ದ.ಕ. ಜಿಲ್ಲೆಯಲ್ಲೂ ವಾರಾಂತ್ಯ ಕರ್ಫ್ಯೂ ಆರಂಭ

ಮಂಗಳೂರು, ಜ. 7: ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಆದೇಶದಂತೆ ದ.ಕ. ಜಿಲ್ಲೆಯಲ್ಲೂ ಇಂದು ರಾತ್ರಿಯಿಂದ ವಾರಾಂತ್ಯ ಕರ್ಫ್ಯೂ ಆರಂಭವಾಗಿದೆ.
ಸೋಮವಾರ ಬೆಳಗ್ಗೆ 5ರವರೆಗೆ ಕರ್ಫ್ಯೂ ಮುಂದುವರಿಯಲಿದ್ದು, ಈ ಅವಧಿಯಲ್ಲಿ ಅಗತ್ಯ ಸೇವೆ ಹೊರತುಪಡಿಸಿ ಉಳಿದ ಎಲ್ಲ ಸೇವೆ, ವ್ಯವಹಾರಗಳು ಬಂದ್ ಆಗಲಿವೆ. ಸಾರ್ವಜನಿಕರು ಸಕಾರಣ ಇಲ್ಲದೆ ಮನೆಯಿಂದ ಹೊರಗೆ ಓಡಾಡದಂತೆ ಈಗಾಗಲೇ ಜಿಲ್ಲಾಡಳಿತ ಸೂಚನೆ ನೀಡಿದೆ.
ಕರ್ಫ್ಯೂ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದ್ದು, ಅನಗತ್ಯ ವಾಹನಗಳ ಸಂಚಾರಕ್ಕೆ ತಡೆ ಒಡ್ಡಲಾಗಿದೆ. ನಗರ ಪ್ರವೇಶಿಸುವ ಪ್ರಮುಖ ಸ್ಥಳಗಳು ಮತ್ತು ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸರು ರಸ್ತೆಗೆ ಬ್ಯಾರಿಕೇಡ್ ಅಳವಡಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ವಾರಾಂತ್ಯ ಕರ್ಫ್ಯೂ ವೇಳೆ ದಿನಸಿ, ಹಾಲು, ತರಕಾರಿ, ಬೀದಿ ಬದಿ ವ್ಯಾಪಾರ, ಮಾಂಸ, ಮೀನು, ಔಷಧ, ಪತ್ರಿಕಾ ಅಂಗಡಿಗಳು ತೆರೆದಿರುತ್ತವೆ. ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ಶಾಲಾ ಕಾಲೇಜುಗಳು ಬಂದ್ ಆಗಲಿದ್ದು, ಪೂರ್ವನಿಗದಿತ ಪರೀಕ್ಷೆಗಳು ನಡೆಯಲಿವೆ. ದೂರದ ಊರುಗಳಿಗೆ ತೆರಳುವವರು ಬಸ್, ರೈಲು, ವಿಮಾನ ಪ್ರಯಾಣದ ಟಿಕೆಟ್‌ನೊಂದಿಗೆ ಸಂಚರಿಸಬಹುದಾಗಿದೆ.
ಸರಕಾರಿ, ಖಾಸಗಿ ಬಸ್ ಸಂಚಾರವಿದೆ
ವಾರಾಂತ್ಯ ಕರ್ಫ್ಯೂ ವೇಳೆ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಓಡಾಟ ನಡೆಸಲಿವೆ. ಪ್ರಯಾಣಿಕರ ಲಭ್ಯತೆ ಅನುಸರಿಸಿ ಬಸ್‌ಗಳ ಕಾರ್ಯಾಚರಣೆ ನಡೆಯಲಿದೆ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಕಾರಿ ತಿಳಿಸಿದ್ದಾರೆ.
ಜಿಲ್ಲಾಡಳಿತದ ಆದೇಶದಂತೆ ದ.ಕ. ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳು ವಾರಾಂತ್ಯ ಕರ್ಫ್ಯೂ ವೇಳೆ ಸಂಚರಿಸಲಿವೆ. ಆದರೆ, ಜನರ ಸ್ಪಂದನೆ ನೋಡಿಕೊಂಡು ಬಸ್‌ಗಳನ್ನು ಓಡಿಸಲಾಗುವುದು. ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಕೋವಿಡ್ ನಿಯಮ ಪಾಲಿಸಿ ಸಹಕರಿಸಬೇಕು ಎಂದು ಖಾಸಗಿ ಬಸ್ ಮಾಲಕರ ಸಂಘದ ಅಧ್ಯಕ್ಷ ಜಯಶೀಲ ಅಡ್ಯಂತಾಯ ತಿಳಿಸಿದ್ದಾರೆ.







