ಮದರ್ ತೆರೆಸಾರ ಮಿಶನರೀಸ್ ಆಫ್ ಚಾರಿಟಿಯ ಎಫ್ಸಿಆರ್ಎ ಪರವಾನಿಗೆ ನವೀಕರಣ

ಸಾಂದರ್ಭಿಕ ಚಿತ್ರ (ndtv.com)
ಹೊಸದಿಲ್ಲಿ,ಜ.8: ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್ಸಿಆರ್ಎ)ಯಡಿ ಮದರ್ ತೆರೆಸಾರ ಮಿಶನರೀಸ್ ಆಫ್ ಚಾರಿಟಿಯ ಪರವಾನಿಗೆಯನ್ನು ಕೇಂದ್ರ ಗೃಹ ಸಚಿವಾಲಯವು ನವೀಕರಿಸಿದೆ. ಕೆಲ ದಿನಗಳ ಹಿಂದೆ ಕೇಂದ್ರವು ಕೆಲವು ‘ಪ್ರತಿಕೂಲ ಮಾಹಿತಿ’ಗಳ ಹಿನ್ನೆಲೆಯಲ್ಲಿ ಎಫ್ಸಿಆರ್ಎ ಅಡಿ ಚಾರಿಟಿಯ ನೋಂದಣಿಗೆ ನಿರ್ಬಂಧ ವಿಧಿಸಿತ್ತು.
ಚಾರಿಣಿಯ ಎಫ್ಸಿಆರ್ಎ ಪರವಾನಿಗೆಯನ್ನು ಮರುಸ್ಥಾಪಿಸಲಾಗಿದ್ದು,ಅದು ವಿದೇಶಿ ದೇಣಿಗೆಗಳನ್ನು ಸ್ವೀಕರಿಸಲು ಮತ್ತು ಬ್ಯಾಂಕ್ ಗಳಲ್ಲಿರುವ ಹಣವನ್ನು ವೆಚ್ಚ ಮಾಡಲು ಸಾಧ್ಯವಾಗಲಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಯೋರ್ವರು ತಿಳಿಸಿದರು.
ಮಿಶನರೀಸ್ ಆಫ್ ಚಾರಿಟಿ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮದರ್ ತೆರೆಸಾ ಅವರು 1950ರಲ್ಲಿ ಬಡವರು ಮತ್ತು ನಿರ್ಗತಿಕರಿಗೆ ನೆರವಾಗಲು ಸ್ಥಾಪಿಸಿದ ಕ್ಯಾಥೋಲಿಕ್ ಧಾರ್ಮಿಕ ಸಭೆಯಾಗಿದೆ. ಕೆಲವು ‘ಪ್ರತಿಕೂಲ ಮಾಹಿತಿ’ಗಳನ್ನು ಸ್ವೀಕರಿಸಿದ ಬಳಿಕ ಚಾರಿಟಿಯ ಎಫ್ಸಿಆರ್ಎ ಪರವಾನಿಗೆಯನ್ನು ತಾನು ರದ್ದುಗೊಳಿಸಿರುವುದಾಗಿ ಡಿ.27ರಂದು ಗೃಹ ಸಚಿವಾಲಯವು ತಿಳಿಸಿತ್ತು.
ಮಿಶನರೀಸ್ ಆಫ್ ಚಾರಿಟಿಯ ಯಾವುದೇ ಬ್ಯಾಂಕ್ ಖಾತೆಯನ್ನು ತಾನು ಸ್ತಂಭನಗೊಳಿಸಿಲ್ಲ ಎಂದೂ ಸಚಿವಾಲಯವು ಹೇಳಿತ್ತು,ಆದರೆ ತನ್ನ ಖಾತೆಗಳನ್ನು ಸ್ತಂಭನಗೊಳಿಸುವಂತೆ ಚಾರಿಟಿಯೇ ಖುದ್ದಾಗಿ ಕೋರಿಕೊಂಡಿದೆ ಎಂದು ಎಸ್ಬಿಐ ತಿಳಿಸಿತ್ತು.
ಪರವಾನಿಗೆ ರದ್ದುಗೊಂಡಿದ್ದು ಬಹಿರಂಗಗೊಂಡ ಬಳಿಕ ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಚಾರಿಟಿಯ ಬ್ಯಾಂಕ್ ಖಾತೆಗಳನ್ನು ಸ್ತಂಭನಗೊಳಿಸಿದ್ದಕ್ಕಾಗಿ ಕೇಂದ್ರವನ್ನು ತರಾಟೆಗೆತ್ತಿಕೊಂಡಿದ್ದವು.
ಗೃಹ ಸಚಿವಾಲಯದ ಕ್ರಮದ ಬಳಿಕ ಒಡಿಶಾದ ಮುಖ್ಯಮಂತ್ರಿ ನವೀನ ಪಟ್ನಾಯಕ್ ಅವರು,ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಮಿಶನರೀಸ್ ಆಫ್ ಚಾರಿಟಿಯ ಯಾವುದೇ ಘಟಕವು ಹಣಕಾಸು ಮುಗ್ಗಟ್ಟನ್ನು ಎದುರಿಸದಂತೆ ನೋಡಿಕೊಳ್ಳುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ನಿರ್ದೇಶ ನೀಡಿದ್ದಲ್ಲದೆ,ಅಗತ್ಯವಾದರೆ ಚಾರಿಟಿಗೆ ನೆರವಾಗಲು ಮುಖ್ಯಮಂತ್ರಿಗಳ ಪರಿಹಾರ ನಿಧಿಯನ್ನು ಬಳಸಿಕೊಳ್ಳುವಂತೆ ತಿಳಿಸಿದ್ದರು.
ರಾಜ್ಯದಲ್ಲಿಯ ಡಝನ್ಗೂ ಅಧಿಕ ಸಂಸ್ಥೆಗಳನ್ನು ನಡೆಸಲು ಮಿಶನರೀಸ್ ಆಫ್ ಚಾರಿಟಿಗೆ 78 ಲ.ರೂ.ಗೂ ಅಧಿಕ ಹಣವನ್ನೂ ಪಟ್ನಾಯಕ್ ಬಿಡುಗಡೆಗೊಳಿಸಿದ್ದರು.







