ಸಭಾಭವನ: ಶೇ.50ರಷ್ಟು ಜನರಿಗೆ ಅವಕಾಶ ನೀಡಲು ಮನವಿ

ಉಡುಪಿ, ಜ.7: ವೀಕೆಂಡ್ ಕರ್ಫ್ಯೂ ವೇಳೆ ಮಾಲ್, ಸಿನಿಮಾಗೃಹ, ಮಲ್ಟಿಫೆಕ್ಸ್, ಜಿಮ್ ಹಾಗೂ ಇತರ ವಹಿವಾಟುಗಳಿಗೆ ನಿಗದಿ ಪಡಿಸಿದಂತೆ 50:50ರ ಅನುಪಾತದಲ್ಲಿ ಮದುವೆ ಸಭಾಂಗಣಗಳ ಆಸನ ಸಾಮರ್ಥ್ಯದ ಶೇ.50ರಷ್ಟು ಜನರ ಕೂಡುವಿಕೆಗೆ ಅವಕಾಶ ಕಲ್ಪಿಸುವಂತೆ ಉಡುಪಿ ಜಿಲ್ಲಾ ಸಭಾಭವನಗಳ ಒಕ್ಕೂಟ ಸರಕಾರಕ್ಕೆ ಮನವಿ ಮಾಡಿದೆ.
ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಶೇಡಿಕೊಡ್ಲು ವಿಠಲ್ ಶೆಟ್ಟಿ, ಕೋವಿಡ್-19ರಿಂದಾಗಿ 2020ರ ಮಾರ್ಚ್ ತಿಂಗಳಿನಿಂದ 2021ರ ಅಕ್ಟೋಬರ್ ತಿಂಗಳವರೆಗೂ ಯಾವುದೇ ಕಾರ್ಯಕ್ರಮಗಳನ್ನು ಪೂರ್ಣಪ್ರಮಾಣದಲ್ಲಿ ನಡೆಸಲಾಗದೇ ಸಭಾಭವನಗಳ ಮಾಲಕರು ಸಂಕಷ್ಟಕ್ಕೀಡಾಗಿದ್ದಾರೆ ಎಂದವರು ವಿವರಿಸಿದರು.
ಇನ್ನೇನು ಕಾರ್ಯಕ್ರಮಗಳು ಪೂರ್ಣಪ್ರಮಾಣದಲ್ಲಿ ಪ್ರಾರಂಭವಾಗುವ ಹಂತದಲ್ಲಿರುವಾಗಲೇ ಮೂರನೇ ಅಲೆಯ ಸೂಚನೆ ಯಂತೆ ಮತ್ತೆ ಈಗ ಸಭಾಂಗಣದಲ್ಲಿ ಸಂಪೂರ್ಣ ಅವೈಜ್ಞಾನಿಕ ರೀತಿಯಲ್ಲಿ 100ರಿಂದ 200 ಜನರಿಗೆ ಮಾತ್ರ ಪ್ರವೇಶಾವಕಾಶ ನೀಡುವಂತೆ ಸರಕಾರ ಆದೇಶ ಹೊರಡಿಸಿದೆ ಎಂದವರು ದೂರಿದರು.
ಸಭಾಭವನವು ಕೇವಲ ಮಾಲಕರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಜಿಲ್ಲೆಯಲ್ಲಿ 200ಕ್ಕೂ ಅಧಿಕ ಮದುವೆ ಹಾಗೂ ಇತರ ಕಾರ್ಯಕ್ರಮ ನಡೆಯುವ ವಿವಿಧ ಸಾಮರ್ಥ್ಯದ ಸಭಾಭವನಗಳಿವೆ. ಇಲ್ಲಿ ಅಡುಗೆಯವರು, ಊಟ ಬಡಿಸು ವವರು, ಕ್ಲೀನರ್‌ಗಳು, ಸ್ವಚ್ಛತಾ ಸಿಬ್ಬಂದಿಗಳು, ಅಲಂಕಾರ, ವಾದ್ಯವರು ಸೇರಿದಂತೆ ಲಕ್ಷಾಂತರ ಮಂದಿ ಇದನ್ನು ಅವಲಂಬಿಸಿದ್ದಾರೆ ಎಂದು ವಿಠಲ ಶೆಟ್ಟಿ ತಿಳಿಸಿದರು.
