ಮೊಬೈಲ್ ಬಿಟ್ಟು ಇರಬಲ್ಲಿರಾ...?

ನೀವು ನಿಮ್ಮ ಮೊಬೈಲ್ ಬಿಟ್ಟು ಎಷ್ಟು ದಿನಗಳವರೆಗೆ ಇರಬಲ್ಲಿರಿ...? ಒಂದು ದಿನ? ಒಂದು ವಾರ? ಒಂದು ತಿಂಗಳು? ಅದಕ್ಕೂ ಹೆಚ್ಚು...?!
‘‘ರೀ... ಬಿಡಿ... ವಿಷಯ ಏನಂತ ಮೊದಲು ಹೇಳಿ...? ಏನ್ ಮೊಬೈಲ್ ಬಿಟ್ಟರೆ ಕೋಟಿ ಕೊಡ್ತೀರಾ...? ಇಲ್ಲಾ ಬಿಗ್‌ಬಾಸ್‌ಗೇನಾದ್ರೂ ರೆಫರ್ ಮಾಡ್ತೀರಾ...? ಹಂಗೇನಾದ್ರೂ ಇದ್ರೆ ಹೇಳಿ... ಈ ಕ್ಷಣಕ್ಕೆ ಬಿಟ್ಟೇ ಬಿಡ್ತೀವಿ. ನಮಗೂ ಸಾಕ್ ಸಾಕಾಗ್ ಹೋಗಿದೆ. ಈ ಮೊಬೈಲ್ ಬಂದ್ ಮೇಲಂತೂ ನೆಮ್ಮದಿನೇ ಇಲ್ಲದಾಂಗ್ ಹೋಗಿದೆ.’’
‘‘ಓಹ್, ಅಂದರೆ ನೀವು ನೆಮ್ಮದಿಗಾಗಿ ಮೊಬೈಲ್ ಬಿಡೋಕೆ ರೆಡಿ ಇದ್ದೀರಿ...! ಆದರೂ ಅದನ್ನು ಬಿಡೋಕೆ ಕೋಟಿ ರೂಪಾಯಿ ಬೇಕು! ಅಂದ್ರೆ ನಿಮಗೆ ನೆಮ್ಮದಿನೂ ಬೇಕು. ಅದಕ್ಕೂ ಮೊದಲು ಕೋಟಿನೂ ಬೇಕು ಕೋಟಿ ತಗೊಂಡು ನೆಮ್ಮದಿಯಾಗಿರೋ ವಿಚಾರ ನಿಮ್ಮದು...!’
ಸರಿ ಹಾಗಿದ್ರೆ, ನೀವೆಣಿಸಿದಂತೆ ನಿಮಗೆ ಕೋಟಿ ಸಿಗುತ್ತೆ. ಅಂತಲೇ ಇಟ್ಕಳ್ಳಿ, ಆದರೆ ಈಗಿಂದೀಗಲೇ ಈ ಕ್ಷಣದಿಂದಲೇ ಪರ್ಮನೆಂಟಾಗಿ ಮೊಬೈಲ್ ಬಿಡಬೇಕು ಅಂದ್ರೆ ಬಿಡ್ತೀರಾ...? ಯೋಚನೆ ಮಾಡಿ, ನಿಮಗೆ ಕೋಟಿ, ನೆಮ್ಮದಿ ಎರಡೂ ಸಿಗುತ್ತೆ..! ಆದರೆ ಮೊಬೈಲ್, ಇಂಟರ್ನೆಟ್‌ನ್ನು ಸಾಯೋ ತನಕ ಎಲ್ಲಿಯೂ ಟಚ್ ಮಾಡಬಾರದು ಸಾಧ್ಯವಿದೆಯಾ...?
