ಭಾರತದಲ್ಲಿ ಕೋವಿಡ್ ಸಾವುಗಳು ಅಧಿಕೃತ ಅಂಕಿಅಂಶಗಳಿಗಿಂತ 6 ಪಟ್ಟು ಹೆಚ್ಚಿರಬಹುದು: ಅಧ್ಯಯನ ವರದಿ

ಹೊಸದಿಲ್ಲಿ,ಜ.8: ಭಾರತದಲ್ಲಿ ಕೋವಿಡ್ ಸಾವುಗಳ ನಿಜವಾದ ಸಂಖ್ಯೆ ವರದಿಯಾಗಿದ್ದಕ್ಕಿಂತ 6 ಪಟ್ಟು ಹೆಚ್ಚಾಗಿರಬಹುದು ಎಂದು ಸೈನ್ಸ್ ಜರ್ನಲ್‌ನಲ್ಲಿ ಪ್ರಕಟಗೊಂಡಿರುವ ವರದಿಯೊಂದು ಬೆಟ್ಟು ಮಾಡಿದ್ದು, ಸಾಂಕ್ರಾಮಿಕದಿಂದಾಗಿ ದೇಶದಲ್ಲಿ 32 ಲಕ್ಷ ಸಾವುಗಳು ಸಂಭವಿಸಿವೆ ಎಂದು ಅದು ಅಂದಾಜಿಸಿದೆ. ಸಾಂಕ್ರಾಮಿಕವು ಆರಂಭಗೊಂಡಾಗಿನಿಂದ ಈವರೆಗೆ ದೇಶದಲ್ಲಿ ಒಟ್ಟು 4,83,178 ಕೋವಿಡ್ ಸಾವುಗಳು ಅಧಿಕೃತವಾಗಿ ವರದಿಯಾಗಿವೆ.
ಅಂದಾಜಿಸಲಾಗಿರುವ ಸಾವುಗಳ ಪೈಕಿ ಸುಮಾರು ಶೇ.71 ಅಥವಾ 27 ಲ.ಸಾವುಗಳು ದೇಶಾದ್ಯಂತ ಡೆಲ್ಟಾ ಅಲೆ ಉತ್ತುಂಗದಲ್ಲಿದ್ದ ಕಳೆದ ವರ್ಷದ ಎಪ್ರಿಲ್ ಮತ್ತು ಜೂನ್ ನಡುವೆ ಸಂಭವಿಸಿವೆ ಎಂದು ಅಧ್ಯಯನ ವರದಿಯು ತಿಳಿಸಿದೆ. ವಾಸ್ತವದಲ್ಲಿ ಈ ಅವಧಿಯಲ್ಲಿ ಕೋವಿಡ್ ಸಾವುಗಳ ಪ್ರಮಾಣ ಇತರ ಎಲ್ಲ ಕಾರಣಗಳಿಂದ ಸಂಭವಿಸಿದ್ದ ಒಟ್ಟು ಸಾವುಗಳ ದುಪ್ಪಟ್ಟಿನಷ್ಟಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.
ಭಾರತದ ಅಧಿಕೃತ ಅಂಕಿಅಂಶಗಳಂತೆ ಕೋವಿಡ್ ಸಾವಿನ ದರ ಪ್ರತಿ ಹತ್ತು ಲ.ಜನಸಂಖ್ಯೆಗೆ ಸುಮಾರು 345ರಷ್ಟಿದ್ದು,ಇದು ಅಮೆರಿಕದ ಸಾವಿನ ದರದ ಏಳನೇ ಒಂದು ಭಾಗವಾಗಿದೆ. ಕೋವಿಡ್ ಸಾವುಗಳ ಅಪೂರ್ಣ ಪ್ರಮಾಣೀಕರಣ,ಕೋವಿಡ್ ಸಾವುಗಳನ್ನು ದೀರ್ಘಕಾಲಿಕ ರೋಗಗಳಿಂದ ಉಂಟಾದ ಸಾವುಗಳೆಂದು ತಪ್ಪಾಗಿ ಪರಿಗಣಿಸಿದ್ದು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ವೈದ್ಯಕೀಯ ಸೌಲಭ್ಯವಿಲ್ಲದೆ ಹೆಚ್ಚು ಸಾವುಗಳು ಸಂಭವಿಸಿದ್ದು;ಇವುಗಳಿಂದಾಗಿ ಭಾರತದಲ್ಲಿ ಸಾವುಗಳ ಸಂಖ್ಯೆ ವಾಸ್ತವಕ್ಕಿಂತ ಕಡಿಮೆ ಪ್ರಮಾಣದಲ್ಲಿ ವರದಿಯಾಗಿವೆ ಎಂದು ವ್ಯಾಪಕವಾಗಿ ನಂಬಲಾಗಿದೆ ಎಂದು ವರದಿಯು ತಿಳಿಸಿದೆ.
ಟೊರೊಂಟೊ ವಿವಿಯ ಜಾಗತಿಕ ಆರೋಗ್ಯ ಸಂಶೋಧನಾ ಕೇಂದ್ರದ ಡಾ.ಪ್ರಭಾತ ಝಾ ಮತ್ತು ಡಾರ್ಟ್ವೌತ್ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಡಾ.ಪೌಲ್ ನೊವೊಸಾಡ್ ಸೇರಿದಂತೆ ಭಾರತ,ಕೆನಡಾ ಮತ್ತು ಅಮೆರಿಕಗಳ ಸಂಶೋಧಕರು ಈ ಅಧ್ಯಯನವನ್ನು ನಡೆಸಿದ್ದರು. ಅಧ್ಯಯನದ ಪ್ರಮುಖ ಅಂಶಗಳನ್ನು ಬೆಟ್ಟು ಮಾಡಿರುವ ಡಾ.ನೊವೊಸಾಡ್,ಜಾಗತಿಕ ಕೋವಿಡ್ ಸಾವುಗಳಲ್ಲಿ ಭಾರತವು ಅತ್ಯಂತ ಹೆಚ್ಚಿನ ಪಾಲನ್ನು ಹೊಂದಿದೆ. ಈ ಅಂಶಗಳನ್ನು ಪರಿಗಣಿಸಿ ವಿಶ್ವ ಆರೋಗ್ಯ ಸಂಸ್ಥೆಯು ತನ್ನ ಜಾಗತಿಕ ಅಂಕಿಅಂಶಗಳನ್ನು ಪರಿಷ್ಕರಿಸಬೇಕಿದೆ ಎಂದು ಟ್ವೀಟಿಸಿದ್ದಾರೆ.







