ಆಯುಧಗಳು ಮಾತನಾಡುವ ದೇಶಕ್ಕೆ ಉಳಿಗಾಲವಿಲ್ಲ: ಜ್ಞಾನ ಪ್ರಕಾಶ ಸ್ವಾಮೀಜಿ
ಅರಿಯಿರಿ ಮನುಕುಲದ ಪ್ರವಾದಿಯನ್ನು-ಸಂದೇಶ ಪ್ರಚಾರ ಅಭಿಯಾನದ ಸಮಾರೋಪ

ಮಂಗಳೂರು, ಜ.7: ಧಾರ್ಮಿಕ ಆಚಾರ-ವಿಚಾರಕ್ಕೆ ಸಂಬಂಧಿಸಿ ಜಗತ್ತಿಗೆ ಮಾದರಿಯಾಗಬೇಕಾಗಿದ್ದ ಭಾರತದಲ್ಲಿ ಇಂದು ಆಯುಧಗಳು ಮಾತನಾಡತೊಡಗಿವೆ. ಇದು ಅಪಾಯಕ್ಕೊಡ್ಡುವಂತಹ ಸಂಗತಿಯಾಗಿದ್ದು, ಇದರಿಂದ ದೇಶಕ್ಕೆ ಯಾವತ್ತೂ ಉಳಿಗಾಲವಿಲ್ಲ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಪುರಭವನದಲ್ಲಿ ಶುಕ್ರವಾರ ನಡೆದ ಯುನಿವೆಫ್ ಕರ್ನಾಟಕ ಇದರ 'ಅರಿಯಿರಿ ಮನುಕುಲದ ಪ್ರವಾದಿಯನ್ನು' ಎಂಬ ಘೋಷವಾಕ್ಯದಡಿ ಹಮ್ಮಿಕೊಂಡ ಪ್ರವಾದಿ ಮುಹಮ್ಮದ್ (ಸ) ರವರ ಸಂದೇಶ ಪ್ರಚಾರ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಮನುಷ್ಯನಿಗಾಗಿ ಧರ್ಮವೋ, ಧರ್ಮಕ್ಕಾಗಿ ಮನುಷ್ಯನೋ ಎಂಬಂತಹ ಕಾಲಘಟ್ಟದಲ್ಲಿ ನಾವಿದ್ದೇವೆ. ದೇಶದೆಲ್ಲೆಡೆ ಕೊಲೆ, ಅತ್ಯಾಚಾರ, ದೌರ್ಜನ್ಯ ದಬ್ಬಾಳಿಕೆ ಹೆಚ್ಚುತ್ತಿವೆ, ಮನುಷ್ಯತ್ವ ನಾಶವಾಗುತ್ತಿದೆ. ಆಯುಧಗಳೇ ಮಾತನಾಡತೊಡಗಿವೆ. ಇದರಿಂದ ದೇಶದಲ್ಲಿ ಒಗ್ಗಟ್ಟು, ಅಭಿವೃದ್ಧಿ ಸಾಧ್ಯವಿಲ್ಲ. ಬದಲಾಗಿ ಸುಮಾರು 200 ವರ್ಷಗಳಷ್ಟು ಹಿಂದಕ್ಕೆ ದೇಶ ಸರಿಯಲಿದೆ ಎಂದು ಜ್ಞಾನ ಪ್ರಕಾಶ ಸ್ವಾಮೀಜಿ ಹೇಳಿದರು.