‘‘ಅಯ್ಯೋ, ಸಾಯೋ ತನಕ ಟಚ್ ಮಾಡಬಾರದು ಅಂದ್ರೆ ಹೆಂಗ್ ಸ್ವಾಮಿ! ಮೊಬೈಲ್, ಇಂಟರ್‌ನೆಟ್ ಇಲ್ಲದೆ ಈ ಕಾಲದಲ್ಲಿ ಕೆಲಸ ಆಗೋದುಂಟಾ...? ದಿನಾ ದಿನಾ ಅಪ್‌ಡೇಟ್ ಆಗಬೇಕ್ ಸ್ವಾಮಿ... ಬಿಡಿ, ಕೋಟಿ ತಗೊಂಡ್ ಏನ್ ನೆಮ್ಮದಿ ನೋಡೋಕೆ ಆಗ್ತದಾ...!? ಮೊಬೈಲ್ ಒಂದ್ ಕೈಲಿದ್ರೆ ಕುಂತ್ ಜಾಗದಲ್ಲಿ ಸಂಪಾದನೆ ಮಾಡಬಹುದು ಸ್ವಾಮಿ... ಇನ್ನು ನೆಮ್ಮದಿನಾ...? ಈ ಟಚ್ ಸ್ಕ್ರೀನ್ ಮೊಬೈಲ್ ಇಟ್ಟುಕೊಂಡು ಯಾರು ನೆಮ್ಮದೀಲಿದಾರೆ. ಹೇಳಿ...?’’ ಇದೊಂಥರಾ ಕೊನೆಯಲ್ಲಿ ಒಲ್ಲದ ಮೊಸರಲ್ಲಿ ಕಲ್ಲಿದೆ ಅಂದ ಹಾಗಾಯಿತು. ಈ ಮನುಷ್ಯನ ಮನಸ್ಸು ಯಾವ ಕ್ಷಣದಲ್ಲಿ ಹೇಗೆ ಅನ್ನೋದೇ ದೊಡ್ಡ ಪ್ರಶ್ನೆಯಾದರೆ, ನಿಜಕ್ಕೂ ಅವನಿಗೆ ಏನು ಬೇಕು ಎನ್ನುವುದು ಇನ್ನೂ ದೊಡ್ಡ ಪ್ರಶ್ನೆ. ಆದರೆ ಈ ಮೊಬೈಲ್ ಮನುಷ್ಯ ಜೀವನದ ಬಹುತೇಕ ಎಲ್ಲವೂ ಆಗಿ ಹೋಗಿದೆ ಅನ್ನೋದು ಮಾತ್ರ ಸದ್ಯದ ಸತ್ಯ.
ಹೌದು, ಒಂದು ಕಡೆ ಸತ್ಯಾನೂ ಇದೆ. ಇನ್ನೊಂದು ಕಡೆ ಹುಡುಕಾಟವೂ ಇದೆ. ನಮಗೀಗ ಸ್ಮಾರ್ಟ್‌ಫೋನ್ ಇಲ್ಲದ ಬದುಕನ್ನು ಊಹಿಸೋಕೂ ಸಾಧ್ಯವಿಲ್ಲ. ಆದರೆ ಸ್ಮಾರ್ಟ್‌ಫೋನ್‌ನಿಂದ ನಮ್ಮ ನೆಮ್ಮದಿ ಮಾತ್ರ ಕೆಡ್ತಾ ಇದೆ. ಸ್ನೇಹ, ಪ್ರೀತಿ, ಸಂಬಂಧಗಳೆಲ್ಲಾ ಯಾಂತ್ರಿಕ ಅನ್ನಿಸ್ತಿದೆ. ಎಲ್ಲೋ ಸ್ವಂತಿಕೆ, ನೈಜತೆ, ಸ್ವಾತಂತ್ರ್ಯವೆಲ್ಲಾ ಕಳೆದುಕೊಳ್ತಾ ಇದ್ದೀವೇನೋ ಅಂತನಿಸ್ತಾ ಇದೆ. ಹೌದು, ನಮಗೆ ಹಿಂದಿನ ಆ ಒರಿಜಿನಾಲಿಟಿಯ ಬದುಕೇ ಬೇಕು. ಅದಕ್ಕಾಗಿಯೇ ನಮ್ಮೀ ಹುಡುಕಾಟ ತಿಣುಕಾಟ ಎಲ್ಲಾ, ಹಾಗಂತ ಕೋಟಿ ಕೊಡ್ತೀನಂದರೂ ಮೊಬೈಲ್‌ನ ಪರ್ಮನೆಂಟಾಗಿ ಬಿಡೋಕೆ ಯೋಚಿಸಬೇಕಾದ ಸ್ಥಿತಿಯಲ್ಲಿ ನಾವಿದ್ದೇವೆ. ಅಂದ್ರೆ ತಿಳ್ಕೊಳ್ಳಿ ನಮ್ಮ ಅಂಗೈಲಿರೋ ಮೊಬೈಲಿನ ಕಿಮ್ಮತ್ತು ಎಷ್ಟು ಹಾಗೂ ಅದು ಎಷ್ಟರ ಮಟ್ಟಿಗೆ ನಮ್ಮನ್ನು ಹಿಡಿದಿಟ್ಟಿದೆ ಅಂತ!
