ಇಂದು ಪಂಚರಾಜ್ಯ ಚುನಾವಣಾ ದಿನಾಂಕವನ್ನು ಪ್ರಕಟಿಸಲಿರುವ ಚುನಾವಣಾ ಆಯೋಗ

ಹೊಸದಿಲ್ಲಿ: ಇಂದು ಸಂಜೆ 3.30ಕ್ಕೆ ಗೋವಾ, ಪಂಜಾಬ್, ಮಣಿಪುರ, ಉತ್ತರಾಖಂಡ ಮತ್ತು ಉತ್ತರ ಪ್ರದೇಶ ರಾಜ್ಯಗಳ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಲಿದೆ.
ಉತ್ತರ ಪ್ರದೇಶ ರಾಜ್ಯದಲ್ಲಿ ಆರರಿಂದ ಎಂಟು ಹಂತಗಳಲ್ಲಿ ಮತದಾನ ನಡೆಯಲಿದ್ದು, ಪಂಜಾಬ್‌ನಲ್ಲಿ ಎರಡರಿಂದ ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ. ಮಣಿಪುರದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಗೋವಾ ಮತ್ತು ಉತ್ತರಾಖಂಡದಲ್ಲಿ ಒಂದೇ ಹಂತದಲ್ಲಿ ಮತದಾನ ಮುಗಿಯಲಿದೆ.
ಉತ್ತರಪ್ರದೇಶದಲ್ಲಿ ಸದ್ಯ 1,74,351 ಮತಗಟ್ಟೆಗಳಿವೆ. ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಒಂದೇ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಲು 1200 ಮತದಾರರಿಗೆ ಅವಕಾಶವಿರುತ್ತದೆ. ಈ ಹಿಂದೆ ರಾಜ್ಯದಲ್ಲಿ ಒಟ್ಟು 1,64,472 ಮತಗಟ್ಟೆಗಳಿದ್ದು, ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮತಕೇಂದ್ರಗಳನ್ನು ಹೆಚ್ಚಿಸಲಾಗಿದೆ.
ಉತ್ತರ ಪ್ರದೇಶದ ವಿಧಾನಸಭೆಯ ಅವಧಿ ಮೇ ತಿಂಗಳಲ್ಲಿ ಕೊನೆಗೊಳ್ಳುತ್ತಿದ್ದರೆ, ಇತರ ನಾಲ್ಕು ವಿಧಾನಸಭೆಗಳ ಅವಧಿಯು ಮಾರ್ಚ್‌ನ ಬೇರೆ ಬೇರೆ ದಿನಾಂಕಗಳಲ್ಲಿ ಕೊನೆಗೊಳ್ಳಲಿದೆ.







