ಬೆಂಗಳೂರು: 12 ಲಕ್ಷ ಮೌಲ್ಯದ ಮಾದಕ ವಸ್ತು ವಶ; ನೈಜೀರಿಯಾ ಪ್ರಜೆ ಬಂಧನ

ಬೆಂಗಳೂರು, ಜ.7: ನಗರದಲ್ಲಿ ಮಾದಕ ವಸ್ತುಗಳ ಸಾಗಣೆ ಮತ್ತು ಮಾರಾಟ ಮಾಡುವವರ ಬಗ್ಗೆ ನಿರಂತರ ದಾಳಿ ಮುಂದುವರೆದಿದ್ದು, ಬೈಯಪ್ಪನಹಳ್ಳಿ ಪೊಲೀಸರು ನೈಜೀರಿಯಾ ಪ್ರಜೆಯನ್ನು ಬಂಧಿಸಿ 12 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತನನ್ನು ನೈಜೀರಿಯಾದ ಪ್ರಜೆ ಅಗು ಎಜೆಮಾ ಅರುವಾ(41) ಎಂದು ಗುರುತಿಸಲಾಗಿದೆ. ಈತನಿಂದ ಮಾದಕ ವಸ್ತುಗಳಾದ 50 ಗ್ರಾಂ ಕೊಕೈನ್, 105 ಗ್ರಾಂ ಎಂಡಿಎಂಎ ಮತ್ತು ವಿವಿಧ ಬಣ್ಣದ 80 ಎಕ್ಸ್‍ಟೆಸಿ ಮಾತ್ರೆಗಳು ಹಾಗೂ ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ. ನಗರದಾದ್ಯಂತ ಸಿಂಥೆಟಿಕ್ ಡ್ರಗ್‍ಗಳ ಸಾಗಣೆ ಮತ್ತು ಮಾರಾಟ ಮಾಡುತ್ತಿರುವವರ ಬಗ್ಗೆ ಮಾಹಿತಿ ಸಂಗ್ರಹಿಸಿ ಅವರನ್ನು ಬಂಧಿಸಲು ಪೂರ್ವ ವಿಭಾಗದ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಬೈಯಪ್ಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹಳೆ ಮದ್ರಾಸು ರಸ್ತೆ, ಗೋಪಾಲನ್ ಮಾಲ್ ಬಳಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಹಲಸೂರು ಉಪವಿಭಾಗದ ಅಪರಾಧ ಪತ್ತೆತಂಡ ಹಾಗೂ ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರು ಸ್ಥಳದ ಮೇಲೆ ದಾಳಿ ಮಾಡಿ ನೈಜೀರಿಯಾ ಪ್ರಜೆಯನ್ನು ಬಂಧಿಸಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಚಿಕಿತ್ಸೆಗೆಂದು ಭಾರತಕ್ಕೆ ಬಂದು ವೀಸಾ ಅವಧಿ ಮುಗಿದಿದ್ದರೂ ಸಹ ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸ ಮಾಡಿಕೊಂಡು ಮಾದಕ ವಸ್ತುಗಳನ್ನು ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದನು. ಡಿಸಿಪಿ ಶರಣಪ್ಪ ಅವರ ಮಾರ್ಗದರ್ಶನದಲ್ಲಿ ಪೊಲೀಸರ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.