ಹಾಗಂತ ಹೇಳಿ ಹೌದು ಅನ್ನೋ ನಿರ್ಧಾರಕ್ಕೆ ಅಷ್ಟು ಸುಲಭವಾಗಿ ಬರಬೇಡಿ! ವಿಷಯ ಏನಂದ್ರೆ ಇಲ್ಲಿ ಟಚ್ ಸ್ಕ್ರೀನ್ ಮೊಬೈಲ್ ಇಟ್ಟುಕೊಂಡೋರೆಲ್ಲಾ ನೆಮ್ಮದಿಯಾಗಿಲ್ಲ ಅಂತ ಅಲ್ಲ ಅಥವಾ ಕೋಟಿ ತಗೊಂಡಾಕ್ಷಣ ನೆಮ್ಮದಿ ಹೋಗಿದೆ ಅಂತಾನೂ ಅಲ್ಲ, ವಿಷಯವೇನೆಂದರೆ ಈಗಿನ ಕಾಲಕ್ಕೆ ಮೊಬೈಲ್ ಬಳಸದೆ ನಾವು ಇರಬಲ್ಲೆವಾ ಅನ್ನೋದು ಸದ್ಯದ ಮಟ್ಟಿಗೆ ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ ಇದು.
ಅಂದ್ರೆ, ಮೊಬೈಲಿಗೆ ನಾವು ಆ ಪರಿ ಅಡಿಕ್ಟ್ ಆಗಿದ್ದೇವೆ ಅಂತನಾ? ಖಂಡಿತಾ ಅಲ್ಲ. ಆದರೆ ಅದಕ್ಕಿಂತಲೂ ಹೆಚ್ಚಾಗಿ ಮೊಬೈಲ್ ನಮ್ಮ ದಿನನಿತ್ಯದ ಅಗತ್ಯಗಳಲ್ಲಿ ತುಂಬಾ ಮುಂಚೂಣಿಯಲ್ಲಿದೆ ಅಂದರೇ ಸರಿ. ಹೌದು. ಅದೇ ವಾಸ್ತವ. ವಿಷಯ ಇರುವುದು ವಾಸ್ತವವನ್ನು ಸರಿಯಾಗಿ ಅರ್ಥೈಸಿಕೊಳ್ಳುವುದರಲ್ಲಿ ಹಾಗೂ ಅದನ್ನು ನಿಭಾಯಿಸುವುದರಲ್ಲಿ ಎಡವುತ್ತಿರುವುದರಲ್ಲಷ್ಟೇ.
ಮೊದಲಿಗೆ ವಾಸ್ತವ ದೃಷ್ಟಿಕೋನದಲ್ಲೇ ನೋಡೋಣ. ಮೊಬೈಲ್ ನಮ್ಮ ದಿನನಿತ್ಯದ ಅಗತ್ಯಗಳಲ್ಲಿ ಮುಂಚೂಣಿಯಲ್ಲಿರುವ ವಸ್ತು, ಆದರೆ ನೆನಪಿರಲಿ, ಅದು ವಸ್ತುವಷ್ಟೇ. ಜೀವ ಇರುವ ಪ್ರಾಣಿ ಅಲ್ಲ. ಇಲ್ಲೇ ನಾವು ತಪ್ಪಾಗಿ ಅರ್ಥೈಸೋದು. ನಾವದನ್ನು ವಸ್ತುವಿನ ಥರ ನೋಡದೆ ಜೀವ ಇರೋ ಮನುಷ್ಯರಿಗಿಂತಲೂ ಹೆಚ್ಚಾಗಿ ಅವಲಂಬಿಸಿದ್ದೇವೆ. ಸಂಬಂಧಗಳಿಗಿಂತಲೂ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟಿದ್ದೇವೆ. ಎಲ್ಲಾ ಸರಿ, ಏನೇ ಆದರೂ ಅದಕ್ಕೂ ಜೀವ ಅಂತ ಬರಿಸಿ ನಮ್ಮ ಮಾತು ಕೇಳುವಂತೆ ಮಾಡಿ ಹೆಗಲ ಮೇಲೆ ಕುಳ್ಳಿರಿಸಿ ಮೆರೆಸಿದವರು ನಾವೇ ಅಲ್ಲವಾ? ಹೌದು, ಅದನ್ನೇ ನಾವೀಗ ಮರೆತಿದ್ದೇವೆ. ಅದೇ ನಮ್ಮ ಪ್ರಾಬ್ಲಮ್, ಅದನ್ನು ಮರೆತಿದ್ದರಿಂದಲೇ ಅದನ್ನು ಹೆಗಲಿಂದ ಇಳಿಸಿಕೊಳ್ಳೋಕ್ಕೆ ಆಗ್ತಿಲ್ಲ ಅಷ್ಟೇ, ಇಳಿಸಿಕೊಳ್ಳೋಕೆ ಹೋದ್ರೂ ಏನೋ ಕಳಕೊಂಡ ಅನುಭವವಾಗಿದೆಯಷ್ಟೆ. ಕಿರೀಟ ತಲೆಗೆ ಭಾರ ಅಂತ ಕಳಚಿ ಇಟ್ಟರೆ ನಮ್ಮ ಅಸ್ತಿತ್ವವೇ ಪ್ರಶ್ನೆಯಾಗಿ ಏಳುತ್ತದೆ ನೋಡಿ. ಹಾಗೆಯೇ ಬಳಿಯಲ್ಲಿ ಸ್ಮಾರ್ಟ್‌ಫೋನ್ ಇಲ್ಲದಿದ್ದಾಗಲೂ ಒಂಥರಾ ಶೂನ್ಯತೆ ಆವರಿಸಿದಂತಾಗುತ್ತದೆ. ಇದು ನಮ್ಮಲ್ಲಿನ ದೌರ್ಬಲ್ಯ. ಹಾಗಾಗಿಯೇ ನಾವಿಂದು ಮನುಷ್ಯ ಸಂಬಂಧಗಳಿಂದ ಮರೆಯಾಗಿ ದೂರ ಇದ್ದರೂ ನಮಗೆ ಏನೂ ಅನ್ನಿಸುವುದಿಲ್ಲ. ಆದರೆ ಅದೇ ಮೊಬೈಲ್ ಒಂದರೆಕ್ಷಣ ಮರೆಯಾದರೆ ಸಾಕು ಚಡಪಡಿಸುವಂತಾಗುತ್ತದೆ.
