ಚೀನಾದಲ್ಲಿ ಸ್ಫೋಟದಿಂದ ಕಟ್ಟಡ ಕುಸಿತ: ಕನಿಷ್ಟ 3 ಮಂದಿ ಮೃತ್ಯು

ಸಾಂದರ್ಭಿಕ ಚಿತ್ರ
ಬೀಜಿಂಗ್, ಜ.7: ಚೀನಾದ ವುಲಾಂಗ್ ಜಿಲ್ಲೆಯ ಚಾಂಗ್ಕ್ವಿಂಗ್ ನಗರದಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟದಲ್ಲಿ ಕಟ್ಟಡವೊಂದು ಕುಸಿದು ಬಿದ್ದು ಕನಿಷ್ಟ 3 ಮಂದಿ ಮೃತಪಟ್ಟಿರುವುದಾಗಿ ಸರಕಾರಿ ಸ್ವಾಮ್ಯದ ಮಾಧ್ಯಮ ಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ.
ಗ್ಯಾಸ್ ಸೋರಿಕೆಯಾಗಿ ಸ್ಫೋಟ ಸಂಭವಿಸಿರುವ ಸಾಧ್ಯತೆಯಿದ್ದು ಇದರಿಂದ ಪಕ್ಕದಲ್ಲಿದ್ದ ಕಟ್ಟಡ ನೆಲಕ್ಕುರುಳಿದೆ. ಕುಸಿದ ಕಟ್ಟಡದಲ್ಲಿದ್ದ ಕ್ಯಾಂಟೀನ್ನಲ್ಲಿದ್ದ 27 ಮಂದಿ ಕಟ್ಟಡದ ಅವಶೇಷಗಳಡಿ ಸಿಲುಕಿಕೊಂಡರು. ತಕ್ಷಣ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು ಸಂಜೆಯ ವೇಳೆಗೆ 13 ಮಂದಿಯನ್ನು ಪತ್ತೆಹಚ್ಚಲಾಗಿದೆ. ಇದರಲ್ಲಿ 3 ಮಂದಿ ಮೃತಪಟ್ಟಿದ್ದರು ಎಂದು ಚೀನಾದ ಅಗ್ನಿಶಾಮಕ ದಳ ಹೇಳಿದೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಸ್ಫೋಟ ನಡೆದ ಸ್ಥಳದಲ್ಲಿ ಹಲವು ಕಟ್ಟಡಗಳಿದ್ದು ಕುಸಿದ ಕಟ್ಟಡದ ಬಳಿ ತೆರಳಲು ರಕ್ಷಣಾ ತಂಡ ಹರಸಾಹಸ ಪಡಬೇಕಾಯಿತು. ರಕ್ಷಣಾ ತಂಡದ 150ಕ್ಕೂ ಅಧಿಕ ಸದಸ್ಯರು ಬೃಹತ್ ಯಂತ್ರ ಬಳಸಿ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಸ್ಫೋಟದ ಬಗ್ಗೆ ತನಿಖೆ ಆರಂಭವಾಗಿದೆ ಎಂದು ವರದಿ ತಿಳಿಸಿದೆ.





