾಕೂಟದ ಅಂಗವಾಗಿ ಪೊಲೀಸರು ಹಾಗೂ ಮಾಧ್ಯಮ ಮಿತ್ರರ ಜತೆಗಿನ ಭೋಜನ ಕೂಟದ ಸಂದರ್ಭ ಅವರು ಮಾತನಾಡಿದರು.
ಪೊಲೀಸ್ ಠಾಣೆಗಳು ಇಲಾಖೆ ಆತ್ಮವಿದ್ದಂತೆ. ಅಲ್ಲಿನ ಪಾವಿತ್ರತೆಯನ್ನು ಪ್ರತಿಯೊಬ್ಬ ಪೊಲೀಸ್ ಅಧಿಕಾರಿ ಸಿಬ್ಬಂದಿಯೂ ಕಾಪಾಡಬೇಕು. ಜತೆಗೆ ತಮ್ಮ ಕರ್ತವ್ಯದಲ್ಲಿ ಶೇ. 100ರಷ್ಟು ದಕ್ಷತೆಯಿಂದ ಕಾರ್ಯ ನಿರ್ವಹಿಸಿದಾಗ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಸಾಧ್ಯವಾಗುತ್ತದೆ. ಮಾಧ್ಯಮ ಕೂಡಾ ಇಲಾಖೆಯಿಂದ ನಡೆಯುವ ಉತ್ತಮ ಕಾರ್ಯಗಳನ್ನು ಬೆಂಬಲಿಸುವ ಜತೆಗೆ ತಪ್ಪುಗಳ ಬಗ್ಗೆ ಎಚ್ಚರಿಸಿದಾಗ ತಪ್ಪು ಸರಿಪಡಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕಲಾವಿದ ಅಜಿತ್ ಅವರು ಪೆನ್ಸಿಲ್ ಮೂಲಕ ಬರೆದ ಪೊಲೀಸ್ ಆಯುಕ್ತರ ಚಿತ್ರವೊಂದನ್ನು ಹಸ್ತಾಂತರಿಸಿದರು.
ಈ ಸಂದರ್ಭ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಎಸಿಪಿಗಳಾದ ನಟರಾಜ್, ಪಿ.ಎ. ಹೆಗಡೆ, ಇನ್ಸ್‌ಪೆಕ್ಟರ್ ಜ್ಯೋತಿರ್ಲಿಂಗ, ಪತ್ರಕರ್ತರ ಪರವಾಗಿ ಸತೀಶ್ ಇರಾ, ಸಂತೋಷ್ ಮೊದಲಾದವರು ಹಾಡಿ ಗಮನ ಸೆಳೆದರು.