‘‘ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ’’ ಅನ್ನೋದು ಅಂದಿನ ಕವಿವಾಣಿ, ಹತ್ತಿರವಿದ್ದೂ ದೂರವಾಗುವೆವು ನಮ್ಮ ಮೊಬೈಲ್ ಒಳಗಿನ ಪ್ರಪಂಚದಲ್ಲಿ ಎಂಬುದು ಇಂದಿನ ಚಿತ್ರಣ. ಇವತ್ತು ಕೈಯಲ್ಲೊಂದು ಮೊಬೈಲು ಹಾಗೂ ಅದರೊಳಗೊಂದಿಷ್ಟು ದುಡ್ಡು ಇದ್ದು ಬಿಟ್ಟರೆ ಮನುಷ್ಯನೆಂಬ ಪ್ರಾಣಿಗೆ ಯಾವುದೆಂದರೆ ಯಾವುದರ ಅಗತ್ಯವೂ ಇಲ್ಲ. ಅಷ್ಟೇ ಏಕೆ, ಯಾರೇ ಹತ್ತಿರದಲ್ಲಿದ್ದರೂ ಕಾಣುವುದಿಲ್ಲ. ಒಂದು ಮೊಬೈಲ್ ಆ ತರಹದ್ದೊಂದು ಮನಸ್ಥಿತಿಯನ್ನು ಸೃಷ್ಟಿಸಿಬಿಟ್ಟಿದೆ. ಪರಿಸ್ಥಿತಿ ಹೀಗಿರುವಾಗ ಪ್ರತಿಯೊಬ್ಬರೂ ಬ್ಯುಸಿ. ಫೋನ್ ಕೈಯಲ್ಲಿದ್ದರೆ ಅವರಿಗೆ ಅವರೇ ಬ್ಯುಸಿ ಸ್ವತಃ ಅವರಿಗವರೇ ಸಮಯ ಕೊಟ್ಟುಕೊಳ್ಳೋದಕ್ಕಾಗದಂತಹ ಸ್ಥಿತಿ! ಏನು ಅಂತ ಕೇಳ್ಬೇಡಿ! ಮೊದಲಿಗೆ ಸರಿಯಾಗಿ ಉಸಿರಾಡ್ತಾ ಇದೀರಾ ಅಂತ ನೋಡಿ! ಉಹೂಂ, ಉಸಿರಾಟ ಸತ್ತೇ ಹೋದಂತಿರುತ್ತೆ! ಆದರೂ ಕೈ ಬೆರಳುಗಳು ಕೀಲಿ ಕೊಟ್ಟ ಬೊಂಬೆಯಂತೆ ಮೊಬೈಲ್ ಮೇಲೆ ಕುಣಿದಾಡುತ್ತಿರುತ್ತೆ. ಇಲ್ಲಿ ಕೀಲಿ ಕೊಡುವವರು ಯಾರು, ಬೊಂಬೆ ಯಾರು ಅಂತಲೇ ಗೊತ್ತಾಗದಂತಹ ಸ್ಥಿತಿ! ಅದ್ಯಾವ ಪರಿ ಫನಕಾರ್ಯದಲ್ಲಿ ಮುಳುಗಿ ಹೋಗುತ್ತಿದ್ದೇವೋ ಕಾಣೆ, ತಲೆ ಮೇಲೆ ಆಕಾಶ ಬಿದ್ದರೂ ಗೊತ್ತಾಗದಂತಹ ಮೈಮರೆವು!