ಧರ್ಮದ ಹೆಸರಿನಲ್ಲಿ ದೇಶಕ್ಕೆ ಬೆಂಕಿ ಹಚ್ಚಲಾಗುತ್ತದೆ. ಪ್ರೀತಿ, ಮಾನವೀಯತೆಯಿಂದ ಮೆರೆಯಬೇಕಿದ್ದ ದೇಶವು ಬೆಂಕಿಯಂತೆ ಉರಿಯುತ್ತಿದೆ. ಈ ಬೆಂಕಿಯನ್ನು ಆರಿಸುವ ಬದಲು ಆಯುಧಗಳನ್ನು ಬಳಸಲಾಗುತ್ತದೆ. ಸತ್ಯ ಹೇಳುವವರ ಮೇಲೆ ಗುಂಡಿನ ದಾಳಿ ಮಾಡಲಾಗುತ್ತದೆ. ನಾವು ಆಕಾರದಲ್ಲಿ ಮನುಷ್ಯರಾಗಿದ್ದೇವೆಯೇ ವಿನಃ ಆಚಾರದಲ್ಲಿ ಮನುಷ್ಯರಾಗಿಲ್ಲ ಎಂಬುದಕ್ಕೆ ಈ ಎಲ್ಲ ವಿದ್ಯಮಾನಗಳೇ ಸಾಕ್ಷಿಯಾಗಿದೆ. ಮನುಕುಲದ ಹಿತ ಬಯಸಿದ್ದ ಪ್ರವಾದಿ ಪೈಗಂಬರ್‌ರ ಆದರ್ಶವನ್ನು ಇನ್ನಾದರು ನಾವೆಲ್ಲ ಪಾಲಿಸಬೇಕಿದೆ ಎಂದು ಜ್ಞಾನ ಪ್ರಕಾಶ ಸ್ವಾಮೀಜಿ ನುಡಿದರು.
ಮತ್ತೋರ್ವ ಮುಖ್ಯ ಅತಿಥಿ ಲೇಖಕ ವಿಲ್ಫ್ರೆಡ್ ಡಿಸೋಜ ಮಾತನಾಡಿ ಎಲ್ಲಾ ಧರ್ಮಗಳ ಸಾರ ಒಂದೇ ಎಂದು ಹೇಳಿಕೊಂಡರೂ ಕೂಡ ದೇಶದಲ್ಲಿ ಧರ್ಮಗಳ ಮಧ್ಯೆ ಮೇಲಾಟ ಹೆಚ್ಚುತ್ತಿವೆ. ನಮ್ಮ ಧರ್ಮವೇ ಶ್ರೇಷ್ಠ ಎಂಬ ವ್ಯಸನವೂ ಇದೆ ಅಸಹಿಷ್ಣುತ್ತೆ ವ್ಯಾಪಿಸುತ್ತಿದೆ. ಧರ್ಮದೊಳಗೆ ಜಾತಿ, ಪಂಗಡ ಇಲ್ಲವೆಂದರೂ ಕೂಡ ಶ್ರೇಣೀಕೃತ ಜಾತಿ ವ್ಯವಸ್ಥೆ ತಳವೂರಿದೆ. ಕರ್ಮಟ ಬ್ರಾಹ್ಮಣ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುನಿವೆಫ್ ಕರ್ನಾಟಕ ಇದರ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ 'ಮಾನವೀಯ ಮೌಲ್ಯಗಳು ಹಾಗೂ ಪರಧರ್ಮ ಸಹಿಷ್ಣುತೆ ಮತ್ತು ಪ್ರವಾದಿ ಮುಹಮ್ಮದ್ (ಸ)' ಎಂಬ ವಿಷಯದಲ್ಲಿ ಮಾತನಾಡಿದರು.
ವೇದಿಕೆಯಲ್ಲಿ ಮೈಸೂರಿನ ಸಿದ್ದರಾಮಯ್ಯ ಸ್ವಾಮೀಜಿ, ಅಭಿಯಾನದ ಸಹ ಸಂಚಾಲಕ ಶಾಬಾನ್ ನಬೀಲ್, ಯುನಿವೆಫ್ ಸದಸ್ಯ ಅಬ್ದುಲ್ ರಶೀದ್ ಉಪಸ್ಥಿತರಿದ್ದರು. ಅಭಿಯಾನದ ಸಂಚಾಲಕ ವಖಾಝ್ ಅರ್ಶಲನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಯು.ಕೆ. ಖಾಲಿದ್ ಸ್ವಾಗತಿಸಿದರು.










