ಕರ್ಫ್ಯೂ ಜಾರಿಯ ವಿರುದ್ಧ ಎಐಟಿಯುಸಿ ಪ್ರತಿಭಟನೆ

ಮಂಗಳೂರು, ಜ. 7: ನಮ್ಮನ್ನಾಳುತ್ತಿರುವ ಸರಕಾರಗಳ ಧಣಿಗಳಾಗಿರುವ ಕಾರ್ಪೊರೇಟ್ ಸಂಸ್ಥೆಗಳ ಲಾಭಕ್ಕೋಸ್ಕರ ಸರಕಾರ ಗಳು ಕೊರೋನ ಹೆಸರಿನಲ್ಲಿ ಜನರನ್ನು ನಿಯಂತ್ರಿಸಲು ಹೊರಟಿವೆ. ಕಳೆದ ಎರಡು ವರ್ಷಗಳಲ್ಲಿ ವೈದ್ಯಕೀಯ ಮತ್ತಿತರ ಕ್ಷೇತ್ರದಲ್ಲಿ ಬಂಡವಾಳ ಹೂಡಿರುವ ಕಾರ್ಪೊರೇಟ್ ಸಂಸ್ಥೆಗಳ ಲಾಭ ಹೆಚ್ಚಾಗಿದೆ. ಮಾಸ್ಕ್, ಸ್ಯಾನಿಟೈಸರ್, ವ್ಯಾಕ್ಷಿನೇಶನ್‌ಗಳನ್ನು ಕಡ್ಡಾಯ ಮಾಡಿ ಜನರನ್ನು ಹೆದರಿಸಿ, ನಿಯಂತ್ರಿಸಲಾಗುತ್ತಿದೆ. ಅದಕ್ಕೆ ಪೂರಕವಾಗಿ ಲಾಕ್‌ಡೌನ್, ಕರ್ಫ್ಯೂ ಹೇರಿ ಜನರ ಬಾಯಿ ಮುಚ್ಚಿಸಲಾಗುತ್ತಿದೆ ಎಂದು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಜಿಲ್ಲಾ ಕಾರ್ಯದರ್ಶಿ ವಿ. ಸೀತಾರಾಮ ಬೇರಿಂಜ ಆರೋಪಿಸಿದರು.
ರಾಜ್ಯ ಸರಕಾರವು ಕೊರೋನ ನಿಗ್ರಹದ ಹೆಸರಿನಲ್ಲಿ ಕರ್ಫ್ಯೂ ಜಾರಿಗೊಳಿಸಿರುವುದನ್ನು ಖಂಡಿಸಿ ಎಐಟಿಯುಸಿ ವತಿಯಿಂದ ಶುಕ್ರವಾರ ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸರಕಾರಗಳ ತಪ್ಪು ಆರ್ಥಿಕ ನೀತಿಗಳಿಂದಾಗಿ ಕುಸಿದಿರುವ ದೇಶದ ಆರ್ಥಿಕತೆ ಕೊರೋನ ಹೆಸರಿನಲ್ಲಿ ಹೇರಿದ ಲಾಕ್‌ಡೌನ್‌ನಿಂದಾಗಿ ನೆಲೆ ಕಳೆದುಕೊಂಡಿತು. ಲಕ್ಷಾಂತರ ಕಾರ್ಮಿಕರು ಉದ್ಯೋಗ ಕಳೆದುಕೊಂಡರು. ದಕ್ಷಿಣ ಏಶಿಯಾದಲ್ಲೇ ಶೇ.8 ರಷ್ಟು ಉದ್ಯೋಗ ಭಾರತದಲ್ಲೇ ಕುಸಿತವಾುತು. ಸುಮಾರು 40 ಕೋಟಿ ಜನರು ಬಡತನಕ್ಕೆ ತಳ್ಳಲ್ಪಟ್ಟರು. ಕೇವಲ 15 ಉದ್ಯೋಗಕ್ಕಾಗಿ ಸುಮಾರು 15000 ನಿರುದ್ಯೋಗಿಗಳು ಅರ್ಜಿ ಸಲ್ಲಿಸುವ ಪರಿಸ್ಥಿತಿ ಉಂಟಾಯಿತು. ಯಾವುದೇ ಕೆಲಸವನ್ನು ಕನಿಷ್ಠ ಸಂಬಳಕ್ಕೆ ಒಪ್ಪುವ ಅನಿವಾರ್ಯತೆಯನ್ನು ಸರಕಾರಗಳು ಸೃಷ್ಟಿಸುತ್ತಿದೆ ಎಂದು ಸೀತಾರಾಮ ಬೇರಿಂಜ ಆರೋಪಿಸಿದರು.
ಎಐಟಿಯುಸಿ ರಾಜ್ಯ ಮಂಡಳಿ ಸದಸ್ಯ ಬಿ. ಶೇಖರ್ ಮಾತನಾಡಿದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್, ಜಿಲ್ಲಾ ಅಧ್ಯಕ್ಷ ಎಚ್. ರಾವ್, ಕೋಶಾಧಿಕಾರಿ ಎ.ಪಿ. ರಾವ್, ಜೊತೆ ಕಾರ್ಯದರ್ಶಿಗಳಾದ ಎಂ. ಕರುಣಾಕರ್, ಸುರೇಶ್ ಕುಮರ್, ಸುಲೋಚನಾ ಹರೀಶ್, ಸಂಜೀವ ಹಳೆಯಂಗಡಿ, ವಿಶ್ವನಾಥ ಬ್ರಹ್ಮರಕೂಟ್ಲು, ನಾಗೇಶ್ ಕಲ್ಲೂರು, ಸರೋಜಿನಿ ಕೂರಿಯಾಳ, ಎಂ.ಬಿ. ಭಾಸ್ಕರ್, ರೂಪಾ ಸಿದ್ದಾರ್ಥನಗರ, ಕೃಷ್ಣಪ್ಪವಾಮಂಜೂರು, ಡಿ. ಭುಜಂಗ, ಕೃಷ್ಣ ವಿಟ್ಲ ಪಾಲ್ಗೊಂಡಿದ್ದರು.