ಇವರೆಲ್ಲರ ಹಾಗೂ ಇವರನ್ನೇ ಅವಲಂಬಿಸಿರುವ ಅವರ ಕುಟುಂಬಗಳ ಬೇಡಿಕೆಯೂ ಇದೇ ಆಗಿದೆ. ಆದ್ದರಿಂದ ಸರಕಾರ ತಕ್ಷಣ ತಮ್ಮ ಬೇಡಿಕೆಗಳಿಗೆ ಸ್ಪಂಧಿಸಿ, ಸಭಾಭವನಗಳ ಮಾಲಕರ ಬಗ್ಗೆ ಮಲತಾಯಿ ಧೋರಣೆ ತಾಳದೇ ಲಕ್ಷಾಂತರ ಕುಟುಂಬಗಳ ನಿರ್ವಹಣೆಗೆ ಅವಕಾಶ ಕಲ್ಪಿಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದರು.
ಸಭಾಭವನಗಳು ವಿಶಾಲವಾಗಿರುತ್ತವೆ. ಇಲ್ಲಿ ಸಾಮಾಜಿಕ ಅಂತರ, ಸ್ವಚ್ಛತೆ ಕಾಪಾಡಿಕೊಳ್ಳಲು ಅವಕಾಶವಿರುತ್ತದೆ. ಸರಕಾರದ ಆದೇಶದಂತೆ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಕಾರ್ಯಕ್ರಮ ನಡೆಸಲು ನಾವು ಬದ್ಧರಾಗಿದ್ದೇವೆ ಎಂದವರು ನುಡಿದರು.
ಸರಕಾರ 2021ರ ಜುಲೈ ತಿಂಗಳಲ್ಲಿ ನೀಡಿದ ಆದೇಶದಂತೆ ಹೊಟೇಲ್, ರೆಸಾರ್ಟ್, ಎಮ್ಯೂಸ್‌ಮೆಂಟ್ ಪಾರ್ಕ್‌ಗಳಿಗೆ ನೀಡಿದಂತೆ ಸಭಾಭವನಕ್ಕೂ ಆಸ್ತಿ ತೆರಿಗೆಯಲ್ಲಿ ಶೇ.50ರಷ್ಟು ವಿನಾಯಿತಿಯನ್ನು ನೀಡಬೇಕು. ಅದೇ ರೀತಿ ಕಳೆದೆರಡು ವರ್ಷಗಳಿಂದ ತಮಗೆ ಯಾವುದೇ ಆದಾಯ ಇಲ್ಲದ ಕಾರಣ ಮೆಸ್ಕಾಂನ ವಿದ್ಯುತ್ ಬಿಲ್‌ನಲ್ಲೂ ರಿಯಾಯಿತಿ ನೀಡಬೇಕು ಎಂದು ಒಕ್ಕೂಟದ ಖಜಾಂಚಿ ರಂಜನ್ ಕಲ್ಕೂರ ಒತ್ತಾಯಿಸಿದರು.
ಒಂದು ವೇಳೆ ನಮ್ಮ ಬೇಡಿಕೆಗಳಿಗೆ ಸರಕಾರ ಸಕಾರಾತ್ಮಕವಾಗಿ ಸ್ಪಂಧಿಸದಿದ್ದರೆ ಸಭಾಭವನವನ್ನು ಅವಲಂಬಿತ ಕುಟುಂಬಗಳ ಸದಸ್ಯರೊಂದಿಗೆ ಬೀದಿಗಿಳಿದು ಪ್ರತಿಭಟಿಸುವುದು ಅನಿವಾರ್ಯವಾಗಲಿದೆ ಎಂದು ಒಕ್ಕೂಟ ಹೇಳಿದೆ. ಬಳಿಕ ಒಕ್ಕೂಟದ ಪದಾಧಿಕಾರಿಗಳು ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿಪತ್ರವನ್ನು ಜಿಲ್ಲಾಧಿಕಾರಿ ಕೂರ್ಮಾರಾವ್ ಹಾಗೂ ಎಸ್ಪಿ ಎನ್.ವಿಷ್ಣುವರ್ಧನ್ ಅವರಿಗೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಜಯರಾಜ್ ಹೆಗ್ಡೆ, ಭರತಕುಮಾರ್ ಶೆಟ್ಟಿ, ಪ್ರದೀಪ್‌ಚಂದ್ರ ಶೆಟ್ಟಿ, ಎರ್ಮಾಳ್ ಶಶಿಧರ ಶೆಟ್ಟಿ, ಶ್ರೀನಿವಾಸ ಉಳ್ಳೂರು, ಭಾಸ್ಕರ ಜೋಯಿಸ, ಚಂದ್ರಶೇಖರ ಶೆಟ್ಟಿ, ಸತೀಶ್ ಹೆಗ್ಡೆ ಉಪಸ್ಥಿತರಿದ್ದರು.









