ಸಾಲೆತ್ತೂರು ಘಟನೆ ಖಂಡನೀಯ, ಸಮಾಜಘಾತುಕರಿಗೆ ಲಾಭವಾಗದಿರಲಿ: ಮುಸ್ಲಿಮ್ ಜಮಾಅತ್
ಬಂಟ್ವಾಳ: ಯಾವುದೇ ಸಮುದಾಯದ ಗೌರವಾರ್ಹವಾದ ಆಚಾರ ವಿಚಾರಗಳನ್ನು ಅವಮಾನಿಸುವುದು ಖಂಡನಾರ್ಹವಾಗಿದೆ, ಸಾಲೆತ್ತೂರಿನಲ್ಲಿ ಮದುವೆಯ ವರ ಧರಿಸಿದ ಅನಪೇಕ್ಷಿತ ವೇಷಭೂಷಣ ಪ್ರಕರಣವನ್ನು ಕರ್ನಾಟಕ ಮುಸ್ಲಿಮ್ ಜಮಾಅತ್ ಬಂಟ್ವಾಳ ತಾಲೂಕು ಸಮಿತಿ ತೀವ್ರವಾಗಿ ಖಂಡಿಸುವುದಾಗಿ ಪ್ರಕಟನೆಯಲ್ಲಿ ತಿಳಿಸಿದೆ.
ಸಾಲೆತ್ತೂರು ಘಟನೆಯಿಂದ ಅನ್ಯ ಸಮುದಾಯಕ್ಕೆ ಅವಮಾನ ಎನ್ನುವುದಕ್ಕಿಂತ ಮುಸ್ಲಿಮ್ ಸಮುದಾಯದ ಘನತೆಗೆ ಧಕ್ಕೆ ಉಂಟಾಗಿದೆ ಎನ್ನುವುದೇ ಹೆಚ್ಚು ಸೂಕ್ತ. ಅದೇ ರೀತಿ ಸಾಲೆತ್ತೂರು ಮದುವೆಗೆ ಸಂಬಂಧಿಸಿದ ಘಟನೆಯನ್ನು ಮುಂದಿಟ್ಟು ಸಮಾಜದಲ್ಲಿ ಸಾಮರಸ್ಯ ಕದಡಲು ಯತ್ನಿಸುವವರ ನಡೆ ಕೂಡ ಖಂಡನೀಯವಾದುದು ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಪರಿಸ್ಥಿತಿಯ ದುರ್ಲಾಭ ಪಡೆಯಲು ಹವಣಿಸುವ ಸಮಾಜಘಾತುಕ ಶಕ್ತಿಗಳ ಬಗ್ಗೆ ಸಮಾಜದ ಸರ್ವಧರ್ಮೀಯರು ಎಚ್ಚರದಲ್ಲಿರಬೇಕಾಗಿದೆ. ಮದುವೆಯ ನಿಮಿತ್ತ ನಡೆಸಲಾಗುವ ಎಲ್ಲಾ ವಿಧ ಅನಾಚಾರಗಳ ವಿರುದ್ಧ ಮುಸ್ಲಿಂ ಸಮುದಾಯದಲ್ಲಿ
ಉಲಮಾಗಳು ಜಾಗೃತಿ ಮೂಡಿಸುತ್ತಿದ್ದಾರೆ. ಉಲಮಾ ನಾಯಕತ್ವವನ್ನು ಅನುಸರಿಸಿ, ಇಸ್ಲಾಮ್ ಧರ್ಮದ ಮಾರ್ಗಸೂಚಿಯಂತೆ ಮದುವೆ ಕಾರ್ಯಕ್ರಮ ಏರ್ಪಡಿಸಲು ಮುಸ್ಲಿಮ್ ಸಮುದಾಯವು ಒಗ್ಗಟ್ಟಿನಿಂದ ಪ್ರತಿಜ್ಞೆ ಕೈಗೊಳ್ಳುವಂತಾಗಲಿ, ಮುಂದಿನ ದಿನಗಳಲ್ಲಿ ಈ ಬಗ್ಗೆ ಕರ್ನಾಟಕ ಮುಸ್ಲಿಂ ಜಮಾಅತ್ ವ್ಯಾಪಕವಾಗಿ ಜಾಗೃತಿ ಮೂಡಿಸಲಿದೆ ಎಂದು ಸಮಿತಿಯು ಹೇಳಿದೆ.