ಹೀಗೆ ವಿಕ್ರಮಾದಿತ್ಯನ ಹೆಗಲೇರಿದ ಬೇತಾಳನಂತೆ ಸ್ಮಾರ್ಟ್ ಫೋನ್ ನಮ್ಮ ಹೆಗಲೇರಿ ವರುಷಗಳೇ ಕಳೆದಿವೆ. ಇಳಿಸೋದು ಸ್ವಲ್ಪಕಷ್ಟಕರವಾದ ಮಾತೇ. ಆದರೆ ಕೇವಲ ಹತ್ತು ಹದಿನೈದು ವರುಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ ಅನ್ನುವುದನ್ನು ಮಾತ್ರ ಎಲ್ಲರೂ ನೆನಪಿಸಿಕೊಳ್ಳಬೇಕು. ಆಗ ನಮ್ಮ ದೈನಂದಿನ ದಿನಚರಿ, ಸಂಬಂಧಗಳು ಹೇಗೆ ಸಾಗುತ್ತಿತ್ತು ಅನ್ನುವುದನ್ನು ಒಂದು ಕ್ಷಣ ಎಲ್ಲರೂ ನೆನಪು ಮಾಡಿಕೊಳ್ಳಬೇಕು. (ಇಪ್ಪತ್ತೈದು ವರುಷ ಮೇಲ್ಪಟ್ಟವರು ನೆನಪಿಸಿಕೊಳ್ಳಬಹುದೇನೋ ಯಾಕೆಂದರೆ ಈಗಿನವರು ಹುಟ್ಟುತ್ತಲೇ ಮೊಬೈಲ್ ಜೊತೆಗೆ ಇರ್ತಾರೆ) ಆವಾಗ ನಾವು ಎಲ್ಲಿ ತಪ್ಪುತ್ತಿದ್ದೇವೆ ಅನ್ನೋ ಅರಿವು ಬಂದರೂ ಬರಬಹುದು.
ಹೌದು, ಆಗ ನಾವು ಬಹುತೇಕ ಒಂದೇ ಪ್ರಪಂಚದಲ್ಲಿ ಬದುಕುತ್ತಿದ್ದೆವು. ಆದರೆ ಈಗ...? ಎರಡೆರಡು ಪ್ರಪಂಚದಲ್ಲಿ ಜೀವಿಸುತ್ತಿದ್ದೇವೆ. ಇದೇ ಬಂದಿರೋದು ಸಮಸ್ಯೆ. ದಿನ ಬೆಳಗಾದರೆ ನಮ್ಮ ಮೈಮನಸ್ಸು ಸ್ಮಾರ್ಟ್‌ಫೋನ್ ಎಂಬ ಪ್ರಪಂಚದಲ್ಲೇ ಮುಳುಗೇಳುತ್ತಿದ್ದರೆ ಉಳಿದಂತೆ ಹೊರ ಪ್ರಪಂಚದಲ್ಲಿ ಇದ್ದೇವೆ ಅಷ್ಟೇ. ಹಾಗಾಗಿಯೇ ಇಂದು ಸ್ನೇಹ, ಪ್ರೀತಿ, ಸಂಬಂಧಗಳೆಲ್ಲಾ ಯಾಂತ್ರಿಕವಾಗುತ್ತಿವೆ ಎಂದೆನಿಸುತ್ತಿದೆ. ಈ ಕಾರಣಕ್ಕೋ ಏನೋ, ಆತ್ಮೀಯರೊಡನೆ ನೇರಾನೇರ ಮಾತನಾಡೋ ಸಂದರ್ಭವಿದ್ದಾಗಲೂ ಮೊಬೈಲ್ ಫೋನನ್ನೇ ಹೆಚ್ಚಾಗಿ ಅವಲಂಬಿಸುತ್ತೇವೆ. ಮಾತು ಸಾಕೆನಿಸಿದಾಗ ಚಾಟ್‌ನ ಮೊರೆ ಹೋಗುತ್ತೇವೆ. ಮುಂದೆ ದಿನಕ್ಕೆರಡು ಮಾತ್ರೆ ದಿನಕ್ಕೊಂದು ಡೋಸ್ ಮಾದರಿಯಲ್ಲಿ ಗುಡ್‌ಮಾರ್ನಿಂಗ್, ಗುಡ್‌ನೈಟ್ ಮೆಸೇಜುಗಳನ್ನು ಕೊಟ್ಟುಕೊಂಡು ಸಂಬಂಧಗಳನ್ನು ಮೇಂಟೇನ್ ಮಾಡ್ತಿದ್ದೇವೆ ಅನ್ನೋ ಭ್ರಮೆಯಲ್ಲಿರುತ್ತೇವೆ. ಹಾಗಾಗಿಯೇ ಇವತ್ತು ಯಾರ ಕತೆ ಯಾರಿಗೂ ಗೊತ್ತಿಲ್ಲ, ಯಾರಿಗೂ ಅದು ಬೇಕಾಗಿಯೂ ಇಲ್ಲ. ಹೇಳಿಕೊಳ್ಳೋ ಮನಸ್ಥಿತಿ, ಕೇಳಿಸಿಕೊಳ್ಳೋ ವ್ಯವಧಾನ ಮೊದಲೇ ಇಲ್ಲ. ಪ್ರತಿಯೊಬ್ಬರಿಗೂ ಅವರವರದೇ ಹೆಚ್ಚು ಅನ್ನುವಂತಹ ಮನಸ್ಥಿತಿ. ಇಂತಹ ಪರಿಸ್ಥಿತಿಯಲ್ಲೂ ಬಂಧು ಅಂತ ಹತ್ತಿರ ಇದ್ದು ಮಾತಾಡೋದು ಮತ್ತದೇ ಮೊಬೈಲ್ ಫೋನ್, ಅದರ ಮೂಲಕವೇ ನಮ್ಮೆಲ್ಲಾ ನೋವು ನಲಿವುಗಳನ್ನು ಹೇಳಿಕೊಳ್ಳಬೇಕಾದ ಜರೂರತ್ತು. ಈ ಕಾರಣದಿಂದಲೇ ನಮ್ಮೆಲ್ಲರ ಭಾವನೆ, ವಿಚಾರಗಳಿಂದು ಸಾಮಾಜಿಕ ಜಾಲತಾಣವೆಂಬ ಅಂಗಳದಲ್ಲಿ ಸ್ಟೇಟಸ್ ರೂಪ ಪಡೀತಿವೆ. ಅಲ್ಲೇ ಜಗಜ್ಜಾಹೀರಾಗುತ್ತಿವೆ. ಅದಕ್ಕೆ ಸಂಬಂಧಪಟ್ಟಂತೆ ಯಾರೋ ಒಬ್ಬರು ಯಾವುದೋ ಒಂದು ಇಮೋಜಿಯನ್ನು ಒತ್ತಿದರೂ ಸಾಕು. ನೋಡಿದ ಹಾಗೂ ಆಯಿತು, ಕೇಳಿಸಿಕೊಂಡ ಹಾಗೂ ಆಯಿತು. ಪ್ರತಿಕ್ರಿಯಿಸಿದ ಹಾಗೂ ಆಯಿತು ಎಂಬಲ್ಲಿಗೆ ನಮ್ಮ ಸಂಬಂಧಗಳ ಸಂವಹನ ಬಂದು ನಿಂತಿದೆ!
ಹೌದು, ಇಂತಹದ್ದೊಂದು ಅನಿವಾರ್ಯತೆಯನ್ನು ನಾವೇ ಸೃಷ್ಟಿ ಮಾಡಿಕೊಂಡಿದ್ದೇವೆ. ಕಾರಣ, ದುನಿಯಾ ತುಂಬಾ ಫಾಸ್ಟ್, ಲೈಫ್ ಇಸ್ ಶಾರ್ಟ್ ಅಂತೆಲ್ಲಾ ತಲೆಯಲ್ಲಿ ತುಂಬಿಸಿಕೊಂಡಿದ್ದೇವೆ. ಹಾಗಾಗಿಯೇ ಪ್ರತಿಯೊಂದರಲ್ಲೂ ಫಾಸ್ಟ್, ಪ್ರತಿಯೊಂದರಲ್ಲೂ ಶಾರ್ಟ್ ಆ್ಯಂಡ್ ಸ್ವೀಟ್ ಎಂಬಂತಾಗಿದೆ. ಸ್ವೀಟ್ ತಿಂದಂತೆ ಇರಬೇಕು. ಶುಗರ್ ಬರದಂತಿರಬೇಕು. ಡಯಟ್ ನಡೀತಾ ಇರಬೇಕು. ಇದು ಸ್ಮಾರ್ಟ್‌ಫೋನ್ ಕಾಲಘಟ್ಟದಲ್ಲಿ ಸಂಬಂಧವೊಂದನ್ನು ನಾವು ಸಂಭಾಳಿಸುವ ರೀತಿ, ಕೊನೆಯಲ್ಲಿ ಇರುವ ಒಂದು ಸ್ಮಾರ್ಟ್ ಫೋನ್ ದಿನದಲ್ಲಿ ಅದೆಷ್ಟು ಸಂಬಂಧಗಳನ್ನು ಹೀಗೆ ಸಂಭಾಳಿಸಿರುತ್ತದೆ ಅನ್ನೋದಕ್ಕೆ ನಾವೇ ಗೊತ್ತಿಲ್ಲದ ಸಾಕ್ಷಿಯಾಗಿರುತ್ತೇವೆ. ಹಾಗಾಗಿಯೇ ನಾವೊಂದು ಥರ ಯಂತ್ರದಂತಾಗಿದ್ದೇವೆ. ಇದೇ ಕಾರಣಕ್ಕೋ ಏನೋ ಆತ್ಮೀಯರೆನಿಸಿಕೊಂಡವರು, ಪ್ರೀತಿಪಾತ್ರರಾದವರು ದಿಢೀರ್ ಅಂತ ನೇರಾನೇರ ಬಂದರೂ ಮನಸ್ಸು ಬಿಚ್ಚಿ ಮಾತನಾಡದಂತಾಗುತ್ತೇವೆ. ಮಾತುಗಳಿಗಾಗಿ ತಡಕಾಡುತ್ತೇವೆ. ಹುಡುಕಾಡುತ್ತೇವೆ. ಇಲ್ಲವೇ ಒಂಥರಾ ಅರ್ಜೆಂಟ್ ಮಾಡುತ್ತೇವೆ. ಕಾರಣ, ಕೈಯಲ್ಲಿರುವ ಮೊಬೈಲ್ ಬ್ಯುಸಿ ಎಂಬ ಭ್ರಮೆಯನ್ನು ಪೋಷಿಸುತ್ತಿರುತ್ತದೆ. ಈ ಮೂಲಕ ನಮ್ಮ ಅಹಂಕಾರವನ್ನು ಪೊರೆಯುತ್ತಿರುತ್ತದೆ. ಮುಂದೆ ಏನೇ ಸಂಬಂಧಗಳಲ್ಲಿ ಏರುಪೇರಾದರೂ ಅದೇ ಮೊಬೈಲ್ ಫೋನ್ ಮೂಲಕವೇ ಸರಿಮಾಡಿಕೊಳ್ಳುತ್ತೇವೆ ಎಂಬ ಮನಸ್ಥಿತಿಗೆ ಇಂದು ಬಂದುಬಿಟ್ಟಿದ್ದೇವೆ. ಹಾಗಾಗಿಯೇ ಸಂಬಂಧಗಳನ್ನು ಆತ್ಮೀಯವಾಗಿ ಕಾಯ್ದುಕೊಳ್ಳಲಾರದಂತಹ ಸ್ಥಿತಿ ತಲುಪಿದ್ದೇವೆ. ಗಾಳಿ, ನೀರು, ಪ್ರಕೃತಿ, ಸ್ನೇಹ, ಪ್ರೀತಿ, ಸಂಬಂಧಗಳಿಂದ ಬೆಳೆಯಬೇಕಿದ್ದ ಮನುಷ್ಯ ಇಂದು ಎಲ್ಲವನ್ನೂ ಅಂಗೈಯಗಲದ ಸ್ಮಾರ್ಟ್‌ಫೋನ್‌ನಿಂದ ನೋಡುತ್ತಿರುವುದರಿಂದಲೇ ಸ್ವಂತಿಕೆ, ನೈಜತೆಯನ್ನು ಕಳೆದುಕೊಂಡಂತಾಗಿದ್ದಾನೆ. ನೆಮ್ಮದಿಯನ್ನೂ ಕೆಡಿಸಿಕೊಂಡಿದ್ದಾನೆ. ಹಾಗಾದರೆ ಇದಕ್ಕೆಲ್ಲಾ ಪರಿಹಾರ ಹುಡುಕಲಿಕ್ಕಾಗದಂತಹ ಹಂತಕ್ಕೆ ನಾವು ತಲುಪಿದ್ದೇವಾ...? ಖಂಡಿತಾ ಇಲ್ಲ. ಪರಿಹಾರ ನಮ್ಮಲ್ಲೇ ಇದೆ. ನಾವು ಸ್ವಲ್ಪ ಬುದ್ಧಿ, ವಿವೇಚನೆಗೆ ಕೆಲಸ ಕೊಡಬೇಕಾಗಿದೆ ಅಷ್ಟೇ. ಇಂದಿನ ಕಾಲಮಾನದಲ್ಲಿ ಸ್ಮಾರ್ಟ್ ಫೋನನ್ನು ಸರಿಯಾದ ರೀತಿಯಲ್ಲಿ ಬಳಸೋದು ಗೊತ್ತಿದ್ದರೆ ನಮಗ್ಯಾವ ಸಮಸ್ಯೆಯೂ ಇಲ್ಲ. ಇಲ್ಲಿ ಬಳಸೋದೆಂದರೆ ಒಳಗಡೆ ಏನೇನಿದೆ, ಹೇಗೆಲ್ಲಾ ನೋಡೋದು ಅಂತ ತಿಳಿದುಕೊಳ್ಳೋದಂತಲ್ಲ. ಬದಲಾಗಿ ಇಂದಿನ ಕಾಲಘಟ್ಟಕ್ಕೆ ಅದರ ಅವಶ್ಯಕತೆ ನಮಗೆಷ್ಟಿದೆ ಅನ್ನೋ ಕ್ಲಾರಿಟಿ ಇರೋದು. ಹೌದು, ಎಷ್ಟು ಬಳಸಬೇಕು...? ಯಾಕೆ ಬಳಸಬೇಕು...? ಯಾವಾಗ ಬಳಸಬೇಕು? ಹೇಗೆ ಬಳಸಬೇಕು ಅನ್ನೋ ಕ್ಲಾರಿಟಿ ಪ್ರತಿ ಹಂತದಲ್ಲೂ ಇದ್ದು ಬಿಟ್ಟರೆ ಮೊಬೈಲ್‌ನಿಂದ ನಮಗ್ಯಾವ ಅಪಾಯವೂ ಇಲ್ಲ. ಆದರೆ ಅದೇ ಬುದ್ಧಿ, ವಿವೇಚನೆಯನ್ನು ಪಕ್ಕಕ್ಕಿಟ್ಟು ಕುತೂಹಲಕ್ಕೆ ಅಂತ ಒಮ್ಮೆ ಇಣುಕಿ ನೋಡುತ್ತೇನೆಂದರೆ ಮುಂದೆ ಮಂಗನ ಕೈಲಿ ಮಾಣಿಕ್ಯ ಸಿಕ್ಕಂತೆಯೇ ಆಗೋದು. ಟೈಮ್‌ಪಾಸ್‌ಗೆ ಅಂತ ಮೊಬೈಲ್ ಆನ್ ಮಾಡೋದು ಅಭ್ಯಾಸವಾಗಿಬಿಟ್ಟರೆ ಮುಂದೆ ನಮ್ಮ ಮೈಂಡ್ ಆಫ್ ಆಗುವುದರಲ್ಲಿ ಯಾವುದೇ ಡೌಟು ಬೇಡ, ಯಾವ ಸ್ಮಾರ್ಟ್‌ಫೋನು ಕೂಡಾ ನಮ್ಮ ಹಸಿವು, ದಾಹವನ್ನು ನೀಗಿಸುವುದಿಲ್ಲ. ಬದಲಾಗಿ ತನ್ನನ್ನು ನೋಡುವಷ್ಟು ಹೊತ್ತು ಅದರ ಪರಿವೆ ಇರದ ಹಾಗೆ ಮಾಡಿಬಿಡುತ್ತದೆ. ಯಾವ ಸ್ಮಾರ್ಟ್‌ಫೋನು ಕೂಡಾ ಸ್ನೇಹ, ಪ್ರೀತಿಯನ್ನು ಕಲಿಸುವುದಿಲ್ಲ. ಬದಲಾಗಿ ತನ್ನನ್ನೇ ಪ್ರೀತಿಸುವಂತೆ ಮಾಡಿ ನಮ್ಮತನ ಕಳೆಯುತ್ತಿರುತ್ತದೆ. ಇದು ಅಡಿಕ್ಷನ್, ಇದು ಅಪಾಯಕಾರಿ ಬೆಳವಣಿಗೆ, ಸ್ಮಾರ್ಟ್ ಫೋನನ್ನು ಪಾದರಕ್ಷೆಯನ್ನು ನೋಡುವ ರೀತಿಯಲ್ಲೇ ನೋಡಬೇಕು. ಎಲ್ಲಿಡಬೇಕೋ ಅಲ್ಲೇ ಇಟ್ಟು ಎಲ್ಲಿ ಬಳಸಬೇಕೋ ಅಲ್ಲೇ ಬಳಸಬೇಕು. ಹಾಗಿದ್ದರೇನೆ ಅದು ಚೆಂದ ಹಾಗೂ ಅರ್ಥಪೂರ್ಣ, ಪ್ರತಿಯೊಂದು ವಸ್ತು ಕೂಡಾ ಹಾಗೇ. ಆದರೇನು ಮಾಡೋದು? ಹೆಸರು ಮೊಬೈಲ್ ಅಂತಲ್ಲವಾ...? ಹಾಗಾಗಿ ಜೀವ ಇರೋರನ್ನು ಎಲ್ಲಿಡಬೇಕೋ ಅಲ್ಲಿ ಇಟ್ಟು ಉಳಿದೆಲ್ಲವನ್ನು ಅದರ ಮೂಲಕವೇ ಪಡೆದುಕೊಳ್ಳುತ್ತೇವೆ. ಮತ್ತೆ ನೆಮ್ಮದಿ ಎಲ್ಲಿಂದಬರಬೇಕು? ಸದ್ಯಕ್ಕಿದು ಯೋಚಿಸಬೇಕಾದ ವಿಷಯ.







