ಚಂಡೀಗಢ: ಒಂದೇ ಆಸ್ಪತ್ರೆಯ 157 ವೈದ್ಯರು ಸೇರಿ 352 ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಪಾಸಿಟಿವ್ !

ಚಂಡೀಗಢ: ಇಲ್ಲಿನ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ 157 ಮಂದಿ ವೈದ್ಯರು ಸೇರಿದಂತೆ 352 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್-19 ಪಾಸಿಟಿವ್ ಇರುವುದು ದೃಢಪಟ್ಟಿದೆ. ಅಚ್ಚರಿಯೆಂದರೆ ಈ ಪೈಕಿ ಶೇಕಡ 95ರಷ್ಟು ಮಂದಿ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದವರು!
2021ರ ಡಿಸೆಂಬರ್ 20ರಿಂದೀಚೆಗೆ ಆಸ್ಪತ್ರೆಯ ಆರೋಗ್ಯ ಸಿಬ್ಬಂದಿ ಪೈಕಿ ಒಬ್ಬರಾದ ಮೇಲೆ ಒಬ್ಬರಿಗೆ ಕೋವಿಡ್-19 ಸೋಂಕು ತಗುಲುತ್ತಿದೆ. ಇದೀಗ ನಾಗರಿಕ ಸಮಾಜದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ ಆರೋಗ್ಯ ಕಾರ್ಯಕರ್ತರಲ್ಲೂ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಆಸ್ಪತ್ರೆಯ ಉನ್ನತ ಅಧಿಕಾರಿಗಳು ತೀವ್ರ ನಿಗಾ ವಹಿಸಿದ್ದಾರೆ.
ಆದರೆ ಎಲ್ಲ ಸೋಂಕು ಪ್ರಕರಣಗಳಲ್ಲಿ ರೋಗಿಗಳಲ್ಲಿ ಅಲ್ಪ ಪ್ರಮಾಣದ ರೋಗಲಕ್ಷಣವಷ್ಟೇ ಕಂಡುಬಂದಿದೆ. ಈ ಆರೋಗ್ಯ ಕಾರ್ಯಕರ್ತರು ಹಾಸ್ಟೆಲ್‌ಗಳಲ್ಲಿ ವಾಸವಿದ್ದು, ಇವರಿಗೆ ಮನೆಯಲ್ಲೇ ಪ್ರತ್ಯೇಕವಾಗಿ ಇರಲು ಅವಕಾಶವಿಲ್ಲ. ಈ ಕಾರಣದಿಂದ ನೆಹರೂ ಆಸ್ಪತ್ರೆಯ ವಿಸ್ತರಿತ ವಾರ್ಡ್‌ನಲ್ಲಿ ಐಸೊಲೇಶನ್‌ಗೆ ಒಳಪಡಿಸಲಾಗಿದೆ.
"ಇವು ಒಮೈಕ್ರಾನ್ ಪ್ರಕರಣಗಳು ಎಂಬ ನಿರ್ಧಾರಕ್ಕೆ ಬರುವುದು ಕಷ್ಟ. ಇದನ್ನು ಆಡಳಿತ ವ್ಯವಸ್ಥೆ ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲ ವಿಭಾಗಗಳು ಕೋವಿಡ್ ಸೂಕ್ತ ನಡವಳಿಕೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಸಿಬ್ಬಂದಿ ಕೂಡಾ ಎಲ್ಲ ವೇಳೆ ಸೂಕ್ತವಾಗಿ ಮಾಸ್ಕ್ ಧರಿಸುವಂತೆ ಕಡ್ಡಾಯಪಡಿಸಲಾಗಿದೆ" ಎಂದು ಆಸ್ಪತ್ರೆಯ ಉನ್ನತ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.







