ಬೆಂಗಳೂರು: ಕಾರಿಗೆ ಲಾರಿ ಢಿಕ್ಕಿ; ಇಬ್ಬರು ಮಹಿಳೆಯರು ಸಹಿತ ನಾಲ್ವರು ಮೃತ್ಯು

ಬೆಂಗಳೂರು, ಜ.8:ಕಾರಿಗೆ ಲಾರಿವೊಂದು ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯರಿಬ್ಬರು ಸೇರಿ ನಾಲ್ವರು ಮೃತಪಟ್ಟಿರುವ ಘಟನೆ ಇಲ್ಲಿನ ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೊಮ್ಮನಹಳ್ಳಿ ನಿವಾಸಿ ಮುಹಮ್ಮದ್ ಪಿ(25),ಅಭಿಲಾಷ್(24), ಶಿಲ್ಪಾ(25) ಹಾಗೂ ಝೈನಾ(26)ಮೃತಪಟ್ಟವರು ಎಂದು ಪೊಲೀಸರು ಗುರುತಿಸಿದ್ದು, ಮೃತರ ಪೈಕಿ ಶಿಲ್ಪಾ ಶಿಕ್ಷಕಿಯಾಗಿದ್ದು, ಉಳಿದ ಮೂವರು ಸಾಫ್ಟ್‍ವೇರ್ ಕಂಪೆನಿಯ ಉದ್ಯೋಗಿಗಳಾಗಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಐವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಡಿಸಿಪಿ ಕುಲದೀಪ್ ಕುಮಾರ್ ಜೈನ್ ಮಾಹಿತಿ ನೀಡಿದ್ದಾರೆ.
ನಾಲ್ವರು ಕಾರಿನಲ್ಲಿ ಬನ್ನೇರುಘಟ್ಟದಿಂದ ಶುಕ್ರವಾರ ರಾತ್ರಿ 9:30ರ ವೇಳೆ ಹೋಗುತ್ತಿದ್ದಾಗ ಮಾರ್ಗಮಧ್ಯೆ ಇಲ್ಲಿನ ಬನ್ನೇರುಘಟ್ಟ ಸಮೀಪದ ನೈಸ್ ರಸ್ತೆಯಲ್ಲಿ ಸಂಚಾರ ದಟ್ಟಣೆಯಿಂದ ವಾಹನಗಳು ನಿಧಾನವಾಗಿ ಚಲಿಸುತ್ತಿದ್ದ ವೇಳೆ ಹಿಂದಿನಿಂದ ವೇಗವಾಗಿ ಬಂದ ತಮಿಳುನಾಡು ನೋಂದಣಿಯ ಲಾರಿಯೊಂದು ಕಾರಿಗೆ ಗುದ್ದಿದೆ.
ಇದರಿಂದಾಗಿ ಕಾರು ಸೇರಿದಂತೆ 6 ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಇದರ ರಭಸಕ್ಕೆ ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು, ಕಾರಿನಲ್ಲಿದ್ದ ಈ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ನೈಸ್ ಸಂಸ್ಥೆ ಮೇಲೆ ಪ್ರಕರಣಕ್ಕೆ ಸೂಚನೆ
ಸರಣಿ ಅಪಘಾತ ಸಂಭವಿಸಿ ನಾಲ್ವರ ದುರ್ಮರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನೈಸ್ ಸಂಸ್ಥೆ ಮೇಲೆ ಪ್ರಕರಣ ದಾಖಲಿಸಲು ಬೆಂಗಳೂರು ನಗರ ಜಂಟಿ ಪೊಲೀಸ್ ಆಯುಕ್ತ ಬಿ.ಆರ್.ರವಿಕಾಂತೇಗೌಡ ಸೂಚಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪಘಾತ ಸಂಭವಿಸಿದ ಸ್ಥಳದಲ್ಲಿ ರಸ್ತೆ ದುರಸ್ಥಿ ಕಾರ್ಯ ನಡೆಯುತ್ತಿದ್ದರಿಂದ ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ಹೆಚ್ಚಿತ್ತು.
ರಸ್ತೆ ದುರಸ್ಥಿ ಬಗ್ಗೆ ಯಾವುದೇ ಫಲಕ ಹಾಕಿರಲಿಲ್ಲ. ದೀಪವೂ ಅಳವಡಿಸಿರಲಿಲ್ಲ. ಹೀಗಾಗಿ ರಸ್ತೆ ನಿರ್ವಹಣೆ ಮಾಡುತ್ತಿರುವ ನೈಸ್ ಸಂಸ್ಥೆ ಮೇಲೆ ಎಫ್‍ಐಆರ್ ದಾಖಲಿಸಲು ಸೂಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.








