ಹೊಸದಿಲ್ಲಿ: ಶೋಧದ ಭಯದಿಂದ ಮೊಬೈಲ್ ನುಂಗಿದ ಕೈದಿ ಆಸ್ಪತ್ರೆಗೆ ದಾಖಲು

ಹೊಸದಿಲ್ಲಿ, ಜ. 7: ದಿಲ್ಲಿಯಲ್ಲಿರುವ ಅತ್ಯಧಿಕ ಭದ್ರತೆಯ ತಿಹಾರ್ ಜೈಲಿನಲ್ಲಿ ಕೈದಿಯೋರ್ವ ಮೊಬೈಲ್ ಫೋನ್ ನುಂಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಈ ಘಟನೆ ಬುಧವಾರ (ಜನವರಿ 5) ನಡೆದಿದೆ ಎಂದು ಪ್ರಧಾನ ನಿರ್ದೇಶಕ (ಕಾರಾಗೃಹ) ಸಂದೀಪ್ ಗೋಯಲ್ ಹೇಳಿದ್ದಾರೆ. ತಿಹಾರ್ನ ಜೈಲು ನಂಬರ್ 1ರಲ್ಲಿದ್ದ ಕೈದಿಯೋರ್ವನಲ್ಲಿ ಮೊಬೈಲ್ ಇರುವ ಬಗ್ಗೆ ಸಂದೇಹಗೊಂಡು ನಮ್ಮ ಸಿಬ್ಬಂದಿಯೋರ್ವ ಶೋಧ ನಡೆಸಲು ತೆರಳಿದ್ದ. ಆಗ ಆತ ಮೊಬೈಲ್ ನುಂಗಿದ್ದ. ಕೂಡಲೇ ಆತನನ್ನು ನಗರದಲ್ಲಿರುವ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಡಿಜಿ ತಿಳಿಸಿದ್ದಾರೆ.
ಅದಾಗ್ಯೂ, ಆತ ಆರೋಗ್ಯವಾಗಿದ್ದಾನೆ. ಮೊಬೈಲ್ ದೇಹದ ಒಳಗೆಯೇ ಇದೆ ಎಂದು ಗೋಯಲ್ ತಿಳಿಸಿದ್ದಾರೆ. ಜೈಲಿನ ಒಳಗೆ ಕಾನೂನು ಬಾಹಿರ ಹಾಗೂ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ತರುವುದನ್ನು ತಡೆಯಲು ಎಕ್ಸ್ರೇ ಆಧಾರಿತ ಸ್ಕಾನರ್ ಅನ್ನು ಶೀಘ್ರವಾಗಿ ಅಳವಡಿಸಲಾಗುವುದು ಎಂದು ಗೋಯಲ್ ತಿಳಿಸಿದ್ದಾರೆ. ಕಳೆದ ಆರು ತಿಂಗಳಲ್ಲಿ ಕೈದಿಗಳಿಗೆ ಒಂದಲ್ಲದಿದ್ದರೆ, ಇನ್ನೊಂದು ರೀತಿಯಲ್ಲಿ ನೆರವು ನೀಡುವ ತಿಹಾರ್ ಜೈಲ್ ನ ಸುಮಾರು 40 ಅಧಿಕಾರಿಗಳ ವಿರುದ್ಧ ವಿವಿಧ ತನಿಖಾ ಸಂಸ್ಥೆಗಳು ಪ್ರಕರಣ ದಾಖಲಿಸಿವೆ.







