ಉಡುಪಿ; ಜನರಿದ್ದರೆ ಮಾತ್ರ ಬಸ್‌ಗಳ ಓಡಾಟ !
ಕರ್ಫ್ಯೂ ಬಗ್ಗೆ ಜನ ಗೊಂದಲದ ಗೂಡು..
ಉಡುಪಿ, ಜ.7: ರಾಜ್ಯಾದ್ಯಂತ ಇಂದು ರಾತ್ರಿಯಿಂದ ವಾರಾಂತ್ಯ ಕರ್ಫ್ಯೂ ಜಾರಿಗೊಂಡಿದ್ದು, ನಾಳೆ ದಿನವಿಡಿ ಇರುವ ಜನ ಸಂಚಾರವನ್ನು ಗಮನಿಸಿ ಖಾಸಗಿ ಬಸ್‌ಗಳು ಜಿಲ್ಲೆಯಾದ್ಯಂತ ಓಡಾಟ ನಡೆಸಲು ನಿರ್ಧರಿಸಿವೆ ಎಂದು ಜಿಲ್ಲೆಯ ಖಾಸಗಿ ಬಸ್ ಮಾಲಕರ ಸಂಘದ ಅಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ ತಿಳಿಸಿದ್ದಾರೆ.
ವೀಕೆಂಡ್ ಕರ್ಫ್ಯೂ ಇದ್ದರೂ, ಬಸ್‌ಗಳ ಸಂಚಾರಕ್ಕೆ ನಿರ್ಬಂಧಗಳಿಲ್ಲ. ಆದರೆ ಜನರು ತುರ್ತು ಕೆಲಸ ಕಾರ್ಯಗಳಿಗೆ ಬೀದಿಗಿಳಿಯ ದಿದ್ದರೆ ಬಸ್‌ಗಳು ಓಡಾಟ ನಡೆಸಲಾರವು. ಹೀಗಾಗಿ ಜನರ ಓಡಾಟವಿದ್ದರೆ ನಾಳೆ ಬಸ್‌ಗಳನ್ನು ಓಡಿಸುವಂತೆ ಬಸ್ ಮಾಲಕರಿಗೆ ಸಂಘ ತಿಳಿಸಿದೆ ಎಂದವರು ತಿಳಿಸಿದರು.
ಕೆಎಸ್ಸಾರ್ಟಿಸಿ ಬಸ್‌ಗಳೂ ಸಹ ಜನ ಇದ್ದರೆ ಮಾತ್ರ ಸಂಚರಿಸಲಿವೆ. ಪ್ರಯಾಣಿಕರಿದ್ದರೆ ಮಾತ್ರ ಬಸ್‌ಗಳನ್ನು ಓಡಿಸುವಂತೆ ಮೇಲಿನ ಅಧಿಕಾರಿಗಳಿಂದ ಸೂಚನೆ ಬಂದಿದೆ. ಇದು ದೂರ ಪ್ರಯಾಣದ ಹಾಗೂ ನಗರ ಸಾರಿಗೆ, ನರ್ಮ್ ಬಸ್‌ಗಳಿಗೂ ಅನ್ವಯಿಸುತ್ತದೆ ಎಂದು ಉಡುಪಿಯ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಅಂಗಡಿ ಮುಂಗಟ್ಟುಗಳನ್ನು ತೆರೆಯುವ ಕುರಿತಂತೆಯೂ ಇದೇ ರೀತಿಯ ಗೊಂದಲವಿದೆ. ಅಗತ್ಯ ವಸ್ತುಗಳ ಅಂಗಡಿಗಳನ್ನು ಮಾತ್ರ ತೆರೆಯುವಂತೆ ಸೂಚನೆ ಇದ್ದರೂ, ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ನಾಳೆ ಉಳಿದ ಅಂಗಡಿಗಳು ತೆರೆದಿದ್ದರೆ ನಾವೂ ತೆರೆಯುತ್ತೇವೆ. ಈ ಬಗ್ಗೆ ನಾಳೆಯೇ ಗೊತ್ತಾಗಬೇಕು ಎಂದು ನಗರದ ಹೆಚ್ಚಿನ ಅಂಗಡಿಯವರು ತಿಳಿಸಿದರು.







