ರಾಮನಗರ: ದಲಿತ ಮುಖಂಡರ ಮೇಲಿನ ಕೇಸು ವಾಪಸ್ ಪಡೆಯಲು ಆಗ್ರಹ
ಬೆಂಗಳೂರು, ಜ. 7: `ಇತ್ತೀಚೆಗೆ ರಾಮನಗರದಲ್ಲಿ ಸಚಿವರು ಮತ್ತು ಸಂಸದರ ನಡುವಿನ ಜಟಾಪಟಿ ಸಂದರ್ಭದಲ್ಲಿ ಚಳವಳಿಗಾರರನ್ನು ಗುರಿಯಾಗಿಸಿಕೊಂಡು ದಲಿತ ಮುಖಂಡರ ಮೇಲೆ ಗೂಂಡಾ ಕಾಯ್ದೆಯಡಿ ಕೇಸು ಹೂಡಿರುವ ಸಂಚು ರೂಪಿಸಿದ್ದು, ಇದನ್ನು ಕೈಬಿಡದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ' ಎಂದು ದಲಿತ ಸಂಘಟನೆಗಳ ಒಕ್ಕೂಟ ಎಚ್ಚರಿಕೆ ನೀಡಿದೆ.
ಶುಕ್ರವಾರ ಒಕ್ಕೂಟದ ಅಧ್ಯಕ್ಷ ಬಿ.ಚನ್ನಕೃಷ್ಣಪ್ಪ ಪತ್ರಿಕಾ ಪ್ರಕಟಣೆ ನೀಡಿದ್ದು, ರಾಮನಗರದಲ್ಲಿ ಅಂಬೇಡ್ಕರ್ ಪ್ರತಿಮೆ ಉದ್ಘಾಟನೆ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದವರ ಮೇಲೆ ಮೊಕದ್ದಮೆ ಹೂಡಿರುವ ಪೊಲೀಸರ ಕ್ರಮ ಖಂಡನೀಯ. ಸ್ಥಳೀಯ ದಲಿತ ಮುಖಂಡರಾದ ಡಾ.ಜಿ.ಗೋವಿಂದಯ್ಯ, ಕೋಟೆ ಕುಮಾರ್, ಗುಡ್ಡೆ ವೆಂಕಟೇಶ್ ಮತ್ತು ರಾಂಪುರ ನಾಗೇಶ್ ಸೇರಿದಂತೆ ಇನ್ನಿತರರು ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಬೇಕೆಂದು ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ.
ಇದೀಗ ಕಾರ್ಯಕ್ರಮದಲ್ಲಿ ಪರ-ವಿರೋಧ ಧಿಕ್ಕಾರದ ಘೋಷಣೆ ಕೂಗಿದ ನೆಪದಲ್ಲಿ ದಲಿತ ಮುಖಂಡರನ್ನು ಗುರಿ ಮಾಡುವುದು ಸರಿಯಲ್ಲ. ರಾಜ್ಯದಲ್ಲಿನ ಆಡಳಿತಾರೂಢ ಬಿಜೆಪಿ ಪಕ್ಷಪಾತ ಧೋರಣೆ ಅನುಸರಿಸುತ್ತಿದೆ. ಇದಕ್ಕೆ ಉದಾಹರಣೆಯಾಗಿ ಆ ಕಾರ್ಯಕ್ರಮದಲ್ಲಿ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರ ಮೇಲೆ ಇನ್ನೂ ಏಕೆ ಮೊಕದ್ದಮೆ ದಾಖಲಿಸಿಲ್ಲ ಎಂದು ಚನ್ನಕೃಷ್ಣಪ್ಪ ಪ್ರಶ್ನಿಸಿದ್ದಾರೆ.
ಸಚಿವ ಸ್ಥಾನದಲ್ಲಿರುವ ಡಾ.ಅಶ್ವತ್ಥ ನಾರಾಯಣ ಅವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಗಂಡಸ್ತನದ ಬಗ್ಗೆ ಮಾತನಾಡುತ್ತಾರೆ. ಅವರ ವಿರುದ್ಧ ಏಕೆ ಇನ್ನೂ ಕೇಸು ದಾಖಲಿಸಿಲ್ಲ. ಕೂಡಲೇ ಅವರ ವಿರುದ್ಧ ಮೊಕದ್ದಮೆ ದಾಖಲಿಸಬೇಕು. ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಪ್ರತಿಮೆ ಉದ್ಘಾಟನೆ ಸಮಾರಂಭವನ್ನು ತಮ್ಮ ರಾಜಕೀಯ ಮೇಲಾಟಕ್ಕೆ ಬಳಕೆ ಮಾಡಿಕೊಂಡಿದ್ದು ಅಕ್ಷಮ್ಯ. ದಲಿತ ಮುಖಂಡರ ಮೇಲೆ ಹಾಕಿರುವ ಕೇಸನ್ನು ವಾಪಸ್ ಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.







